ಅಪಘಾತ: ಸೈಕಲ್ ಸವಾರನಿಗೆ ಗಾಯ
ಕಾಪು: ಇನ್ನಂಜೆ ಗ್ರಾಮದ ಗೋಳಿಕಟ್ಟೆ ಕ್ರಾಸ್ ರಸ್ತೆ ಬಳಿಯಲ್ಲಿ ಕಾರು ಹಾಗೂ ಸೈಕಲ್ ಪರಸ್ಪರ ಡಿಕ್ಕಿ ಹೊಡೆದು ಸೈಕಲ್ ಸವಾರ ಗಾಯಗೊಂಡ ಘಟನೆ ಗುರುವಾರ ನಡೆದಿದೆ. ಗಾಯಗೊಂಡವರನ್ನು ರತ್ನಾಕರ ಕುಲಾಲ್ ಎಂದು ಗುರುತಿಸಲಾಗಿದೆ. ಕಾರು ಚಾಲಕ ಶೇಖರ ಅವರು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದಿರುವುದೇ ಈ ಅಪಘಾತಕ್ಕೆ ಕಾರಣ ಎಂಬುದಾಗಿ ರತ್ನಾಕರ ಕುಲಾಲ್ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಸಾವು
ಕೊಲ್ಲೂರು: ಹೊಸೂರು ಹೈಸ್ಕೂಲ್ ಸಮೀಪದ ರಸ್ತೆ ಬದಿಯಲ್ಲಿ ನಡೆದುಕೊಂಡು ಮನೆ ಕಡೆಗೆ ಹೋಗುತ್ತಿದ್ದ ವ್ಯಕ್ತಿಯೋರ್ವರಿಗೆ ಜೆಸಿಬಿ ವಾಹನದ ಬಕೆಟ್ ತಲೆಗೆ ಬಡಿದು ಮೃತಪಟ್ಟ ಘಟನೆ ಗುರುವಾರ ನಡೆದಿದೆ. ನಾರಾಯಣ ಕೊಠಾರಿ (54) ಮೃತರು. ಇವರು ಹೊಸೂರು ಕಡೆಯಿಂದ ಕೆರಾಡಿಯಲ್ಲಿರುವ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಹೊಸೂರು ಹೈಸ್ಕೂಲ್ ಸಮೀಪದಲ್ಲಿ ಜೆಸಿಬಿ ವಾಹನವನ್ನು ಚಾಲಕ ದೇವಿಪ್ರಸಾದ್ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಾರಾಯಣ ಅವರ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ತೀವ್ರ ಗಾಯಗೊಂಡ ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಆತ್ಮಹತ್ಯೆ
ಕಾರ್ಕಳ: ಕಲ್ಯಾ ಗ್ರಾಮದ ದಂಡಿಬೆಟ್ಟು ದರ್ಕಾಸುಮನೆ ಎಂಬಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಮೃತರು ರಾಘವೇಂದ್ರ ಆಚಾರ್ಯ (38), ಅವರಿಗೆ ವಿಪರೀತ ಮದ್ಯಪಾನದ ಚಟ ಇದ್ದು, ಇದೇ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಶುಕ್ರವಾರ ಬೆಳಗ್ಗೆ ಮನೆಯ ಪಕ್ಕದ ಇಂದಿರಾ ಶೆಟ್ಟಿ ಅವರ ಪಾಳು ಬಿದ್ದ ಕೋಳಿ ಫಾರಂ ಶೆಡ್ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಳಿ ಅಂಕಕ್ಕೆ ದಾಳಿ: 7 ಮಂದಿ ಬಂಧನ
ಬೈಂದೂರು: ಇಲ್ಲಿನ ಗೋಳಿ ಹೊಳೆ ಗ್ರಾಮದ ಚಾರ್ಸಾಲು ಎಂಬಲ್ಲಿ ಗುರುವಾರ ರಾತ್ರಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ಮಾಡಿರುವ ಬೈಂದೂರು ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇಲ್ಲಿನ ನಿವಾಸಿ ಮಂಜು ಮರಾಠಿ ಎಂಬವರ ಮನೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸಲಾಗುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಬೈಂದೂರು ಪೊಲೀಸ್ ಎಸೈ ಸುನೀಲ್ ಕುಮಾರ್ ಎಮ್.ಎಸ್. ಅವರು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಜೂಜಾಟ ನಿರತರಾಗಿದ್ದ 7 ಮಂದಿಯನ್ನು ಬಂಧಿಸಿ, 10 ಕೋಳಿಗಳು, ಕೋಳಿಗಳ ಕಾಲಿಗೆ ಕಟ್ಟುವ 5 ಚೂರಿ, ರು. 550 ನಗದನ್ನು ವಶಪಡಿಸಿಕೊಂಡದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗರ್ಭಿಣಿ ಆತ್ಮಹತ್ಯೆ
ಮಲ್ಪೆ: ಕೋಟ ಜಾತ್ರೆಗೆ ಹೋಗಲು ಗಂಡ ಹಣ ಕೊಡಲಿಲ್ಲ ಎನ್ನುವ ಕಾರಣಕ್ಕೆ ಗರ್ಭಿಣಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಸಂಜೆ ಇಲ್ಲಿನ ಕೋಡಿಬೇಂಗ್ರೆ ಎಂಬಲ್ಲಿ ನಡೆದಿದೆ. ಮೃತರು ಅನಿತಾ (24), ಈಕೆ ಇಲ್ಲಿನ ಮೀನುಗಾರಿಕಾ ಬೋಟ್ನಲ್ಲಿ ದುಡಿಯುವ ಕೃಷ್ಣರಾಜ್ ಎಂಬವರ ಪತ್ನಿ. ಅವರು ಮದುವೆಯಾಗಿ 4 ವರ್ಷಗಳಾಗಿದ್ದು, 2 ತಿಂಗಳ ಮಗು ಇದೆ. ಈಗ 5 ತಿಂಗಳ ಗರ್ಭಿಣಿಯಾಗಿದ್ದರು. ಈಕೆಯ ತವರು ಮನೆ ಕೋಟ ಗ್ರಾಮದಲ್ಲಿದ್ದು, ಶುಕ್ರವಾರ ಕೋಟದ ಜಾತ್ರೆ ನಡೆಯಿತು. ಅದಕ್ಕೆ ಹೋಗಲು ಗಂಡನ ಬಳಿ ಸವಿತಾ ಹಣ ಕೇಳಿದರು. ಆದರೆ, ಹೆಂಡತಿ ಗರ್ಭಿಣಿಯಾದ್ದರಿಂದ ಜಾತ್ರೆಗೆ ಹೋಗುವುದು ಬೇಡ ಎಂದು ಹಣ ನೀಡಲಿಲ್ಲ. ಅಷ್ಟಕ್ಕೆ ಬೇಸರಗೊಂಡ ಸವಿತಾ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

