ಮಾ.3ರಂದು ಆಟೋ ಬಂದ್ ಇಲ್ಲ
ಉಡುಪಿ: ಕಿಲೋ ಮೀಟರಿಗೆ ಪ್ರಯಾಣ ದರ ರು. 1ರಷ್ಟು ಹೆಚ್ಚಿಸುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಿ ಉಡುಪಿ ಜಿಲ್ಲಾ ಆಟೋ ರಿಕ್ಷಾ ಚಾಲಕರ ಒಕ್ಕೂಟ ಮಾ. 3ರಂದು ಕರೆ ನೀಡಿದ್ದ ಆಟೋ ಬಂದ್ ಮುಷ್ಕರ ತಾತ್ಕಾಲಿಕವಾಗಿ ಕೈಬಿಡಲಾಗಿದೆ.
ಜಿಲ್ಲಾಧಿಕಾರಿ ಮಾ. 3ರಂದೇ ಸಾರಿಗೆ ಪ್ರಾಧಿಕಾರ ಸಭೆ ನಡೆಸಿ ಒಕ್ಕೂಟದ ಬೇಡಿಕೆ ಬಗ್ಗೆ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಬಂದ್ ತಾತ್ಕಾಲಿಕವಾಗಿ ಕೈಬಿಡಲಾಗಿದೆ. ಆದರೆ ಸಭೆಯಲ್ಲಿ ಜಿಲ್ಲಾಧಿಕಾರಿ ಒಕ್ಕೂಟದ ರು. 1 ಏರಿಸುವ ಬೇಡಿಕೆ ಈಡೇರಿಸದಿದ್ದಲ್ಲಿ ಮರುದಿನವೇ ಅಂದರೆ, ಮಾ. 4ರಂದು ಜಿಲ್ಲೆಯಾದ್ಯಂತ ಆಟೋ ಬಂದ್ ನಡೆಸಲಾಗುವುದು ಎಂದು ಒಕ್ಕೂಟ ಗೌರವಾಧ್ಯಕ್ಷ ಮಾಜಿ ಶಾಸಕ ಕೆ. ರಘುಪತಿ ಭಟ್ ಎಚ್ಚರಿಸಿದ್ದಾರೆ.
ಬುಧವಾರ ಒಕ್ಕೂಟದ ಪದಾಧಿಕಾರಿಗಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಲೆ ಏರಿಕೆ ಹಿನ್ನೆಲೆಯಲ್ಲಿ ಆಟೋ ಚಾಲಕರ ವಿವಿಧ ಸಂಘಟನೆಗಳ ಬೇಡಿಕೆಯಂತೆ ಕಳೆದ ತಿಂಗಳು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಆಟೋ ಬಾಡಿಗೆ ದರ ಏರಿಸಲಾಗಿದ್ದು, ಮೊದಲ 1 ಕಿ.ಮೀ.ಗೆ 25 ರು. ಮತ್ತು ನಂತರದ ಪ್ರತಿ 1 ಕಿ.ಮೀ. ಗೆ 15 ರು. ಎಂದು ನಿಗದಿಗೊಳಿಸಲಾಗಿದೆ.
ಆದರೆ ನಂತರದ ಪ್ರತಿ 1 ಕಿ.ಮೀ.ಗೆ 16 ರು. ನೀಡಬೇಕು ಎಂದು ಆಟೋ ಚಾಲಕರ ವಿವಿಧ ಸಂಘಟನೆಗಳು ಆಗ್ರಹಿಸಿವೆ.
ಆದರೆ ಇದಕ್ಕೆ ಪ್ರಾಧಿಕಾರ ಮಣೆ ಹಾಕುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಾ. 3ರಂದು ಆಟೋ ಬಂದ್ ನಡೆಸಲು ಒಕ್ಕೂಟ ನಿಶ್ಚಯಿಸಿತ್ತು ಎಂದರು.
ಪ್ರಾಧಿಕಾರದ ಸದಸ್ಯರಲ್ಲೊಬ್ಬರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸ್ತುತ ಜಿಲ್ಲೆಯಲ್ಲಿಲ್ಲ, ಅವರು ಮಾ. 3ರಂದು ಬರುತ್ತಾರೆ, ಅಂದೇ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ. ರೇಜು ಹೇಳಿದ್ದಾರೆ. ಆದ್ದರಿಂದ ಬಂದ್ನ್ನು 1 ರು. ಏರಿಸುವ ಶರತ್ತಿನ ಮೇಲೆ ಹಿಂದೆ ತೆಗೆದುಕೊಳ್ಳುತ್ತೇವೆ, ಶರತ್ತು ಈಡೇರದಿದ್ದರೆ ಮರುದಿನವೇ ಬಂದ್ ನಡೆಸುತ್ತೇವೆ ಎಂದು ಭಟ್ ಹೇಳಿದರು.
ಒಕ್ಕೂಟದ ಅಧ್ಯಕ್ಷ ಮಹೇಶ್ ಠಾಕೂರ್, ಶಾರದಾ ಆಟೋ ಯೂನಿಯನ್ ಅಧ್ಯಕ್ಷ ಬಿ. ಸುಧಾಕರ ಶೆಟ್ಟಿ, ಮಹೇಶ್ ಠಾಕೂರ್, ಉಡುಪಿ ಆಟೋ ಯೂನಿಯನ್ನ ಶಿವಪ್ರಸಾದ್ ಮತ್ತು ಮಣಿಕಂಠ, ಮಣಿಪಾಲ ಯೂನಿಯನ್ನ ಸುರೇಶ್ ಅಮೀನ್ ಮತ್ತು ನಾರಾಯಣ ಇದ್ದರು.
ಪ್ರಯಾಣ ದರ ಏರಿಕೆಗೆ ಮನವಿ
ಕಾರ್ಕಳ: ಆಟೋ ಪ್ರಯಾಣ ದರ ಹೆಚ್ಚಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಆಟೋ ರಿಕ್ಷಾ ಚಾಲಕ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಓಡುತ್ತಿರುವ ಆಟೋರಿಕ್ಷಾಗಳಿಗೆ ಕಿಲೋ ಮೀಟರ್ಗೆ ರು. 15 ನಿಗದಿಪಡಿಸಲಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಗ್ಯಾಸ್ ಬೆಲೆಯಲ್ಲಿ ಏರಿಕೆಯಾಗಿರುವುದು ಮತ್ತು ಆಟೋಗಳ ಇತರೆ ನಿರ್ವಹಣೆ ವೆಚ್ಚಗಳು ಹೆಚ್ಚಾಗಿರುವುದರಿಂದ ಕಿ.ಮೀ. ಒಂದಕ್ಕೆ ಆಟೋ ರಿಕ್ಷಾಗಳ ಮೀಟರ್ ದರವನ್ನು ರು. 16 ಕ್ಕೆ ಏರಿಸಬೇಕು ಎಂದು ಮನವಿ ಮಾಡಿದರು.
ಈ ಮನವಿಗೆ ಜಿಲ್ಲಾಧಿಕಾರಿಗಳು ಆರ್.ಟಿ.ಎ. ಸಭೆ ಕರೆದು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರೂ ಈವರೆಗೆ ಯಾವುದೇ ತೀರ್ಮಾನವನ್ನು ಕೈಗೊಂಡಿರುವುದಿಲ್ಲದಿರುವುದರ ವಿರುದ್ಧ ರಿಕ್ಷಾ ಚಾಲಕರ ಸಂಘದವರು ರಿಕ್ಷಾ ಬಂದ್ಗೆ ಕರೆ ನೀಡಿದ್ದಾರೆ. ಈ ಬಗ್ಗೆ ವಿಧಾನ ಸಭೆ ಅಧಿವೇಶನದಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ತಕ್ಷಣ ಆಟೋ ರಿಕ್ಷಾ ಚಾಲಕರ ಬೇಡಿಕೆಯನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ಸುನಿಲ್ ಕುಮಾರ್ರ ಈ ಒತ್ತಾಯಕ್ಕೆ ಕಾನೂನು ಸಚಿವ ಟಿ.ಬಿ. ಜಯಚಂದ್ರ ಪ್ರತಿಕ್ರಿಯಿಸಿ, ಈ ಬಗ್ಗೆ ತಕ್ಷಣ ಜಿಲ್ಲಾಧಿಕಾರಿ ಜೊತೆ ಮಾತನಾಡಿ, ಆರ್.ಟಿ.ಎ. ಸಭೆ ಮಾಡುವಂತೆ ಹಾಗೂ ದರ ಹೆಚ್ಚಿಸಲು ಕ್ರಮಕೈಗೊಳ್ಳಲು ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

