ಯೋಗೀಶ್ ಭಟ್, ಅಂಗಾರ: 4 ಗೆಲವು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಬಾರಿ ಒಂದೇ ಕ್ಷೇತ್ರ ಹಾಗೂ ಪಕ್ಷದಿಂದ ನಿರಂತರ ಗೆಲವು ಸಾಧಿಸಿದ ದಾಖಲೆ ಬಿಜೆಪಿ ಹೆಸರಲ್ಲಿದೆ.
ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ, ವಿಧಾನಸಭಾ ಉಪಸಭಾಪತಿ ಯೋಗೀಶ್ ಭಟ್ ಮತ್ತು ಸುಳ್ಯ ಶಾಸಕ ಅಂಗಾರ ನಾಲ್ಕನೇ ಬಾರಿ ಅಸ್ತಿತ್ವ ಉಳಿಸಿಕೊಳ್ಳುವ ಮೂಲಕ ಈ ಸಾಧನೆ ಮಾಡಿದ್ದಾರೆ. ಇವರಿಬ್ಬರು ಇದುವರೆಗೆ ಗೆದ್ದಿರುವುದು ಒಂದೇ ಪಕ್ಷ, ಒಂದೇ ಕ್ಷೇತ್ರದಿಂದ ಎನ್ನುವುದು ಗಮನಾರ್ಹ.
ಯೋಗೀಶ್ ಭಟ್ ಮತ್ತು ಅಂಗಾರ 1994, 1999, 2004, 2008ರಲ್ಲಿ ಗೆಲವು ಕಂಡಿದ್ದಾರೆ. ಸುಳ್ಯ ಮೀಸಲು ಕ್ಷೇತ್ರದಲ್ಲಿ ನಾಲ್ಕು ಅವಧಿಯಲ್ಲೂ ಅಂಗಾರ ಒಬ್ಬರೇ ಗೆದ್ದಿರುವುದು ವಿಶೇಷ. ಈ ಬಾರಿ ಇವರಿಬ್ಬರ ಸ್ಪರ್ಧೆಗೆ ಮತ್ತೆ ಪಕ್ಷ ವರಿಷ್ಠರು ಒಪ್ಪಿಗೆ ಸೂಚಿಸಿದ್ದು, ಈ ಚುನಾವಣೆಯಲ್ಲೂ ಅದೇ ಪಕ್ಷ, ಅದೇ ಕ್ಷೇತ್ರದಿಂದ ಅದೃಷ್ಟ ಪರೀಕ್ಷಿಸುವರು.
ರಮಾನಾಥ ರೈ 5 ಬಾರಿ: ಜಿಲ್ಲೆಯಲ್ಲಿ ಅತಿ ಹೆಚ್ಚು ಬಾರಿ ಶಾಸಕರಾದವರು ಕಾಂಗ್ರೆಸ್.ನ ರಮಾನಾಥ ರೈ. ಬಂಟ್ವಾಳ ಒಂದೇ ಕ್ಷೇತ್ರ, ಒಂದೇ ಪಕ್ಷದಿಂದ ಐದು ಬಾರಿ ಗೆದ್ದಿದ್ದಾರೆ. ಆದರೆ ನಿರಂತರವಾಗಿ ಅಲ್ಲ. 1985, 89, 94, 99 ಹಾಗೂ 2008ರಲ್ಲಿ. ಈ ಸಲ ಮತ್ತೆ ರಮಾನಾಥ ರೈ ಆರನೇ ಸಲ ಸ್ಪರ್ಧಾ ಕಣದಲ್ಲಿದ್ದಾರೆ.
ಉಳ್ಳಾಲ ಕ್ಷೇತ್ರದಲ್ಲಿ ಕಾಂಗ್ರೆಸ್.ನ ಯು.ಟಿ.ಫರೀದ್ ನಾಲ್ಕು ಬಾರಿ ಗೆದ್ದರೂ ನಿರಂತರವಾಗಿ ಅಲ್ಲ. 1972, 78 ಬಳಿಕ 99 ಹಾಗೂ 2004ರಲ್ಲಿ ಶಾಸಕರಾಗಿದ್ದರು. ಆದರೆ ಅವಧಿ ಪೂರ್ಣಗೊಳ್ಳುವ ಮುನ್ನವೇ ನಿಧನರಾದರು.
ವಿಟ್ಲ ಕ್ಷೇತ್ರದಿಂದ ಬಿಜೆಪಿಯ ರುಕ್ಮಯ ಪೂಜಾರಿ 1983, 89 ಹಾಗೂ 94ರಲ್ಲಿ ಹೀಗೆ ಮೂರು ಸಲ ಗೆದ್ದಿದ್ದಾರೆ. ಬಳಿಕ ಅವರಿಗೆ ಪಕ್ಷದಿಂದ ಟಿಕೆಟ್ ಸಿಗಲಿಲ್ಲ. ಉಳ್ಳಾಲದಲ್ಲಿ ಬಿ.ಎಂ.ಇದಿನಬ್ಬ 1967, 85 ಹಾಗೂ 89ರಲ್ಲಿ ಶಾಸಕರಾಗಿದ್ದರು. ಮೂಡುಬಿದಿರೆಯಲ್ಲಿ ಅಭಯಚಂದ್ರ ಜೈನ್ 1999, 2004, 2008ರಲ್ಲಿ ಶಾಸಕ. ಈಗ ಮತ್ತೆ ನಾಲ್ಕನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ.
ಎರಡು ಅವಧಿಗೆ ಯಾರ್ಯಾರು?: ಮಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್.ನ ಬ್ಲೇಸಿಯಸ್ ಡಿಸೋಜ 1985 ಹಾಗೂ 89ರಲ್ಲಿ ಶಾಸಕರಾಗಿದ್ದರು.
ಸುರತ್ಕಲ್.ನಿಂದ ಕಾಂಗ್ರೆಸ್.ನ ಸುಬ್ಬಯ್ಯ ಶೆಟ್ಟಿ 1972, 78ರಲ್ಲಿ ಶಾಸಕರು. ವಿಜಯ ಕುಮಾರ್ ಶೆಟ್ಟಿ 1985, 99ರಲ್ಲಿ ಕಾಂಗ್ರೆಸ್ ಶಾಸಕರಾಗಿದ್ದರು. ಮಂಗಳೂರು ಉತ್ತರ ಕ್ಷೇತ್ರ ರಚನೆಯಾದಾಗ 2004, 2008ರಲ್ಲಿ ಬಿಜೆಪಿಯ ಕೃಷ್ಣ ಪಾಲೇಮಾರ್ ಶಾಸಕರಾದರು.
ಪುತ್ತೂರಿನಲ್ಲಿ ಬಿಜೆಪಿಯ ರಾಮ ಭಟ್ 1978, 83ರಲ್ಲಿ, ಕಾಂಗ್ರೆಸ್.ನ ವಿನಯ ಕುಮಾರ್ ಸೊರಕೆ 1985, 89ರಲ್ಲಿ, ಡಿ.ವಿ.ಸದಾನಂದ ಗೌಡ ಬಿಜೆಪಿಯಿಂದ 1994, 99ರಲ್ಲಿ ಶಾಸಕರು. ಬಂಟ್ವಾಳದಲ್ಲಿ ಕಾಂಗ್ರೆಸ್.ನ ಡಾ.ನಾಗಪ್ಪ ಆಳ್ವ 1957, 62ರಲ್ಲಿ ಶಾಸಕರು. ಬೆಳ್ತಂಗಡಿಯಲ್ಲಿ ಕಾಂಗ್ರೆಸ್.ನ ವೈಕುಂಠ ಬಾಳಿಗಾ 1962, 67ರಲ್ಲಿ, ಗಂಗಾಧರ ಗೌಡ 1978, 89ರಲ್ಲಿ ಕಾಂಗ್ರೆಸ್ ಶಾಸಕರಾಗಿದ್ದರು. 1983, 85ರಲ್ಲಿ ವಸಂತ ಬಂಗೇರ ಶಾಸಕರಾಗಿ ಬಿಜೆಪಿ ಬಾವುಟ ಹಾರಿಸಿದ್ದರು. ಸುಳ್ಯದಲ್ಲಿ ಕಾಂಗ್ರೆಸ್.ನ ಕುಶಲ 1985, 89ರಲ್ಲಿ ಶಾಸಕ. ಮೂಡುಬಿದಿರೆಯಲ್ಲಿ 1972, 78ರಲ್ಲಿ ದಾಮೋದರ ಮೂಲ್ಕಿ, 1999, 2004ರಲ್ಲಿ ಕಾಂಗ್ರೆಸ್ ಶಾಸಕ. ಜನತಾ ಪಾರ್ಟಿಯಿಂದ ಅಮರನಾಥ ಶೆಟ್ಟಿ 1983 ಮತ್ತು 85ರಲ್ಲಿ ಶಾಸಕರಾಗಿದ್ದರು.
ಬೇರೆ ಕ್ಷೇತ್ರ, ಬೇರೆ ಪಕ್ಷ: ಮಂಗಳೂರು ದಕ್ಷಿಣದಲ್ಲಿ 1957ರಲ್ಲಿ ಕಾಂಗ್ರೆಸ್.ನಲ್ಲಿ ಗೆದ್ದ ವೈಕುಂಠ ಬಾಳಿಗಾ, 62 ಮತ್ತು 67ರಲ್ಲಿ ಬೆಳ್ತಂಗಡಿಯಲ್ಲಿ ಸ್ಪರ್ಧಿಸಿ ಶಾಸಕರಾಗಿದ್ದರು. ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ತ್ಯಜಿಸಿದ ಬೆಳ್ತಂಗಡಿಯ ವಸಂತ ಬಂಗೇರ 94ರಲ್ಲಿ ಜನತಾದಳದಲ್ಲಿ ಗೆದ್ದು ಶಾಸಕರಾದರು. ಅದೇ ಅವಧಿಯಲ್ಲಿ ಮೂಡುಬಿದಿರೆಯಲ್ಲಿ ಜನತಾಪಕ್ಷ ಬಿಟ್ಟು ಜನತಾದಳದಿಂದ ಅಮರನಾಥ ಶೆಟ್ಟಿ ಸ್ಪರ್ಧಿಸಿ ಗೆದ್ದರು. 1967ರಲ್ಲಿ ಸುಳ್ಯದಲ್ಲಿ ರಾಮಚಂದ್ರ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. 1978ರಲ್ಲಿ ವಿಟ್ಲದಲ್ಲಿ ಸ್ಪರ್ಧಿಸಿ ಗೆದ್ದಿದ್ದ ಬಿ.ಎ.ಮೊಯ್ದಿನ್ ಒಮ್ಮೆ ಮಾತ್ರ ಕಾಂಗ್ರೆಸ್ ಶಾಸಕರಾಗಿದ್ದರು.
-ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

