ಉಡುಪಿ

ಹತ್ಯಾಚಾರ, ಮಿಥ್ಯಾರೋಪ ದುಃಖಕರ

Published On :

ಉಡುಪಿ: ಅಮಾಯಕ ಹೆಣ್ಣುಮಗಳು ಸೌಜನ್ಯಳ ಹತ್ಯಾಚಾರ ಅತ್ಯಂತ ದುಃಖಕರ ಘಟನೆ, ಇದು ತಮಗೆ ತುಂಬಾ ನೋವುಂಟುಮಾಡಿದೆ. ಜೊತೆಗೆ ಈ ಹೇಯ ಘಟನೆಗಾಗಿ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಮೇಲೆ ಆಧಾರವಿಲ್ಲದ ಮಿಥ್ಯಾರೋಪ ಮಾಡಲಾಗುತ್ತಿರುವುದು ಕೂಡ ಅಷ್ಟೇ ನೋವು ತಂದಿದೆ ಎಂದು ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
 ಶ್ರೀಗಳು, ಸೌಜನ್ಯ ಕೊಲೆ ಮತ್ತು ಡಾ. ಡಿ. ವೀರೇಂದ್ರ ಹೆಗ್ಗಡೆ ವಿರುದ್ಧ ಆರೋಪವನ್ನು ಖಂಡಿಸಿ ಶನಿವಾರ ಉಡುಪಿಯಲ್ಲಿ ನಡೆದ ನಾಗರಿಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಹೆಗ್ಗಡೆ ಕರಾವಳಿಯ ಹೆಮ್ಮೆ: ಕರಾವಳಿಯ ಹೆಮ್ಮೆ ಮತ್ತು ಸಾಕ್ಷಿಪ್ರಜ್ಞೆಯಂತೆ ಇರುವ ಹೆಗ್ಗಡೆಯವರಿಗೆ ಅವರ ಸೇವಾಕಾರ್ಯಗಳಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು, ಅದರ ಬದಲು ನಿರಾಧಾರ ಆರೋಪ ಮಾಡಲಾಗುತ್ತಿದೆ. ಇದು ಅವರಿಗೆ ಮಾಡಿದ ಅಪಮಾನವಲ್ಲ, ಕರಾವಳಿಯ ಜನತೆಗೆ ಮಾಡಿದ ಅಪಮಾನ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಸೌಜನ್ಯ ಕುಟುಂಬಸ್ಥರಿಗೆ ಸಾಂತ್ವನ: ಶನಿವಾರ ಸೌಜನ್ಯಳ ಮನೆಗೆ ಭೇಟಿ ನೀಡಿ ಆಕೆಯ ಮನೆಯವರಿಗೆ ಸಾಂತ್ವನ ಹೇಳಿದ್ದೇವೆ ಎಂದು ತಿಳಿಸಿದ ಪೇಜಾವರಶ್ರೀಗಳು, ತನಿಖೆ ಸರಿಯಾದ ರೀತಿಯಲ್ಲಿ ನಡೆಯಬೇಕು. ಆಕೆಯ ಕುಟುಂಬಕ್ಕೆ ನ್ಯಾಯ ದೊರೆಯಬೇಕು ಎಂದು ಆಗ್ರಹಿಸಿದರು.
 ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಮಾತನಾಡಿ, ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮೇಲೆ ಆರೋಪ ಹೊರಿಸಿ ಅವರಿಗೆ ಅವಮಾನ ಮಾಡುತ್ತಿಲ್ಲ, ಬದಲಾಗಿ ಸೌಜನ್ಯಳ ಆತ್ಮಕ್ಕೆ ಅಪಮಾನ ಮಾಡಲಾಗುತ್ತಿದೆ. ತನಿಖೆಯ ಮೊದಲೇ ತೀರ್ಪು ನೀಡುವುದು, ಸಮಾಜಮುಖಿ ವ್ಯಕ್ತಿಯೊಬ್ಬರಿಗೆ ಪ್ರೋತ್ಸಾಹಿಸುವ ಬದಲು ಅವರನ್ನು ನೋಯಿಸಿ, ನಿರುತ್ಸಾಹಗೊಳಿಸುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
 ಸಭೆಯಲ್ಲಿ ಉದ್ಯಮಿ ರಬೀಂದ್ರ ನಾಯಕ್, ಶಾಸಕರಾದ ಶ್ರೀನಿವಾಸ ಪೂಜಾರಿ, ಪ್ರಮೋದ್ ಮಧ್ವರಾಜ್, ಧರ್ಮಗುರುಗಳಾದ ರಾಬಿನ್ಸನ್ ಬಾರ್ನೆಸ್, ಪ್ರಾಂಶುಪಾಲ ಡಾ. ನೇರಿ ಕರ್ನೇಲಿಯೋ, ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ ಅಧ್ಯಕ್ಷ ಬುಡಾನ್ ಬಾಷಾ, ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮುಂತಾದವರು ಮಾತನಾಡಿದರು. ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳ್, ನಗರಸಭೆ ಅಧ್ಯಕ್ಷ ಯುವರಾಜ್, ವಿಹಿಂಪ ಜಿಲ್ಲಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೇಶಕ ಹೇರಂಜೆ ಕಷ್ಣ ಭಟ್, ಲಯನ್ ಮಾಜಿ ಗವರ್ನರ್ ಜಯಕರ ಶೆಟ್ಟಿ ಇಂದ್ರಾಳಿ, ಸಾಮಾಜಿಕ ಕಾರ್ಯಕರ್ತರಾದ ವಾಸುದೇವ ಭಟ್, ತಲ್ಲೂರು ಶಿವರಾಮ ಶೆಟ್ಟಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.