ಉಡುಪಿ

ಕಾಣಿಯೂರು ಶ್ರೀ ಪುರಪ್ರವೇಶ

Published On :

ಉಡುಪಿ: ದೇಶದ ವಿವಿಧ ಪುಣ್ಯಕ್ಷೇತ್ರಗಳ ಸಂದರ್ಶನಕ್ಕೆ ತೆರಳಿದ್ದ, ಜ.18ರಂದು ಮುಂಜಾನೆ ಉಡುಪಿ ಕೃಷ್ಣಮಠದಲ್ಲಿ ಕೃಷ್ಣ ಪೂಜೆಯ ಪರ್ಯಾಯ ಅಧಿಕಾರ, ಪೀಠಗ್ರಹಣ ಮಾಡಲಿರುವ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು ಗುರುವಾರ ಸಂಜೆ ಉಡುಪಿ ಪುರ ಪ್ರವೇಶಿಸಿದರು.
 ಪರ್ಯಾಯ ಉತ್ಸವಕ್ಕೆ ಮೊದಲು ಪರ್ಯಾಯ ಪೀಠಾರೋಹಣ ಮಾಡುವ ಸ್ವಾಮೀಜಿ ದೇಶಸಂಚಾರಗೈದು ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಿ, ಅಲ್ಲಿನ ಭಕ್ತರನ್ನು ತಮ್ಮ ಪರ್ಯಾಯೋತ್ಸವಕ್ಕೆ ಆಹ್ವಾನಿಸುವ ಸಂಪ್ರದಾಯದಂತೆ ಕಳೆದೊಂದು ವರ್ಷದಿಂದ ಕಾಣಿಯೂರು ಮಠಾಧೀಶರು ದೇಶಸಂಚಾರ ನಡೆಸಿದರು.
ಭವ್ಯ ಸ್ವಾಗತ: ಗುರುವಾರ ಸಂಜೆ ಸುಮಾರು 4 ಗಂಟೆಗೆ ಉಡುಪಿಗೆ ಆಗಮಿಸಿದ ಸ್ವಾಮೀಜಿ ಅವರನ್ನು ನಗರದ ದಕ್ಷಿಣ ದಿಕ್ಕಿನಲ್ಲಿರುವ ಜೋಡುಕಟ್ಟೆ ಎಂಬಲ್ಲಿ ಸಾವಿರಾರು ಮಂದಿ ಭಕ್ತರು, ಗಣ್ಯರು, ಉಡುಪಿಯ ಜನಪ್ರತಿನಿಧಿಗಳು ಭಕ್ತಿಯಿಂದ ಬರ ಮಾಡಿಕೊಂಡರು. ನಂತರ ವಾದ್ಯಘೋಷ, ಮಠದ ಬಿರುದಾವಳಿಗಳೊಂದಿಗೆ ಚಿನ್ನದ ಪಾಲಕಿಯಲ್ಲಿ ಕಾಣಿಯೂರು ಮಠದ ಆರಾಧ್ಯ ನರಸಿಂಹ ದೇವರ ಮೂರ್ತಿ ಮುಂದಿರಿಸಿಕೊಂಡು, ಸ್ವಾಮೀಜಿ ಅವರನ್ನು ತೆರೆದ ವಾಹನದಲ್ಲಿ ಕುಳ್ಳಿರಿಸಿ ವೈಭವದ ಮೆರವಣಿಗೆಯಲ್ಲಿ ತಾಲೂಕು ಕಚೇರಿ, ಡಯನಾ ವೃತ್ತ, ತೆಂಕಪೇಟೆಯ ಮೂಲಕ 6 ಗಂಟೆಗೆ ರಥಬೀದಿಗೆ ಕರೆತರಲಾಯಿತು.
 ರಥಬೀದಿಯಲ್ಲಿ ಮೊದಲು ಶ್ರೀಗಳು ಕನಕಗೋಪುರದಡಿ ಕನಕ ನವಗ್ರಹ ಕಿಂಡಿ ಮೂಲಕ ಕೃಷ್ಣ ದರ್ಶನ ಪಡೆದರು. ನಂತರ ಅನಂತೇಶ್ವರ, ಚಂದ್ರಮೌಳೀಶ್ವರ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ, ಸಂಜೆ 6.23ರ ಶುಭ ಮುಹೂರ್ತದಲ್ಲಿ ಕಾಣಿಯೂರು ಮಠ ಪ್ರವೇಶಿಸಿದರು.
ಮೆರವಣಿಗೆಯಲ್ಲಿ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ಶಾಸಕ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಕೆ. ರಘುಪತಿ ಭಟ್, ಉಡುಪಿ ನಗರಸಭಾಧ್ಯಕ್ಷ ಪಿ. ಯುವರಾಜ್, ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸೆಲಿನ್ ಕರ್ಕಡ, ಸದಸ್ಯರಾದ ರಮೇಶ್ ಕಾಂಚನ್, ಶೋಭಾ ಪೂಜಾರಿ, ಶಶಿಧರ ಕುಂದರ್, ವಿಜಯ ಕುಂದರ್, ಯಶಪಾಲ್ ಸುವರ್ಣ, ಜಿಪಂ ಸದಸ್ಯ ದಿವಾಕರ ಕುಂದರ್, ಕಾಂಗ್ರೆಸ್ ನಾಯಕರಾದ ಹರೀಶ್ ಕಿಣಿ, ಅಮೃತಾ ಶೆಣೈ, ಸತೀಶ್ ಅಮೀನ್ ಪಡುಕರೆ, ಪೌರಾಯುಕ್ತ ಶ್ರೀಕಾಂತ ರಾವ್, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಭಾಗವಹಿಸಿದ್ದರು.
 ಕಾಣಿಯೂರು ಮಠದ ದಿವಾಣ ರಘುಪತಿ ಆಚಾರ್ಯ, ವ್ಯವಸ್ಥಾಪಕ ನಾಗರಾಜ ಆಚಾರ್ಯ, ಸ್ವಾಗತ ಸಮಿತಿ ಅಧ್ಯಕ್ಷ ಎ. ರಾಘವೇಂದ್ರ ರಾವ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ, ಕೋಶಾಧಿಕಾರಿ ರಮೇಶ್ ರಾವ್ ಬೀಡು, ಜೊತೆ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಮತ್ತು ಶ್ರೀಧರ ಭಟ್, ವಿದ್ವಾಂಸ ಡಾ. ಸುರೇಶ್ ಆಚಾರ್ಯ ಅವರು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.