ಉಡುಪಿ

ಕಡಲಾಳ ತರಬೇತಿ ನಿರತ ಕರಾವಳಿ

Published On :

ಕಡಲಾಳ ತರಬೇತಿ ನಿರತ ಕರಾವಳಿ
ಕಾವಲುಪಡೆ ಪೇದೆ ಮುಳುಗಿ ಸಾವು
ಕುಂದಾಪುರ: ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದ ಸಮೀಪ ಗುರುವಾರ ಸಂಜೆ ತರಬೇತಿ ನಿರತ ಕರಾವಳಿ ಕಾವಲು ಪಡೆಯ ಪೇದೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಕುಂದಾಪುರ ತಾಲೂಕಿನ ಹುಣ್ಸೆಮಕ್ಕಿ ಗ್ರಾಮದ ನಿವಾಸಿ ಭಾಸ್ಕರ್ ಕುಲಾಲ್ (34) ಮೃತರು.
ಅವರು ಸಮುದ್ರದಾಳದಲ್ಲಿ ತಾಂತ್ರಿಕ ವೈಫಲ್ಯದಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಅವರ ಅಂತ್ಯ ಸಂಸ್ಕಾರ ಹುಟ್ಟೂರು ಹುಣ್ಸಮಕ್ಕಿಯಲ್ಲಿ ಶುಕ್ರವಾರ ಮದ್ಯಾಹ್ನ ಸಕಲ ಪೊಲೀಸ್ ಗೌರವದೊಂದಿಗೆ ನೆರವೇರಿತು.
ಭಾಸ್ಕರ್ ಹುಣ್ಸೆಮಕ್ಕಿ ನಿವಾಸಿಗಳಾದ ನಾಗು ಕುಲಾಲ್-ಪಾರ್ವಕಿ ದಂಪತಿ ಪುತ್ರ. ಅವರಿಗೆ ಪತ್ನಿ ಪೂರ್ಣಿಮಾ, ಇಬ್ಬರು ಪುಟ್ಟ ಮಕ್ಕಳು, ಓರ್ವ ಸಹಾಗೂ ಓರ್ವ ಸಹೋದರ, ಇಬ್ಬರು ಸಹೋದರಿಯರು ಇದ್ದಾರೆ.
ಘಟನೆ ವಿವರ:  ಸುಮಾರು 11 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾಸ್ಕರ್, ಪ್ರಸ್ತುತ ಉಡುಪಿ ತಾಲೂಕಿನ ಮಲ್ಪೆಯ ಕರಾವಳಿ ಕಾಲು ಪಡೆಯಲ್ಲಿ ಸೇವೆಯಲ್ಲಿದ್ದರು.
ಅವರು ಮುರ್ಡೇಶ್ವರದ ಸಮುದ್ರದಲ್ಲಿರುವ ನೇತ್ರಾಣಿಗುಡ್ಡೆ ದ್ವೀಪದಲ್ಲಿ ಐದು ದಿನಗಳ ನೀರಿನಾಳದ ಈಜು ತರಬೇತಿ ಪಡೆಯುತ್ತಿದ್ದರು. ಕೊನೆಯ ದಿನವಾದ ಗುರುವಾರ ಸಂಜೆ ದಿನದ ತರಬೇತಿಯ ಭಾಗವಾಗಿ ಮುಖಕ್ಕೆ ಆಕ್ಸಿಜನ್ ಮಾಸ್ಕ್ ಧರಿಸಿ 15 ಮೀಟರ್ ಆಳಕ್ಕೆ ಇಳಿದಿದ್ದರು. ಆದರೆ ಆಕ್ಸಿಜನ್ ಸಿಲಿಂಡರ್ ಕೈಕೊಟ್ಟು ಉಸಿರುಗಟ್ಟಿ ನೀರಿನಲ್ಲಿಯೇ ಮೃತಪಟ್ಟಿದ್ದಾರೆ.
ನಿರ್ಲಕ್ಷ್ಯ ಕಾರಣವೇ?: ಸಾಕಷ್ಟು ರಕ್ಷಣಾ ವ್ಯವಸ್ಥೆಗಲಿಲ್ಲದೆ ಅತ್ಯಂತ ಅಪಾಯಕಾರಿಯಾದ ಈ ತರಬೇತಿಗೆ ಪೊಲೀಸ್ ಸಿಬ್ಬಂದಿಯನ್ನು ಒಳಪಡಿಸಲಾಗಿತ್ತು, ಆದ್ದರಿಂದಲೇ ತಮ್ಮ ಮನೆಯ ಮಗನ ಸಾವು ಸಂಭವಿಸಿದೆ ಎಂದು ಭಾಸ್ಕರನ ಮನೆಯವರು ಆರೋಪಿಸಿದ್ದಾರೆ.
ಪಡಿ ಎಂಬ ಸಂಸ್ಥೆಯಿಂದ ಈ ತರಬೇತಿ ನಡೆಯುತ್ತಿದ್ದು, ತರಬೇತಿ ಅಧಿಕಾರಿ ಅಮಾನವೀಯತೆಯಿಂದ ಕಠಿಣವಾಗಿ ನಡೆದುಕೊಳ್ಳುತ್ತಿದ್ದ, ಆಗುವುದಿಲ್ಲ ಎಂದರೂ ಬಿಡುತ್ತಿರಲಿಲ್ಲ. ಘಟನಾ ಸ್ಥಳದಿಂದ ದಡಕ್ಕೆ ತಲುಪಲು ಸುಮಾರು ಒಂದುವರೆ ತಾಸು ಮಾರ್ಗವಿದ್ದು, ತಕ್ಷಣ ಚಿಕಿತ್ಸೆ ನೀಡುವುದಕ್ಕೆ ಸಾಧ್ಯವಾಗಿಲ್ಲ ಎಂದು ಭಾಸ್ಕರ್ ಕುಟುಂಬಿಕರು ಆರೋಪ ಮಾಡಿದ್ದಾರೆ.   ರಬೇತಿ ಸಂಸ್ಥೆ ಮುಖ್ಯಸ್ಥ ಆಂಡಿ ಎಂಬವರ ವಿರುದ್ಧ ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.



ಸಾಯುವ ವೇಳೆಗೆ ಬಂತು ಬಡ್ತಿ!
ವಿಪರ್ಯಾಸ ಎಂದರೆ, ಅತ್ತಲಿಂದ ಭಾಸ್ಕರ್ ಸಾವಿನ ಸುದ್ದಿ ಬಂದರೆ, ಇತ್ತ ಭಾಸ್ಕರನನ್ನು ಪೇದೆ ಸ್ಥಾನದಿಂದ ಮುಖ್ಯಪೇದೆಯಾಗಿ ಬಡ್ತಿ ಹೊಂದಿರುವ ಬಗ್ಗೆ ಆದೇಶ ಪತ್ರ ಬಂದಿತ್ತು. ಆದರೆ ವಿಧಿಯಾಟ ಎಂದರೆ ಈ ಸಂತಸ ಅನುಭವಿಸುವುದಕ್ಕೆ ಭಾಸ್ಕರ ಇರಲಿಲ್ಲ.
ಭಾಸ್ಕರ್ ಮನೆಯಲ್ಲಿ ಬಡತನ ತಾಂಡವವಾಡುತ್ತಿದ್ದು, ಸಾಲ ಮಾಡಿ ಮಕ್ಕಳನ್ನು ಓದಿಸಿದ್ದ ತಂದೆ ತಾಯಿಯರ ಆರೋಗ್ಯ ಕೂಡ ಸರಿಯಾಗಿಲ್ಲ. ಸಹೋದರ ಸಹೋದರ ಬೆಂಗಳೂರಿನಲ್ಲಿ ನೆಲಸಿದ್ದು ಅಪಘಾತದಿಂದಾಗಿ ಕೆಲಸ ಮಾಡಲು ಅಶಕ್ತರಾಗಿದ್ದಾರೆ. ಆದ್ದರಿಂದ ಮನೆಯ ಜವಾಬ್ದಾರಿ ಪೂರ್ಣ ಭಾಸ್ಕರ್ ಮೇಲೆ ಇತ್ತು.
ಭಾಸ್ಕರ್ ಕುಲಾಲ್ ಮನೆಗೆ ಶುಕ್ರವಾರ ಬೆಳಗ್ಗೆ ಕರಾವಳಿ ಕಾವಲು ಪಡೆ ಐ.ಜಿ. ಭಾಸ್ಕರ್  ರಾವ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ನೀಡಿ ಸೂಕ್ತ ನ್ಯಾಯ ಹಾಗೂ ಪರಿಹಾರದ ಭರವಸೆ ನೀಡಿದರು.
ಪಡೆಯ ಕರಾವಳಿ ವಿಭಾಗದ ಎಸ್ಪಿ ಎಮ್.ಐ. ಜಮೀಲ್, ಡಿಎಸ್ಪಿ ಎಚ್. ಡಿ. ಮೆಂಡೋನ್ಸಾ, ಇನ್‌ಸ್ಪೆಕ್ಟರ್ ನಾಗರಾಜ್ ಮುಂತಾದವರು ಭೇಟಿ ನೀಡಿ ಮೃತರಿಗೆ ಅಂತಿಮ ನಮನ ಸಲ್ಲಿಸಿದರು.
ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.