ಪಂಚಾಯತ್ ಕಾಯ್ದೆ ತಿದ್ದುಪಡಿ
ಉಡುಪಿ: ನೂತನ ಕಾಂಗ್ರೆಸ್ ಸರ್ಕಾರ ಮಂಡಿಸಿರುವ ಪಂಚಾಯತ್ ಕಾಯ್ದೆ ತಿದ್ದುಪಡಿ ಪ್ರಸ್ತಾಪ ತಕ್ಷಣ ಕೈ ಬಿಡಬೇಕು ಎಂದು ಆಗ್ರಹಿಸಿರುವ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇಲ್ಲದಿದ್ದಲ್ಲಿ ಬಿಜೆಪಿ ಬಹುಮತ ಇರುವ ವಿಧಾನ ಪರಿಷತ್ನಲ್ಲಿ ಈ ತಿದ್ದಪಡಿ ಪ್ರಸ್ತಾಪವನ್ನು ಸೋಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ಬಹುಮತ ಇರುವ ವಿಧಾನಸಭೆಯಲ್ಲಿ ಈ ಪ್ರಸ್ತಾಪಕ್ಕೆ ವಿರೋಧ ಪಕ್ಷಗಳ ಒಕ್ಕೊರಲಿನ ವಿರೋಧ ಇದ್ದರೂ ಅದನ್ನು ನಿರ್ಲಕ್ಷ್ಯಿಸಿ ತಿದ್ದುಪಡಿಗೆ ಮಂಜೂರಾತಿ ಪಡೆದಿದೆ. ಈ ಮೂಲಕ ಕಾಂಗ್ರೆಸ್ ಸರ್ಕಾರ ಅಮಾಯಕ ಗ್ರಾಮ ಪಂಚಾಯಿತಿ ಸದಸ್ಯರ ಮೇಲೆ ಗದಾಪ್ರಹಾರ ಮಾಡುವುದಕ್ಕೆ ಹೊರಟಿದೆ ಎಂದು ಆರೋಪಿಸಿದರು.
ಸದಸ್ಯತ್ವ ರದ್ದು ಅಪಾಯ: ಈ ತಿದ್ದುಪಡಿಯ ಪ್ರಕಾರ, ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ವರ್ಷಕ್ಕೆ 2 ಬಾರಿ ತಾನು ಪ್ರತಿನಿಧಿಸುವ ವಾರ್ಡ್ನ ಸಭೆ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷ 2 ಬಾರಿ ಗ್ರಾಮ ಸಭೆಗಳನ್ನು ಕಡ್ಡಾಯವಾಗಿ ನಡೆಸಲೇ ಬೇಕು. ಇಲ್ಲದಿದ್ದಲ್ಲಿ ಅವರ ಗ್ರಾಮ ಪಂಚಾಯಿತಿ ಸದಸ್ಯತ್ವ ರದ್ದುಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು. ಈ ತಿದ್ದಪಡಿ ಜಾರಿಗೆ ಬಂದರೆ ಗ್ರಾ.ಪಂ. ಸದಸ್ಯರ ಸದಸ್ಯತ್ವ ರದ್ದುಗೊಳಿಸುವಲ್ಲಿ ರಾಜಕೀಯ ಪ್ರವೇಶವಾಗುತ್ತದೆ. ಸಭೆಗಳನ್ನು ನಡೆಸುವುದು ಗ್ರಾಮ ಪಂಚಾಯಿತಿ ಸದಸ್ಯರ ಅಥವಾ ಅಧ್ಯಕ್ಷರ ಬದ್ಧತೆಯಲ್ಲ. ದಿನಾಂಕ ನಿಗದಿ ಮಾಡುವುದು, ಸಭೆ ಕರೆಯುವುದು ಆಯಾ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳ ಬದ್ಧತೆಗೆ ಸಂಬಂಧಿಸಿದ್ದು ಎಂದು ಕೋಟ ಅಭಿಪ್ರಾಯಪಟ್ಟರು.
ಲೋಕಸಭೆ, ವಿಧಾನಸಭೆ ಅಥವಾ ನಗರಸಭೆಯಂತಹ ನಗರಾಡಳಿತ ಸಂಸ್ಥೆಗಳಲ್ಲಿ ಸಭೆಗಳು ನಡೆಯಲಿದ್ದಾಗ ಅಲ್ಲಿನ ಸದಸ್ಯರನ್ನು ಅದಕ್ಕೆ ಹೊಣೆ ಮಾಡಲಾಗುವುದಿಲ್ಲ ಅಥವಾ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ. ಹಾಗಿರುವಾಗ ಗ್ರಾ.ಪಂ. ಸದಸ್ಯರ ಮೇಲೆ ಇಂತಹ ಬ್ರಹ್ಮಾಸ್ತ್ರದ ಪ್ರಯೋಗ ಸರಿಯಲ್ಲ ಎಂದು ಕೋಟ ತಮ್ಮನ್ನು ಸಮರ್ಥಿಸಿಕೊಂಡರು.
ಇತರ ಸಂಸ್ಥೆಗಳಿಗೂ ತಿದ್ದುಪಡಿ ತರಲಿ: ಗ್ರಾ.ಪಂ. ಸದಸ್ಯರ ಹೊಣೆ ಹೆಚ್ಚಿಸುವುದಕ್ಕಾಗಿ ಈ ತಿದ್ದುಪಡಿ ಮಾಡುವುದಿದ್ದರೆ ಲೋಕಸಭೆ, ವಿಧಾನಸಭೆ, ನಗರಾಡಳಿತ ಸಂಸ್ಥೆಗಳ ಸದಸ್ಯರಿಗೂ ಅನ್ವಯವಾಗುವಂತೆ ಆಯಾ ಸಂಸ್ಥೆಗಳ ಕಾಯ್ದೆಗಳಿಗೆ ತಿದ್ದಪಡಿಗಳಾಗಲಿ ಎಂದು ವಾದಿಸಿದರು.
ರಾಜ್ಯದಲ್ಲಿ 5,628 ಗ್ರಾಮ ಪಂಚಾಯಿತಿಗಳಲ್ಲಿ 93,000 ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಅಂದರೆ ಸರಾಸರಿ ಶಾಸಕರೊಬ್ಬರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರಾಸರಿ 400 ಮಂದಿ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಈ ತಿದ್ದುಪಡಿ ವಿರೋಧಿಸದೆ ಮೌನವಾಗಿ ಬೆಂಬಲ ಸೂಚಿಸುವ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಶಾಸಕರು ತಾವು ತಮ್ಮ ಕ್ಷೇತ್ರದ ಗ್ರಾಮ ಪಂಚಾಯಿತಿ ಸದಸ್ಯರ ಬೆಂಬಲವಿಲ್ಲದೆ ಗೆಲ್ಲುವುದು ಸಾಧ್ಯವಿರಲಿಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಆದ್ದರಿಂದ ತಾನು ಕಾಂಗ್ರೆಸ್ ಪಕ್ಷದ ಶಾಸಕರ ಮೌನವನ್ನು ಖಂಡಿಸುತ್ತೇನೆ ಎಂದು ಹೇಳಿದರು.
ತಾನು ವಿಧಾನ ಪರಿಷತ್ನಲ್ಲಿ ಪಂಚಾಯತ್ ಸಂಸ್ಥೆಗಳ ಸದಸ್ಯರ ಪ್ರತಿನಿಧಿಯಾಗಿರುವುದರಿಂದ ಅವರನ್ನು ರಕ್ಷಿಸುವುದು ತನ್ನ ಕರ್ತವ್ಯ. ಆದ್ದರಿಂದಲೂ ತಾನು ಈ ಪ್ರಸ್ತಾವಿತ ತಿದ್ದುಪಡಿಯನ್ನು ವಿರೋಧಿಸುತ್ತಿದ್ದೇನೆ ಎಂಬುದನ್ನೂ ಕೋಟ ಅವರು ಒಪ್ಪಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

