ಉಡುಪಿ

ರೋಟರಿ ಸಹಯೋಗದಲ್ಲಿ ಶೌಚಾಲಯ

Published On :

ಮಣಿಪಾಲ: ಗ್ರಾಮವಾರು ಸಮೀಕ್ಷೆಯ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಸುಮಾರು 27 ಸಾವಿರ ಮನೆಗಳು ಶೌಚಾಲಯ ರಹಿತವಾಗಿದ್ದು, ನಿರ್ಮಲ ಭಾರತ ಅಭಿಯಾನ, ಜಿಲ್ಲಾಡಳಿತ ಹಾಗೂ ರೋಟರಿ ಕ್ಲಬ್‌ಗಳ ಸಹಭಾಗಿತ್ವದಲ್ಲಿ ವರ್ಷಾಂತ್ಯದೊಳಗೆ ಉಡುಪಿ ಜಿಲ್ಲೆಯ ಎಲ್ಲಾ ಮನೆಗಳೂ ಕಡ್ಡಾಯವಾಗಿ ಶೌಚಾಲಯ ಇರುವ ಮನೆಗಳಾಗಿ ಪರಿವರ್ತಿಸುವ ಯೋಜನೆ ಕೈಗೊಳ್ಳಲಾಗಿದೆ. ಈ ಯೋಜನೆ ಯಶಸ್ಸಿಗೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು, ಸಾರ್ವಜನಿಕರ ಪ್ರೋತ್ಸಾಹ ಅಗತ್ಯ ಎಂದು ಉಡುಪಿ ಜಿಪಂ ಅಧ್ಯಕ್ಷ ಉಪೇಂದ್ರ ನಾಯಕ್ ಹೇಳಿದ್ದಾರೆ.
ಅವರು ಇಲ್ಲಿನ ಜಿ.ಪಂ. ಸಭಾಂಗಣದಲ್ಲಿ ರೋಟರಿ ಮತ್ತು ಜಿಲ್ಲಾಡಳಿತ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ 38 ರೋಟರಿ ಕ್ಲಬ್ಬುಗಳ ಪದಾಧಿಕಾರಿಗಳಿಗೆ- ಮಾಹಿತಿ ಹಕ್ಕು- ಕಡ್ಡಾಯ ಮತದಾನ ಹಾಗೂ ಮತದಾರರ ನೋಂದಣಿ, ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ನಡೆಸಬಹುದಾದ ಸಮಾಜ ಸೇವಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲಾ ಗವರ್ನರ್ ಎಸ್. ಗುರುರಾಜ್ ಮೈಸೂರು ಮಾತನಾಡಿ, ಅಂತಾರಾಷ್ಟ್ರೀಯ ರೋಟರಿಯಿಂದ ಆರೋಗ್ಯ ಜಾಗೃತಿ, ಶೈಕ್ಷಣಿಕ ಪ್ರಗತಿ ಹಾಗೂ ಬಡತನ ನಿರ್ಮೂಲನಕ್ಕಾಗಿ ಹಲವಾರು ಯೋಜನೆಗಳಿದ್ದು, ಸ್ಥಳೀಯ ಸರ್ಕಾರದೊಂದಿಗೆ ಸೇರಿ ಅಭಿವೃದ್ಧಿ ಕಾರ್ಯ ನಡೆಸಲು ರೋಟರಿ ಸಿದ್ಧವಾಗಿದ್ದು, ರೋಟರಿ ಜಿಲ್ಲಾ ಗ್ರ್ಯಾಂಟ್ ಮತ್ತು ಗ್ಲೋಬಲ್ ಗ್ರ್ಯಾಂಟ್ ಮೂಲಕ ಸಂಪನ್ಮೂಲ ವಿನಿಯೋಗಿಸಲು ಅವಕಾಶವಿದೆ ಎಂದರು.
ಜಿ.ಪಂ. ಮು.ಕಾ.ನಿ. ಅಧಿಕಾರಿ ಎಸ್. ಎ. ಪ್ರಭಾಕರ ಶರ್ಮ ಮಾತನಾಡಿ, ರೋಟರಿ ಸಂಸ್ಥೆಗಳು ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವಾಕಾರ್ಯಗಳಲ್ಲಿ ಸಲ್ಲಿಸುತ್ತಿರುವ ಸೇವೆ ಮಾದರಿಯಾಗಿದ್ದು, 'ರೋಟರಿ ಅಂದರೆ ಪಲ್ಸ್ ಪೊಲಿಯೋ ಎಂಬ ಮಾತು ಮುಂದಿನ ದಿನಗಳಲ್ಲಿ 'ರೋಟರಿ ಅಂದರೆ ಪ್ರಗತಿ' ಎನ್ನುವಂತಾಗಬೇಕು. ಕೇವಲ ಶೌಚಾಲಯ ನಿರ್ಮಾಣ ಮಾತ್ರವಲ್ಲದೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಜಿಲ್ಲಾಡಳಿತದೊಂದಿಗೆ ರೋಟರಿ ಸಂಸ್ಥೆಗಳು ಸಹಕರಿಸಬೇಕು ಎಂದರು.
ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ರೋಟರಿ ಜಿಲ್ಲಾ ಮಾಹಿತಿ ಹಕ್ಕು ಸಮಿತಿ ಜಿಲ್ಲಾಧ್ಯಕ್ಷ ಬಿ. ಪುಂಡಲೀಕ ಮರಾಠೆ ಪ್ರಾಸ್ತಾವಿಕ ಮಾತುಗಳಲ್ಲಿ ಕಾರ್ಯಾಗಾರದ ಉದ್ದೇಶ ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಿರ್ವ ರೋಟರಿ ಅಧ್ಯಕ್ಷ ಲಿಯೊ ನೊರೋನ್ನಾ ವಹಿಸಿದ್ದರು. ವಲಯ 2ರ ಸಹಾಯಕ ಗವರ್ನರ್ ಎಂ. ಮಹೇಶ್ ಕುಮಾರ್ ಸ್ವಾಗತಿಸಿದರು.
ವಲಯ 3ರ ಸಹಾಯಕ ಗವರ್ನರ್ ಮಾಧವ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಲಯ 1ರ ಸಹಾಯಕ ಗವರ್ನರ್ ಮಹಾಬಲೇಶ್ವರ ಭಟ್ ವಂದಿಸಿದರು. ಶಿರ್ವ ರೋಟರಿ ಪೂರ್ವಾಧ್ಯಕ್ಷ ಕೆ. ಆರ್. ಪಾಟ್ಕರ್, ರಘುಪತಿ ಐತಾಳ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.