ಉಡುಪಿ: ಸಾಮೂಹಿಕ ಉಪನಯನ
ಉಡುಪಿ: ಇಲ್ಲಿನ ಶ್ರೀ ಕೃಷ್ಣ ಮಠ ರಾಜಾಂಗಣದಲ್ಲಿ ಉಡುಪಿ ಮತ್ತು ಕಾರ್ಕಳ ಘಟಕದ ಜೋಗಿ ಸಮಾಜ ಸೇವಾ ಸಮಿತಿ ವತಿಯಿಂದ ನಡೆದ ಉಚಿತ ಸಾಮೂಹಿಕ ದೀಕ್ಷಾ (ಉಪನಯನ) ಸಮಾರಂಭ ಭಾನುವಾರ ನಡೆಯಿತು.
ಈ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇಂದಿನ ಎಳೆಯ ಮಕ್ಕಳಲ್ಲಿ ಹರಿಕೀರ್ತನೆ, ಭಕ್ತಿ ಗೀತೆ ಇನ್ನಿತರ ಸಂಸ್ಕಾರಗಳನ್ನು ಕಲಿಸಬೇಕು. ಇದರಿಂದ ಮುಂದೆ ಉತ್ತಮ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಮುಖ್ಯವಾಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಲಿಯುವ ಕೆಲವು ಮಕ್ಕಳಿಗೆ ಈ ರೀತಿ ಸಂಸ್ಕಾರಗಳನ್ನು ಕಲಿಸುವ ಅಗತ್ಯತೆ ಇದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜೋಗಿ ಸಮಾಜ ಸೇವಾ ಸಮಿತಿ ಅಧ್ಯಕ್ಷ ಬಾರ್ಕೂರು ಗಣೇಶ ಬಳೆಗಾರ್, ಜೋಗಿ ಸಮಾಜದ ಅದೆಷ್ಟೋ ಯುವಕರು ರಾಜಕೀಯ, ಸಾಮಾಜಿಕ ಇನ್ನಿತರ ಕ್ಷೇತ್ರಗಳಲ್ಲಿ ಮುಂದೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಈ ಯುವಕರೆಲ್ಲಾ ಒಂದಾಗಿ ಸಂಘಟನೆಯನ್ನು ಬಲಪಡಿಸಬೇಕು. ಬಡಬಗ್ಗರಿಗೆ ಸಹಾಯ ಮಾಡಲು ಮುಂದೆ ಬರಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಯಾವುದೇ ಭಯವಿಲ್ಲದೆ ಪಾಲ್ಗೊಳ್ಳಲು ಆಸಕ್ತಿ ವಹಿಸಬೇಕು ಎಂದು ತಿಳಿಸಿದರು.
ಕೊಂಚಾದ್ರಿಯ ಸಿದ್ಧಪೀಠ ಮಠಾಧೀಶ ಶ್ರೀ ಯೋಗಿಫೀರ್ ಜಗದೀಶ್ನಾಥ್ ಜೀ ದೀಕ್ಷಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಶಾಖಾ ಮಠಾಧೀಶ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಮಾಜಿ ಶಾಸಕ ರಘುಪತಿ ಭಟ್, ಹುಬ್ಬಳ್ಳಿಯ ಅಖಿಲ ಕರ್ನಾಟಕ ಜೋಗಿ ಮಹಾಮಂಡಳ ಅಧ್ಯಕ್ಷ ವೈ.ಡಿ. ಮಧುರ್ಕರ್, ಉದ್ಯಮಿ ಕಂಡ್ಲೂರು ನರಸಿಂಹ ಜೋಗಿ ಮತ್ತಿತರರು ಇದ್ದರು.
ಸಮಿತಿಯ ಮಾಜಿ ಅಧ್ಯಕ್ಷ ಶಾಂತಿನಾಥ ಜೋಗಿ ಸ್ವಾಗತಿಸಿದರು. ಪ್ರಭಾಕರ ಜೋಗಿ ನಿರೂಪಿಸಿ, ಕೋಶಾಧಿಕಾರಿ ಹರೀಶ್ಚಂದ್ರ ಜೋಗಿ ಕಟಪಾಡಿ ವಂದಿಸಿದರು.
ಸಭಾ ಕಾರ್ಯಕ್ರಮದ ಮೊದಲು ಉಮೇಶ್ ಜೋಗಿ ಕದ್ರಿ ಮಠ ಇವರಿಂದ ದೀಕ್ಷಾ ಕಾರ್ಯಕ್ರಮ, ನಂತರ ದೀಕ್ಷೆ ಪಡೆದುಕೊಂಡ ವಟುಗಳಿಂದ ರಥಬೀದಿಯಲ್ಲಿ ಪ್ರದಕ್ಷಿಣೆ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಒಟ್ಟು 113 ಮಕ್ಕಳಿಗೆ ದೀಕ್ಷೆ (ಉಪನಯನ) ನೀಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

