ದೇವರಾಯನ ದುರ್ಗ ಅರಣ್ಯಕ್ಕೆ ಬೇಕಿದೆ ಸಂರಕ್ಷಣೆ
42.27 ಚದುರ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಕಾಡು
-ಉಗಮ ಶ್ರೀನಿವಾಸ್
ತುಮಕೂರು: ಭರ್ತಿ 42.27 ಚದುರ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಸಂರಕ್ಷಣೆ ಬೇಕಾಗಿದೆ.
ಅಪರೂಪದ ಜೀವಸಂಕುಲಗಳು, ಗಿಡಮೂಲಿಕೆಗಳನ್ನು ಒಳಗೊಂಡಿರುವ ದೇವರಾಯನದುರ್ಗ ತುಮಕೂರಿನ ಕೂಗಳತೆ ದೂರದಲ್ಲಿದೆ. ನಾಟ ಕಳವು, ಬೇಟೆಯಿಂದಾಗಿ ಅರಣ್ಯಕ್ಕೆ ಹಾಗೂ ಕಾಡು ಪ್ರಾಣಿಗಳಿಗೆ ಈಗ ಕುತ್ತು ಬಂದಿದೆ.
ಈ ಹಿಂದೆ ಮಾಜಿ ಅರಣ್ಯ ಸಚಿವರ ಗನ್ ಮ್ಯಾನ್ ಒಬ್ಬರು ಮರಗಳನ್ನು ಕಡಿದು ನಾಟ ಕಳವು ಮಾಡುತ್ತಿದ್ದಾಗ ಸಿಕ್ಕಿ ಬಿದ್ದಿದ್ದರು. ಆದರೆ ಎಷ್ಟೋ ಪ್ರಕರಣಗಳು ಗಮನಕ್ಕೆ ಬಾರದಂತೆ ಮುಚ್ಚಿ ಹಾಕಲಾಗುತ್ತಿದೆ ಎಂಬುದು ಅರಣ್ಯದ ಪಕ್ಕದಲ್ಲಿರುವ ಗ್ರಾಮಸ್ಥರ ಅಭಿಪ್ರಾಯವಾಗಿದೆ.
42.27 ಚೆದುರ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಈ ಅರಣ್ಯ ಕಾಯಲು ಇರುವುದು ಬೆರಳೆಣಿಕೆ ಮಂದಿಯಷ್ಟೆ. ವಾರಂತ್ಯ ದಿನಗಳಲ್ಲಿ ಅರಣ್ಯಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ. ನಾಮದ ಚಿಲುಮೆ, ಜಿಂಕೆಯ ವನ, ಯೋಗಾನರಸಿಂಹ, ಭೋಗನರಸಿಂಹ ಹಾಗೂ ಕಿಚ್ಚು ಹಾಯಿಸುವ ಅರಣ್ಯಗಳು ದೇವರಾಯನದುರ್ಗದ ಆಕರ್ಷಣೆಗಳಲ್ಲಿ ಒಂದು. ಆದರೆ ಅರಣ್ಯದ ನಿರ್ವಹಣೆಯಿಲ್ಲದೆ ಸೊರಗುತ್ತಿದೆ.
ವಾರಾಂತ್ಯದಲ್ಲಿ ಬರುವ ಪ್ರವಾಸಿಗರು ಎಗ್ಗಿಲ್ಲದೆ ಮದ್ಯದ ಬಾಟಲಿಗಳನ್ನು ಬಿಸಾಡುತ್ತಿರುವುದು ಸಾಮಾನ್ಯವಾಗಿದೆ. ಅತ್ಯುಪಯುಕ್ತ ಔಷಧಿ ಸಸ್ಯಗಳು ಕೂಡ ನಿರ್ವಹಣೆಯಿಲ್ಲದೆ ಸೊರಗುತ್ತಿದೆ.
ಹುಲಿ ಹೆಜ್ಜೆ ಗುರುತು: ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಹುಲಿಗಳ ಸಂಚಾರ ಇದೆ ಎಂಬುದಕ್ಕೆ ಪುರಾವೆ ಕೂಡ ಸಿಕ್ಕಿದೆ. ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಈ ಭಾಗಕ್ಕೆ ಹುಲಿ ಬರುತ್ತದೆ ಎನ್ನಲಾಗುತ್ತಿದೆ. ಈ ಹಿಂದೆ ಹುಲಿಯ ಹೆಜ್ಜೆ ಗುರುತುಗಳು ಕೂಡ ಇಲ್ಲಿ ಪತ್ತೆಯಾಗಿದೆ. ಹೀಗಾಗಿ ತುಮಕೂರಿಗೆ ಕೂಗಳತೆ ದೂರದಲ್ಲಿರುವ ಈ ಕಾಡನ್ನು ಸಂರಕ್ಷಿಸಬೇಕಾಗಿದೆ.
ಬೇಸಿಗೆಯಲ್ಲಿ ಕಾಡಿಗೆ ಬೆಂಕಿ ಬೀಳುವುದು, ನಿರಂತರವಾಗಿ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿರುವುದು ಮತ್ತು ನಾಟ ಕಳುವಿನಿಂದ ದೇವರಾಯನದುರ್ಗ ಅರಣ್ಯ ಸೊರಗುತ್ತಿದೆ.
ಪ್ರವಾಸಿ ತಾಣ: ಈ ಹಿಂದೆ ತುಮಕೂರು ಜಿಲ್ಲೆಯನ್ನು ಪ್ರವಾಸಿ ತಾಣವಾಗಿ ರೂಪಿಸಬೇಕೆಂಬ ನಿಟ್ಟಿನಲ್ಲಿ ಜಿಲ್ಲಾಡಳಿತ ಆಯ್ಕೆ ಮಾಡಿಕೊಂಡಿದ್ದು ದೇವರಾಯನದುರ್ಗ. ಮಕ್ಕಳಿಗೆ, ಮಧ್ಯವಯಸ್ಕರಿಗೆ ಮತ್ತು ವೃದ್ಧರಿಗೆ ಮುದ ನೀಡುವ ಬಹಳಷ್ಟು ಅಂಶಗಳು ಈ ಕಾಡಿನಲ್ಲಿದೆ. ಹೀಗಾಗಿ ಅರಣ್ಯವನ್ನು ಸಂರಕ್ಷಿಸಬೇಕು ಎಂಬುದು ಪರಿಸರವಾದಿಗಳು ಆಂಬೋಣವಾಗಿದೆ.
ಕಾಡು ಪ್ರಾಣಿಗಳು
ಚಿರತೆ, ಹಂದಿ, ಉಡ, ಮುಂಗುಸಿ, ಜಿಂಕೆ, ಕರಡಿ ಸೇರಿದಂತೆ ಬಹಳಷ್ಟು ಕಾಡು ಪ್ರಾಣಿಗಳು ಈ ದೇವರಾಯನದುರ್ಗದಲ್ಲಿ ಬೀಡು ಬಿಟ್ಟಿವೆ. ಹಾಗೆಯೇ ಅಪರೂಪದ ಹಾವುಗಳು ಕೂಡ ಕಾಡಿನ ತುಂಬಾ ಇದೆ. ಕಣ್ಣಿಗೆ ಮುದ ನೀಡುವ ಥರೇವಾರಿ ಪಕ್ಷಿ ಸಂಕುಲಗಳು ಕೂಡ ದೇವರಾಯನದುರ್ಗ ಅರಣ್ಯದ ವಿಶೇಷ ಆಕರ್ಷಣೆಗಳಲ್ಲಿ ಒಂದು. ಆದರೆ ಜಿಂಕೆ, ಉಡ, ಹಂದಿಯನ್ನು ಕಾಡುಗಳ್ಳರು ಬೇಟೆಯಾಡುತ್ತಿರುವುದರಿಂದ ಕಾಡು ಬರಿದಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

