ನಾಗರತ್ನಮ್ಮನವರ ಸೇವೆ
ಬೆಂಗಳೂರು ನಾಗರತ್ನಮ್ಮನವರು ದೇವದಾಸಿಯರ ಕುಲದಲ್ಲಿ ಜನಿಸಿದರೂ, ತಮ್ಮ ಗಾಯನ, ನರ್ತನದಿಂದ ಎಲ್ಲರ ಮನಗೆದ್ದು, ವಿರಾಗಿಣಿಯಾಗಿ ತಮ್ಮ ಇಡೀ ಬದುಕನ್ನು ಪರೋಪಕಾರಕ್ಕಾಗಿಯೇ ಮೀಸಲಾಗಿಟ್ಟವರು. ಅವರಿಗೆ ಆಶ್ರಯ ನೀಡಿ ಬೆಳೆಸಿದವರು ನ್ಯಾಯಾಧೀಶರಾಗಿದ್ದ ನರಹರಿರಾಯರು. ಬಿಡಾರಂ ಕೃಷ್ಣಪ್ಪ ಮತ್ತು ಆಸ್ಥಾನ ಕವಿ ಗಿರಿಭಟ್ಟರಲ್ಲಿ ವ್ಯಾಸಂಗ ಮಾಡಿ, ಸಂಗೀತ ಮತ್ತು ಸಾಹಿತ್ಯದಲ್ಲಿ ಪ್ರವೀಣರಾದರು. ನಂತರ ತಮ್ಮಯ್ಯನವರ ಬಳಿ ಸಂಗೀತ ಮತ್ತು ನರ್ತನವನ್ನು ಅಭ್ಯಾಸ ಮಾಡಿದರು. ನಂತರ ಪಿಟೀಲನ್ನು ವೆಂಕಟಸ್ವಾಮಪ್ಪನವರಿಂದ ಕಲಿತು ಇನ್ನೂ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮದ್ರಾಸಿಗೆ ಹೋದರು. ಅಲ್ಲಿಯೂ ತಮ್ಮ ಸಂಗೀತಾಭ್ಯಾಸವನ್ನು ಮುಂದುವರೆಸಿ ಅಪ್ರತಿಮ ಸಂಗೀತಗಾರರಾಗಿ ಹೆಸರು ಗಳಿಸಿದರು. ನಾಗರತ್ನಮ್ಮನವರಿಗೆ ತ್ಯಾಗರಾಜರ ಬಗ್ಗೆ ಅದೇನೋ ವಿಪರೀತ ವ್ಯಾಮೋಹ. ಹೀಗಾಗಿ ತ್ಯಾಗರಾಜರ ಕೀರ್ತನೆಗಳನ್ನೂ, ಕನ್ನಡ ದೇವರನಾಮಗಳನ್ನೂ ಭಕ್ತಿಪರವಶರಾಗಿ ಹಾಡುತ್ತಿದ್ದರೆ ಕೇಳುಗರ ಮನಸ್ಸು ಅರಳುತ್ತಿತ್ತು. ಅವರ ಕಚೇರಿಗಳೆಂದರೆ ರಸಿಕರಿಗೆ ರಸದೂಟ. ಹೀಗಾಗಿ ಮದ್ರಾಸು ಮತ್ತು ಮೈಸೂರು ಪ್ರಾಂತದಲ್ಲಿ ಅವರ ಅಭಿಮಾನಿಗಳು ತುಂಬಾ ಜನ ಇದ್ದರು. ಒಮ್ಮೆ ತ್ಯಾಗರಾಜರ ಆರಾಧನೆಯಂದು ಮನಃಪೂರ್ವಕ ಹಾಡಿ ಸೇವೆ ಸಲ್ಲಿಸಿ ಮಲಗಿದ್ದಾಗ ಅವರಿಗೊಂದು ಆಲೋಚನೆ ಬಂತು. ಅದೆಂದರೆ ತ್ಯಾಗರಾಜರ ಬೃಂದಾವನದ ಬಳಿ ಒಂದು ಮಂಟಪವನ್ನು ನಿರ್ಮಾಣ ಮಾಡಿ ರಾಮ ಸಂಕೀರ್ತನೆಗೆ ಅನುವಾಗಬೇಕೆಂಬುದು. ಅದಕ್ಕಾಗಿ ಹಣ ಸಂಗ್ರಹಿಸಲು ಅನೇಕ ಸ್ಥಳಗಳಲ್ಲಿ ಕಚೇರಿ ನಡೆಸಿದರು. ಕಟ್ಟಡದ ಕೆಲಸವನ್ನು ಪ್ರಾರಂಭಿಸಿಯೇ ಬಿಟ್ಟರು. ಆದರೆ ಹಣದ ಕೊರತೆಯುಂಟಾದಾಗ ತಮ್ಮ ಮನೆ, ತಮ್ಮೆಲ್ಲ ಒಡವೆಗಳನ್ನೂ ಮಾರಿ ಹಣ ಹೊಂದಿಸಿಕೊಂಡರು. ಅವರಿಗಿದ್ದ ಎರಡೂ ಮಕ್ಕಳು ಆಗಲೇ ಮೃತರಾದ್ದರಿಂದ ಅವರೊಬ್ಬ ವಿರಾಗಿಣಿಯಂತೆ ಜೀವಿಸುತ್ತಿದ್ದರು. ಹೀಗೆ ತ್ಯಾಗರಾಜ ಕ್ಷೇತ್ರದಲ್ಲಿ ಪ್ರಾರಂಭವಾದ ಆ ಪವಿತ್ರ ಕಾರ್ಯಕ್ಕೆ ಜನಸಹಾಯವೂ ಒದಗಿಬಂತು. ಕಟ್ಟಡ ಮುಗಿದಮೇಲೆ ನಾಗರತ್ನಮ್ಮನವರಿಗಾದ ಸಂತೋಷ ಅಷ್ಟಿಷ್ಟಲ್ಲ. ಇನ್ನು ತಮ್ಮ ಪ್ರಾಣತ್ಯಾಗ ಯಾವ ಘಳಿಗೆಯಲ್ಲಾದರೂ ಚಿಂತೆಯಿಲ್ಲ ಎಂದೆನಿಸಿತವರಿಗೆ. ಪ್ರತಿವರ್ಷವೂ ದೇಶದ ನಾನಾ ಮೂಲೆಗಳಿಂದ ತಿರುವಯ್ಯಾರಿಗೆ ಬಂದು ಸೇರುವ ಭಕ್ತಾಗ್ರಣಿಗಳು ಇಂದಿಗೂ ನಾಗರತ್ನಮ್ಮನವರ ಪವಿತ್ರ ಕಾರ್ಯವನ್ನು ಗೌರವದಿಂದ ಸ್ಮರಿಸುತ್ತಾರೆ. ಇನ್ನು ನಾಗರತ್ನಮ್ಮನವರು ಅದೇ ಸ್ಥಳದಲ್ಲಿ "ಮೈಸೂರು ಛತ್ರ" ನಿರ್ಮಿಸಲು ಮುಂದಾಗಿದ್ದರು. ಆದರೆ ಅದಕ್ಕೂ ಮುನ್ನ ಇಹಲೋಕ ತ್ಯಜಿಸಿದರು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

