ಸಂಪಾದಕೀಯ

ವೆಂಕಣ್ಣಯ್ಯನವರು ಸಹಾಯ ಮಾಡುತ್ತಿದ್ದುದು ಹೀಗೆ

Published On :

ಟಿ.ಎಸ್.ವೆಂಕಣ್ಣಯ್ಯನವರು ಒಳ್ಳೆಯ ಪ್ರಾಧ್ಯಾಪಕರೂ, ತಮ್ಮ ಶಿಷ್ಯರ ಬಗ್ಗೆ ಅಪಾರ ಪ್ರೀತಿ ಉಳ್ಳವರೂ, ಯಾರಾದರೂ ಸಹಾಯ ಯಾಚಿಸಿ ಬಂದವರಿಗೆ ತಮ್ಮ ಕೈಲಾದ ಸಹಾಯ ಮಾಡುವ ಗುಣವುಳ್ಳವರೂ ಆಗಿದ್ದರು. ಕುವೆಂಪುರವರ ನೆಚ್ಚಿನ ಗುರುಗಳಾಗಿ ಗೌರವ ಸಂಪಾದಿಸಿದ್ದರು. ಅವರದ್ದು ಸರಳ ಜೀವನ. ಕಷ್ಟದಲ್ಲಿರುವವರನ್ನು ಕಂಡರೆ ಅವರಿಗೆ ತುಂಬ ಕಕ್ಕುಲತೆ. ಅವರಿಗೆ ತಮ್ಮ ಕೈಲಾದ ಸಹಾಯ ಮಾಡುವುದರಲ್ಲಿ ಸದಾ ಮುಂದು. ಅವರಿಗಿದ್ದ ಒಂದೇ ಒಂದು ದುರಭ್ಯಾಸವೆಂದರೆ, ನಶ್ಯ ಹಾಕುವುದು. ಎಷ್ಟೋ ವೇಳೆ ನಶ್ಯದ ಸಲುವಾಗಿ ವೆಚ್ಚಮಾಡುವ ಮೂರುಕಾಸು ಉಳಿಸಿದರೆ, ಯಾರಾದರೊಬ್ಬ ದಾಸಯ್ಯನಿಗೆ ನೀಡಬಹುದಿತ್ತು ಎಂದು ಯೋಚಿಸಿದ್ದುಂಟು!  ಒಮ್ಮೆ ಅವರ ಹೆಸರಿಗೊಂದು ಪತ್ರ ಬಂತು. ಅದನ್ನು ಒಡೆದು ನೋಡಿ ಓದುತ್ತಿದ್ದಂತೆ ಅವರ ಮುಖದಲ್ಲಿ ಆತಂಕದ ಛಾಯೆ ಮೂಡಿತು. ಸ್ವಲ್ಪ ಹೊತ್ತಾದ ನಂತರ ಅವರ ಸಹೋದರ ತ.ಸು.ಶಾಮರಾಯರನ್ನು ಕರೆದು ತಮ್ಮ ಅಲ್ಮೇರಾದಲ್ಲಿ ಎಷ್ಟು ಹಣವಿದೆ ನೋಡು ಎಂದರು. ಶಾಮರಾಯರು ಬೀರುವಿನ ಬೀಗ ತೆಗೆದು ಅದರಲ್ಲಿದ್ದ ನೂರಾ ಐವತ್ತು ರುಪಾಯಿಗಳನ್ನು ತಂದು ತಮ್ಮ ಅಣ್ಣನವರ ಕೈಗಿತ್ತರು. ಅದು ಸಾಕಾಗದು ಎಂದು ಸೊಸೈಟಿಯ ಪಾಸ್ ಪುಸ್ತಕ ತೆಗೆದು ನೋಡಿದಾಗ ಅದರಲ್ಲಿ ನಲವತ್ತು ರುಪಾಯಿ ಮಾತ್ರ ಬ್ಯಾಲೆನ್ಸ್ ಇತ್ತು. ತಮಗೆ ಸೊಸ್ಯೆಟಿಯಲ್ಲಿ ನೂರು ರುಪಾಯಿ ಓವರ್ ಡ್ರಾಫ್ಟ್ ಸೌಲಭ್ಯ ಇರುವುದನ್ನು ತಿಳಿದು ಒಂದು ನೂರು ರುಪಾಯಿಗೆ ಚೆಕ್ ಬರೆದುಕೊಟ್ಟು ಹಣ ತರಿಸಿದರು. ಹೀಗೆ ಸಂಗ್ರಹವಾದ ಇನ್ನೂರಾ ಐವತ್ತು ರು.ಗಳನ್ನು ಶಾಮರಾಯರ ಕೈಗೆ ಕೊಟ್ಟು, ತಮಗೆ ಬಂದ ಲಕೋಟೆಯ ಮೇಲೆ ವಿಳಾಸವೊಂದನ್ನು ಬರೆದು, ಯಾರೋ "ಪೂರ್ ಫೆಲೋ. ಲಾ ಕಾಲೇಜಿನ ಶುಲ್ಕ ಕಟ್ಟಿಲ್ಲವಂತೆ, ಪರೀಕ್ಷೆಗೆ ಕಟ್ಟಲು ಹಣವಿಲ್ಲದಿದ್ದರೆ, ವರ್ಷವೆಲ್ಲಾ ಓದಿದ್ದು ವ್ಯರ್ಥವಾಗುತ್ತದೆ, ಹೋಗಿ ಆತನಿಗೆ ಮನಿಯಾರ್ಡರ್ ಮಾಡಿ ಬಾ" ಎಂದು ಹೇಳಿ ಕಳುಹಿಸಿದರು. ಹಾಗೆಯೇ ಒಂದು ಎಚ್ಚರಿಕೆಯ ಮಾತನ್ನೂ ಹೇಳಿ ಕಳುಹಿಸಿದರು. ಏನೆಂದರೆ, ಮನಿಯಾರ್ಡರ್ ಮಾಡಿ ಹಿಂತಿರುಗುವಾಗ ವಿಳಾಸ ಬರೆದಿರುವ ಲಕೋಟೆಯನ್ನೂ, ರಸೀತಿಯನ್ನೂ ಅಲ್ಲೇ ಹರಿದು ಹಾಕಿ ಬರಬೇಕೆಂಬುದು. ಏಕೆಂದರೆ ತಾವು ಸಹಾಯ ಮಾಡಿದ್ದು ತಮ್ಮ ಮನೆಯವರಿಗೆ ತಿಳಿಯಬಾರದು ಎಂಬ ಉದ್ದೇಶವಿತ್ತು.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ,
 rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.