ಪಂಚಾಯಿತಿ ರಾಜ್ಯ ಸುಧಾರಣೆ
ರಾಜ್ಯದಲ್ಲಿ ಈಗ ಜಾರಿಯಲ್ಲಿರುವ ಪಂಚಾಯಿತಿ ರಾಜ್ಯ ವ್ಯವಸ್ಥೆಯ ಮೂಲ ಹಂದರ ಸಿದ್ಧವಾಗಿದ್ದು 1983-84ರ ಸುಮಾರಿನಲ್ಲಿ. ಪಂಚಾಯಿತಿ ರಾಜ್ಯ ವ್ಯವಸ್ಥೆಯ ಮೂಲಕ ಅಧಿಕಾರದ ವಿಕೇಂದ್ರೀಕರಣವಾಗಿ ಜನರಿಗೆ ಸ್ಥಳೀಯ ವಿಚಾರಗಳಲ್ಲಿ ಸಂಪೂರ್ಣ ಅಧಿಕಾರವನ್ನು ವಹಿಸಿಕೊಡುವುದೇ ಆ ವ್ಯವಸ್ಥೆಯ ಉದ್ದೇಶ.
ಮೂಲ ಕಾಯಿದೆಯನ್ನು ಅಂದಿನ ಪಂಚಾಯಿತಿ ರಾಜ್ಯ ಸಚಿವ ಅಬ್ದುಲ್ ನಜೀರ್ ಸಾಬ್, ಅವರ ಮಾರ್ಗದರ್ಶಿಯಂತೆ ಕೆಲಸ ಮಾಡಿದ ರಾಮಕೃಷ್ಣ ಹೆಗಡೆ ಅವರಿಗೆ ದೇಶದಲ್ಲಿ ರಾಷ್ಟ್ರೀಯ ವಿಕಾಸ ಯೋಜನೆ, ಸಮುದಾಯ ಅಭಿವೃದ್ಧಿಯ ಕಾರ್ಯಕ್ರಮಗಳ ಬ್ರಹ್ಮನೆಂದು ಬಿರುದು ಪಡೆದ ಶೈಲೇನ್ ಡೇ ಅವರ ಮಾರ್ಗದರ್ಶನವೂ ಇತ್ತು.
ಆದರೂ ವಿಧಾನಮಂಡಲದಿಂದ ಹೊರಬಿದ್ದ ಕಾಯಿದೆ, ಅದರ ಮೂಲ ಉದ್ದೇಶವನ್ನು ಪೂರ್ತಿಯಾಗಿ ಈಡೇರಿಸುವಂತಿರಲಿಲ್ಲ. ಅನಂತರ ಸರ್ಕಾರಗಳು ಬದಲಾದಂತೆ ಆ ಕಾಯಿದೆಯಲ್ಲೂ ಬದಲಾವಣೆಗಳಾದವು. ಸಾಮಾಜಿಕ ನ್ಯಾಯ ವಿತರಣೆ ನೀತಿಯನ್ನು ಪಂಚಾಯಿತಿ ರಾಜ್ಯ ಸಂಸ್ಥೆಗಳಲ್ಲೂ ಅಳವಡಿಸಿದಾಗ ಉದ್ದೇಶ ಎಷ್ಟೇ ಉದಾರವಾಗಿದ್ದರೂ, ನಿಜ ರಾಜಕೀಯದ ಒತ್ತಡಗಳಿಗೆ ಸಿಲುಕಿ ಇಡೀ ವ್ಯವಸ್ಥೆ ಈಗ ಬೆದರುಗೊಂಬೆಯಂತೆ ಆಗಿದೆ. ಜನತಾಂತ್ರಿಕ ಅಧಿಕಾರ ವಿಕೇಂದ್ರಿಕರಣದ ಚೌಕಟ್ಟು ಇರಬಹುದು, ಆದರೆ ಅದರ ತಿರುಳು ಇಲ್ಲದಂತಾಗಿದೆ.
ರಾಜೀವ ಗಾಂಧಿ ಅವರ ಕಾಲದಲ್ಲಿ ಪಂಚಾಯಿತಿ ರಾಜ್ಯ ಸಂಸ್ಥೆಗಳಿಗೆ, ಪೇಟೆ ಪಟ್ಟಣಗಳ ಸ್ಥಳೀಯ ಸಂಸ್ಥೆಗಳಿಗೆ ಸಂವಿಧಾನಾತ್ಮಕ ಸ್ಥಾನ - ಮಾನ ದೊರಕಿದ ಅನಂತರ, ಆ ಕಾರಣಕ್ಕಲ್ಲದೇ ಇದ್ದರೂ ಭ್ರಷ್ಟಾಚಾರ ಹಾಗೂ ಸಾಮಾಜಿಕ ಸಂಘರ್ಷವೂ ವ್ಯವಸ್ಥೆಯಲ್ಲಿ ನುಸುಳಿತು. ಈ ಇಪ್ಪತ್ತು ವರ್ಷಗಳಲ್ಲಿ ಹಲವಾರು ಬಾರಿ ಬದಲಾವಣೆಯಾಗಿರುವ ಕಾಯಿದೆಯಲ್ಲಿ ದಿವಂಗತ ಬಸವಲಿಂಗಪ್ಪ ಅವರ ಚಿಂತನೆ ಹಾಗೂ ಈ ವಿಷಯದ ತಜ್ಞರೆನಿಸಿದ ಮಣಿಶಂಕರ ಅಯ್ಯರ್ ಅವರ ಚಿಂತನೆಯನ್ನು ಅಳವಡಿಸಲಾಗಿದೆ. ಈ ಹಿನ್ನೆಲೆಯಲ್ಲಿ, ವಾಸ್ತವದಲ್ಲಿ ಪಂಚಾಯಿತಿ ರಾಜ್ಯ ಸಂಸ್ಥೆಗಳು ಸರಿಯಾಗಿ ಕೆಲಸ ಮಾಡಿ ಜನತಾಂತ್ರಿಕ ಅಧಿಕಾರ ವಿಕೇಂದ್ರಿಕರಣದ ಸಿದ್ಧಾಂತವನ್ನು ಕಾರ್ಯರೂಪಕ್ಕೆ ಇಳಿಸುವುದು ಸಾಧ್ಯವಾಗಿಲ್ಲ. ಆ ವ್ಯವಸ್ಥೆಯಲ್ಲೂ ಭ್ರಷ್ಟಾಚಾರ - ಜಾತೀಯತೆ ಹಾಗೂ ರಾಜಕೀಯ ಆಧರಿತ ಗುಂಪುಗಾರಿಕೆಯೂ ಸಾಕಷ್ಟು ಹಾವಳಿ ಮಾಡಿವೆ ಎನ್ನುವ ವರದಿಗಳೂ ಪ್ರಕಟವಾಗಿವೆ. ಇದೆಲ್ಲವನ್ನೂ ಗಮನಿಸಿ, ಸರ್ಕಾರ ಪಂಚಾಯಿತಿ ರಾಜ್ಯ ವ್ಯವಸ್ಥೆಯಲ್ಲಿ ಸಮಗ್ರ ಸ್ವರೂಪದ ಸುಧಾರಣೆಗಳನ್ನು ತರಲು ನಿರ್ಧರಿಸಿ, ಆ ಕಾಯಿದೆಯ ಬದಲಾವಣೆಗೆ ಸಲಹೆಗಳನ್ನು ನೀಡಲು ವಿಧಾನ ಸಭೆಯ ಮಾಜಿ ಸ್ಪೀಕರ್ ರಮೇಶ ಕುಮಾರ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿರುವುದು ಸ್ವಾಗತಾರ್ಹ.
ಈಗ ಜಾರಿಯಲ್ಲಿರುವ ಒಳ್ಳೆಯ ಹಾಗೂ ಸೈದ್ಧಾಂತಿಕವಾಗಿ ಸುಭದ್ರವಾಗಿರುವ ಎಲ್ಲ ವಿಧಿಗಳನ್ನು ಉಳಿಸಿಕೊಂಡು, ಆಧುನಿಕ ಚಿಂತನೆ ಹಾಗೂ ಸೌಲಭ್ಯಗಳ ಅನುಕೂಲವನ್ನೂ ಅಳವಡಿಸುವಂತಹ ಜವಾಬ್ದಾರಿಯ ಕೆಲಸ ಇದು. ಅದಕ್ಕೆ ಸರ್ಕಾರ ನಿಗದಿಪಡಿಸಿರುವ ಆರು ತಿಂಗಳ ಅವಧಿ ಸಾಕಾಗಬಹುದೋ, ಇಲ್ಲವೋ ಗೊತ್ತಿಲ್ಲ. ಇಂತಹ ಸಮಿತಿಗಳ ವರದಿಯ ಸಿದ್ಧತೆಯಲ್ಲಿ ಅಧ್ಯಕ್ಷರು ಹಾಗೂ ಕೆಲವೇ ಸದಸ್ಯರು ಆಸಕ್ತಿ ವಹಿಸಿ, ಉಳಿದವರು ಕೇವಲ ಹೆಸರಿಗಾಗಿ ಸದಸ್ಯರಾಗಿರುವ ಅಪಾಯವಿದೆ. ಈ ಮಹತ್ವದ ಸಮಿತಿಯಲ್ಲಿ ಹೀಗಾಗಬಾರದು. ಸಮಿತಿಯ ಎಲ್ಲ ಸದಸ್ಯರೂ ಕೆಲಸವನ್ನು ಗಂಭೀರವಾಗಿ ಪರಿಗಣಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

