ಸಂಪಾದಕೀಯ

ಯಾತ್ರೆ ರಾಜಕೀಯ ಬೇಡ

Published On :

ಅಯೋಧ್ಯೆಯಲ್ಲಿ ಅನಾದಿ ಕಾಲದಿಂದಲೂ "ಕೋಸಿ ಪರಿಕ್ರಮ ಯಾತ್ರೆಯನ್ನು" ಸಾಧುಸಂತರು ನಡೆಸಿಕೊಂಡು ಬರುತ್ತಿದ್ದುದನ್ನು ಆಸ್ತಿಕ ಸಮಾಜ ಬಿಟ್ಟರೆ ಬೇರೆಯವರ ಗಮನ ಅತ್ತ ಹರಿದಿರಲಿಲ್ಲ.
ಆದರೆ ಕಳೆದ ಒಂದು ದಶಕದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಹೆಸರಿನಲ್ಲಿ ಅಯೋಧ್ಯೆಯಲ್ಲಿ ನಡೆದ ಘಟನೆಗಳು, ದೇಶದ ಅನೇಕ ಪ್ರದೇಶಗಳಲ್ಲಿ ನಡೆದ ಗೊಂದಲ - ಗಲಭೆ, ಬೆಂಕಿ-ಲೂಟಿಗಳಿಂದಾಗಿ ಅಲ್ಲಿ ಈಗ ಯಾವುದಾದರೂ ಯಾತ್ರೆ ನಡೆಯುತ್ತೆ ಎಂದಾಗ ಜನರ ಎದೆ ನಡುಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ದಶಕಗಳ ಕಾಲ ಈ ಪರಿಸ್ಥಿತಿ ಅಯೋಧ್ಯೆಯ ಜನಸಾಮಾನ್ಯರನ್ನು ಕಾಡಿದೆ.
ಹಿಂದೆ ಮುಲಾಯಂ ಸಿಂಗ್ ಯಾದವ್‌ರ ಸರ್ಕಾರ ಇದ್ದಾಗಲೇ ಅಯೋಧ್ಯೆಯಲ್ಲಿನ ನೂಕು ನುಗ್ಗಲು, ಲಾಠಿ ಚಾರ್ಜ್‌ಗಳಲ್ಲಿ ನೊಂದವರ ಸಂಖ್ಯೆ ಬಹುದೊಡ್ಡದು. ಆ ಕಾಲದಲ್ಲೇ ಬಿಜೆಪಿಯ ನಾಯಕರು ಮುಲಾಯಂ ಸಿಂಗ್ ಯಾದವ್ ಅವರಿಗೆ ಮೌಲಾನಾ ಮುಲಾಯಂ ಎಂದು ನಾಮಕರಣ ಮಾಡಿದ್ದು. ಆ ಗದ್ದಲದಲ್ಲಿ ರಾಜಕೀಯ ಹೆಚ್ಚಾಗಿರಲಿಲ್ಲ.
ಆ ಕಾಲದಿಂದಲೂ ಅಯೋಧ್ಯೆ ಸುದ್ದಿಯಲ್ಲಿದೆ. ಬಾಬರಿ ಮಸೀದಿಯ ಕಟ್ಟಡವನ್ನು ಕರಸೇವಕರು ನೆಲಸಮ ಮಾಡಿದ ಅನಂತರ ದೇಶದಲ್ಲಿ ಅನೇಕ ಕಡೆಗಳಲ್ಲಿ ನಡೆದ ಘಟನೆಗಳ ಹಿಂದಿದ್ದ ಕ್ರೂರ ಮನಸ್ಸುಗಳ ಸ್ವರೂಪವನ್ನು ಊಹಿಸಿಕೊಳ್ಳುವುದೂ ಕಷ್ಟ.
ಅಯೋಧ್ಯೆಯ ಬಾಬರಿ ಮಸೀದಿ - ರಾಮಜನ್ಮಭೂಮಿಯ ವಿವಾದದಲ್ಲಿ ಸಿಕ್ಕಿ ಬಿದ್ದು ಸಂತ್ರಸ್ತರಾದವರ ಸಂಖ್ಯೆ ದೊಡ್ಡದು. ಇಲ್ಲಿ ಸಮುದಾಯ ಕಾರ್ಯಕ್ರಮ ಆರಂಭವಾಗುವುದು ಸಾಧುಸಂತರ ಯಾತ್ರೆಯಿಂದಲೇ. ಅನಂತರ ಆ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ತು, ಭಜರಂಗದಳದಂತಹ ಸಂಘ ಪರಿವಾರದ ಶಕ್ತಿಗಳು, ಸಭೆ - ಮೆರವಣಿಗೆಗಳಲ್ಲಿ ಪಾಲುಗೊಳ್ಳುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಆ ಭಾಗದ ಜನರ ಮುಖದಲ್ಲಿ ಕಂಡು ಬರುವ ಉದ್ವಿಗ್ನತೆ, ಹಿಂದಿನ ದಿನಗಳ ಧಾರ್ಮಿಕ ಮುದ್ರೆಯನ್ನು ಅಳಿಸಿ ಹಾಕಿದೆ ಎನ್ನುವುದು ಸ್ಪಷ್ಟವಾಗಿ ಗೋಚರವಾಗುತ್ತದೆ.
ಇಂತಹ ಕಾರ್ಯಕ್ರಮದಲ್ಲಿ, (ಹೇಳಿ ಕೇಳಿ ಅದು ಶಾಂತಿ ಮಂತ್ರವನ್ನು ಜಪಿಸುವ ಕಾರ್ಯಕ್ರಮ) ವಿಶ್ವ ಹಿಂದೂ ಪರಿಷತ್ತು ಹಾಗೂ ಸಂಘ ಪರಿವಾರದ ಇತರ ಸಂಸ್ಥೆಗಳ ಕಟ್ಟರ್ ಹಿಂದೂ ಶಕ್ತಿಗಳ ಜನರೂ ಸೇರಿಕೊಂಡಾಗ, ಒಂದು ಸಜ್ಜನರ ಧಾರ್ಮಿಕ ಕಾರ್ಯಕ್ರಮವಾಗಬೇಕಾದ ಘಟನೆ ರಾಜಕೀಯ ತಂತ್ರಗಾರಿಕೆಗೆ ಬಲಿಯಾಗುತ್ತಿದೆ. ಅದರ ಪರಿಣಾಮ ಏನಾಗಬಹುದು ಎನ್ನುವುದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ.
ಇದನ್ನೆಲ್ಲ ಗಮನಿಸಿ, ಶಾಂತಿಯನ್ನು ಕದಡಬಹುದಾದಂತಹ ಯಾವುದೇ ಕಾರ್ಯಕ್ರಮಕ್ಕೆ ಅವಕಾಶ ಕೊಡಬಾರದೆಂದು ಉತ್ತರ ಪ್ರದೇಶದ ಸರ್ಕಾರ ಅತ್ಯುನ್ನತ ಮಟ್ಟದಲ್ಲೇ ನಿರ್ಧರಿಸಿತು. ಭಾನುವಾರ ಆರಂಭವಾಗಬೇಕಾಗಿದ್ದ ಪರಿಕ್ರಮ ಯಾತ್ರೆಯಲ್ಲಿ ರಾಜಕಾರಣಿಗಳಿಗೆ ಅವಕಾಶ ಕೊಡುವುದಿಲ್ಲ ಎಂದು ಸಾಧು ಸಂತರ ಕಾರ್ಯಕ್ರಮದ ಸಂಘಟಕರು ಹೇಳಿದ್ದರೂ ಅವರು ಯಾರನ್ನಾದರೂ ಹೇಗೆ ತಡೆಯಬಲ್ಲರು ಎನ್ನುವ ಪ್ರಶ್ನೆಗೆ ಅವರಲ್ಲಿ ಉತ್ತರವಿರಲಿಲ್ಲ.
ಯಾತ್ರೆಗೆ ಅನುಮತಿ ಬೇಡಲು ವಿಶ್ವ ಹಿಂದೂ ಪರಿಷತ್ತಿನ ಅಧಿಕಾರಿಗಳು ಮುಲಾಯಂ ಸಿಂಗ್ ಯಾದವ್, ಅಖಿಲೇಶ ಯಾದವ್ ಅವರನ್ನು ಭೇಟಿಯಾಗಿದ್ದಾಗಲೂ ಸೌಹಾರ್ದ ವಾತಾವರಣದಲ್ಲೇ ಮಾತುಕತೆ ನಡೆದರೂ ಯಾತ್ರೆಗೆ ಅವಕಾಶ ಕೊಡುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಲಾಗಿತ್ತು. ಅಷ್ಟೇ ಸಾಕಾಯಿತು ಜಗಳಕ್ಕೆ.
ಯಾತ್ರೆ ನಡೆಸುವುದು ಸಾಧುಗಳ ಹಕ್ಕು ಎಂದರು ಬಿಜೆಪಿಯ ರಾಜನಾಥಸಿಂಗ್. ಶಾಂತಿಭಂಗಕ್ಕೆ ನೆರವು ನೀಡುವಂತಹ ಯಾವ ಕಾರ್ಯಕ್ರಮಕ್ಕೂ ಅವಕಾಶ ಇಲ್ಲ ಎಂದಿತ್ತು ಸಮಾಜವಾದಿ ಪಕ್ಷದ ಸರ್ಕಾರ. ವಾತಾವರಣ ಬಿಗಿಯಾದಾಗ, ಹಿಂಸೆಯ ಮಾತು ಕೇಳಿಬಂದಾಗ, ಸರ್ಕಾರವೂ ಕಟ್ಟೆಚ್ಚರದ ಆದೇಶ ಪ್ರಕಟಿಸಿ, ಊರಲ್ಲಿ ಸಭೆ, ಮೆರವಣಿಗೆ ಪ್ರದರ್ಶನಗಳನ್ನು ನಿಷೇಧಿಸಿ, ಯಾತ್ರೆಯಲ್ಲಿ ಪಾಲುಗೊಳ್ಳಬಹುದಾದ ನಾಯಕರನ್ನು ಬಂಧಿಸಿದಾಗ ಆಯೋಧ್ಯೆಯಲ್ಲಿ ರಕ್ತ ಹರಿಯುವ ಭೀತಿ ದೇಶವನ್ನೇ ಕಾಡಿತ್ತು.
ಭಾನುವಾರ ಅಯೋಧ್ಯೆಯ ಕಾರ್ಯಕ್ರಮಕ್ಕೆಂದು ಬಂದ ವಿಶ್ವ ಹಿಂದೂ ಪರಿಷತ್ತಿನ ನಾಯಕ ಅಶೋಕ ಸಿಂಘಾಲ್ ಲಖನೌದಲ್ಲೇ, ವಿಮಾನ ನಿಲ್ದಾಣದಲ್ಲಿ ಉಳಿಯಬೇಕಾಯಿತು. ಇನ್ನೊಬ್ಬ ನಾಯಕ ತೊಗಾಡಿಯಾ ಹಾಗೂ ಇತರ ಅನೇಕರ ಬಂಧನದ ಹಿನ್ನೆಲೆಯಲ್ಲಿ ಅಲ್ಲಿಯ ಪರಿಸ್ಥಿತಿಯಲ್ಲಿ ಉದ್ವಿಗ್ನತೆಯ ಕಾವು ಮೂಡಿತ್ತು.
ಇವೆಲ್ಲ ಯಾತಕ್ಕಾಗಿ? ಅಯೋಧ್ಯೆಯ ಬಾಬರಿ ಮಸೀದಿ - ರಾಮಜನ್ಮಭೂಮಿಯ ವಿವಾದದ ಪರಿಹಾರಕ್ಕಾಗಿ, ರಾಮಮಂದಿರದ ನಿರ್ಮಾಣಕ್ಕಾಗಿ ಎಂದು ಊಹಿಸಲು ರಾಜಕೀಯ ಜ್ಞಾನವೇನೂ ಬೇಕಾಗಿಲ್ಲ. ಈಗಾಗಲೇ ರಾಮಜನ್ಮಭೂಮಿ, ಬಾಬರಿ ಮಸೀದಿಯ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟಿನ ಲಖನೌ ಪೀಠ ಒಂದು ತೀರ್ಫು ನೀಡಿದೆ. ಆ ತೀರ್ಪನ್ನು ಸುಪ್ರೀಮ್ ಕೋರ್ಟ್ ತಡೆ ಹಿಡಿದಿದೆ. ಅಂತಿಮ ತೀರ್ಪು ಇನ್ನೂ ಬರಬೇಕಾಗಿದೆ.
ಅಲ್ಲಿಯವರೆಗೆ ಈ ವಿವಾದ ಧಾರ್ಮಿಕ - ಐತಿಹಾಸಿಕ ಚರ್ಚೆಯ ಮಟ್ಟದಲ್ಲೇ ಇರಬೇಕು. ಸಭೆ, ಪ್ರದರ್ಶನಗಳ ಮೂಲಕ ಸುಪ್ರೀಮ್ ಕೋರ್ಟಿನ ಮೇಲೆ ಒತ್ತಾಯ ಹೇರುವ ಅಧಿಕಾರ ಯಾರಿಗೂ ಇಲ್ಲ. ಅಯೋಧ್ಯೆಯಲ್ಲಿ ಶಾಂತಿಯುತ ಧಾರ್ಮಿಕ ವಿಧಿಗಳ ಆಚರಣೆಯ ಹಕ್ಕು ಜನರಿಗೆ ಇದೆ. ಆದರೆ ಆ ಹಕ್ಕನ್ನು ಚಲಾಯಿಸುವ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ ಸಿಗುವ ಅನುಮಾನ ಬಂದಾಗ ಸರ್ಕಾರದ ಕಾಯಿದೆ ಬದ್ಧ ಹಸ್ತಕ್ಷೇಪ ಅನಿವಾರ್ಯ. ಅದನ್ನು ಒಪ್ಪಲೇಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.