ಉತ್ತರ ಕನ್ನಡ

ಅತಿ ಆತ್ಮ ವಿಶ್ವಾಸ ಪಕ್ಷಗಳಿಗೆ ಸೋಲು ತಂದಿತೇ?

Published On :

ಕಾರವಾರ: ಅತಿಯಾದ ಆತ್ಮವಿಶ್ವಾಸ ಹಾಗೂ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧವೇ ಪಕ್ಷೇತರವಾಗಿ ಸ್ಪರ್ಧಿಸಿದ್ದು ಬಿಜೆಪಿಯ ಗೆಲುವಿನ ಓಘಕ್ಕೆ ಕಡಿವಾಣ ಹಾಕಿತು. ವ್ಯವಸ್ಥಿತವಾಗಿ ಚುನಾವಣೆ ಎದುರಿಸದೆ ಇರುವುದು ಕಾಂಗ್ರೆಸ್ ಗೆಲುವಿಗೆ ಅಡ್ಡಿಯಾಯಿತು. ನಾಯಕತ್ವದ ಕೊರತೆ ಜೆಡಿಎಸ್‌ಗೆ ಕಾಡಿತು. ಹೀಗಾಗಿ ಯಾವ ಪಕ್ಷವೂ ಬಹುಮತ ಗಳಿಸುವಲ್ಲಿ ಸಫಲವಾಗಲಿಲ್ಲ. ಆದರೆ ಆಯ್ಕೆಯಾದ ಐವರು ಪಕ್ಷೇತರರಲ್ಲಿ ಮೂವರನ್ನು ಸೆಳೆದುಕೊಳ್ಳುವ ಮೂಲಕ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾತರದಿಂದಿದೆ. ಜೊತೆಗೆ ರಾಜ್ಯ ಬಿಜೆಪಿಯಲ್ಲಿನ ಗೊಂದಲಗಳೂ ಮತದಾರರ ಮೇಲೆ ಪರಿಣಾಮ ಬೀರಿದ್ದರಿಂದ ಬಿಜೆಪಿ ಗೆಲ್ಲಬೇಕಾಗಿದ್ದ ಸ್ಥಳಗಳಲ್ಲೂ ಎಡವಿತು. ಅನುಭವ ಹೊಂದಿದ್ದ ಗಿರೀಶರಾವ್, ದಿಗಂಬರ ಹಳದನಕರ, ದಿವ್ಯಾ ನಾಯ್ಕ ಮತ್ತಿತರರು ಸೋಲು ಅನುಭವಿಸಿದರು. ರಾಜ್ಯ ಬಿಜೆಪಿಯಲ್ಲಿನ ಗೊಂದಲವನ್ನೇ ಬಂಡವಾಳವನ್ನಾಗಿಸಿಕೊಂಡ ಕಾಂಗ್ರೆಸ್ ಪಕ್ಷ ಇದೊಂದರಿಂದಲೇ ಗೆಲುವು ಸಾಧ್ಯ ಎಂಬ ನಿರೀಕ್ಷೆಯಲ್ಲಿತ್ತು. ಪಕ್ಷದ ಮುಖಂಡ ಸತೀಶ ಸೈಲ್ ಉತ್ಸುಕತೆಯಿಂದ ಕೆಲಸ ಮಾಡಿದರೂ ವ್ಯವಸ್ಥಿತವಾಗಿ ಚುನಾವಣೆಯನ್ನು ಎದುರಿಸಲು ಸಾಧ್ಯವಾಗದೆ ಇರುವುದು ಕಾಂಗ್ರೆಸ್‌ಗೆ ಮುಳುವಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೀಪಕ ವೈಂಗಣಕರ ಸಹ ಪರಾಭವಗೊಂಡರು. ಕಳೆದ ಬಾರಿ ನಗರಸಭೆಯಲ್ಲಿ 17 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ ಈ ಬಾರಿ 13 ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಜೆಡಿಎಸ್ ಪಕ್ಷಕ್ಕೆ ಪ್ರಭಾವಿ ನಾಯಕರು ಇಲ್ಲದೆ ಇರುವುದು ಆ ಪಕ್ಷಕ್ಕೆ ಮುಳುವಾಯಿತು. ಜೆಡಿಎಸ್ ನಗರಸಭೆಯಲ್ಲಿ ಖಾತೆ ತೆರೆಯಲೂ ಸಾಧ್ಯವಾಗದಂತಾಯಿತು. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಪ್ರಚಾರದ ಭರಾಟೆಯನ್ನು ಸಮರ್ಥವಾಗಿ ಎದುರಿಸಲು ನಾಯಕರು ಹಾಗೂ ಕಾರ್ಯಕರ್ತರ ಬರ ಎದ್ದು ಕಂಡಿತು. ಬಿಎಸ್‌ಆರ್ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತಾದರೂ ಗಮನಾರ್ಹ ಮತಗಳನ್ನು ಪಡೆಯುವಲ್ಲಿ ಸಫಲರಾಗಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.