ಸಂಪಾದಕೀಯ

ಸಂಪ್ರದಾಯವನ್ನು ತಿದ್ದುವಾಗ ಇದೆಲ್ಲಾ ಮಾಮೂಲಿ

Published On :

ಎ.ಪಿ.ಜೆ.ಅಬ್ದುಲ್ ಕಲಾಂ ದ್ವೀಪ ಪಟ್ಟಣವಾದ ರಾಮೇಶ್ವರಂನಲ್ಲಿ ಒಂದು ಬಡಕುಟುಂಬದಲ್ಲಿ ಜನಿಸಿ, ತಮ್ಮ ಸ್ವಸಾಮರ್ಥ್ಯದಿಂದ ಓದಿ ವಿಜ್ಞಾನಿಗಳಾಗಿ, ರಾಷ್ಟ್ರಪತಿಗಳಾಗಿ ಹೆಸರುಗಳಿಸಿದವರು. ಸೋಲುಗಳನ್ನು ಮತ್ತು ಯಶಸ್ಸುಗಳನ್ನು ಸಮಾನವಾಗಿ ಸ್ವೀಕರಿಸಿದ ಸ್ಥಿತಪ್ರಜ್ಞರಾಗಿ, ನಿಷ್ಕಲ್ಮಶ ಜೀವನವನ್ನು ನಡೆಸುತ್ತಿರುವ ಕಲಾಂ ಎಲ್ಲರಿಗೂ ಆದರ್ಶವಾಗಿದ್ದಾರೆ.  ಅವರ ಜೀವನವೇ ಒಂದು ಸಂದೇಶವಾಗಿದೆ. ಇಂತಹ ವಿಶಿಷ್ಟ ವ್ಯಕ್ತಿತ್ವದ ಕಲಾಂ ಅವರನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡಲು ಕಾರಣವಾದ ಅನೇಕ ಅಂಶಗಳು ಅವರ ಜೀವನದಲ್ಲಿ ನಡೆದಿವೆ. ಅಂತಹ ಒಂದು ಘಟನೆಯನ್ನು ಕಲಾಂ ಅವರು ತಮ್ಮ "ಅಗ್ನಿಯ ರೆಕ್ಕೆಗಳು" ಕೃತಿಯಲ್ಲಿ ದಾಖಲಿಸಿದ್ದಾರೆ. ಅವರು ಬಾಲ್ಯದಲ್ಲಿ ವಾಸವಾಗಿದ್ದ ರಾಮೇಶ್ವರಂನಲ್ಲಿ ವಿವಿಧ ಧರ್ಮದವರು ತಮ್ಮದೇ ಆದ ಸಂಪ್ರದಾಯದ ಚೌಕಟ್ಟಿನಲ್ಲಿ ಬಾಳುತ್ತಿದ್ದರು. ಅವರ ವಿಜ್ಞಾನ ಗುರುಗಳಾದ ಶಿವ ಸುಬ್ರಹ್ಮಣ್ಯ ಅಯ್ಯರ್ ತಾನೊಬ್ಬ ಸಂಪ್ರದಾಯಸ್ಥ ಬ್ರಾಹ್ಮಣನಾಗಿದ್ದರೂ, ಓರ್ವ ಕ್ರಾಂತಿಕಾರಿ ಮನೋಭಾವದ ವ್ಯಕ್ತಿಯಾಗಿದ್ದರು. ಎಲ್ಲ ಜಾತಿಯ, ಧರ್ಮದವರೊಡನೆ ಅವರು ಒಡನಾಟವನ್ನಿಟ್ಟುಕೊಂಡಿದ್ದರು. ಅವರಿಗೆ ಕಲಾಂರನ್ನು ಕಂಡರೆ ಅದೇನೋ ಒಂದು ರೀತಿಯ ಮಮಕಾರ. ಅವರು ಯವಾಗಲೂ ಹೇಳುತ್ತಿದ್ದರು, "ಕಲಾಂ ನೀನೋರ್ವ ಪ್ರತಿಭಾವಂತನಾಗಿ ಬೆಳೆದು ದೊಡ್ಡ ನಗರಗಳಲ್ಲಿ ವಿದ್ಯಾವಂತರ ಸಾಲಿನಲ್ಲಿ ನಿಲ್ಲುವಂತಾಗಬೇಕು" ಎಂದು. ಒಮ್ಮೆ ಅವರು ಕಲಾಂರನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದ್ದರು.
ಮನೆಯ ಅಡುಗೆ ಕೋಣೆಯಲ್ಲಿ ತಮ್ಮೊಡನೆ ಎಲೆಹಾಕಿ, ಮಣೆ ಇಟ್ಟು ತಮ್ಮ ಪತ್ನಿಗೆ ಬಡಿಸಲು ಹೇಳಿದರು. ಆದರೆ ಅವರ ಸಂಪ್ರದಾಯಸ್ಥ ಪತ್ನಿ ಒಬ್ಬ ಮುಸ್ಲಿಂ ಬಾಲಕನನ್ನು ಕರೆತಂದು ಅದೂ ಅಡುಗೆ ಮನೆಯಲ್ಲಿ ಮಡಿವಂತಿಕೆಯ ಭೋಜನ ಮಾಡಿಸುವುದು ಇಷ್ಟವಾಗದೇ ಬಡಿಸಲು ನಿರಾಕರಿಸಿದರು. ಆಗ ಶಿವ ಸುಬ್ರಹ್ಮಣ್ಯ ಅಯ್ಯರ್‌ರವರೇ ಸ್ವತಃ ಬಡಿಸಿ, ಕಲಾಂರ ಜೊತೆಗೆ ಕುಳಿತು ಊಟಮಾಡಿದರು. ಕಲಾಂ ಸಂಕೋಚದಿಂದಲೇ ಊಟಮಾಡಿದ ಪರಿ, ನೀರುಕುಡಿದ ರೀತಿ, ಬಳಿಕ ನೆಲ ಶುದ್ಧಗೊಳಿಸಿದ ರೀತಿ ಎಲ್ಲವನ್ನೂ ಗಮನಿಸಿದ ಅಯ್ಯರ್ ಅವರ ಪತ್ನಿ ದಂಗಾದರು. ಹೊರಡುವ ಮುನ್ನ ಶಿವಸುಬ್ರಹ್ಮಣ್ಯ ಅಯ್ಯರ್ ಕಲಾಂರನ್ನು ಮತ್ತೊಮ್ಮೆ ಮರು ವಾರ ಊಟಕ್ಕೆ ಆಹ್ವಾನಿಸಿದರು. ಕಲಾಂರ ತುಮುಲವನ್ನು ಗ್ರಹಿಸಿದ ಅಯ್ಯರ್, ನೀನೇನೂ ಸಂಕೋಚಪಡುವ ಅವಶ್ಯಕತೆಯಿಲ್ಲ, ಒಮ್ಮೆ ಒಂದು ಸಂಪ್ರದಾಯವನ್ನು ತಿದ್ದಲು ಹೊರಟಾಗ, ಇದನ್ನೆಲ್ಲಾ ಎದುರಿಸಬೇಕಾಗುತ್ತದೆ ಎಂದು ಹೇಳಿದರು. ಅದರಂತೆ ಮರುವಾರ ಅಬ್ದುಲ್ ಕಲಾಂ ತಮ್ಮ ಗುರುಗಳ ಮನೆಗೆ ಊಟಕ್ಕೆ ಬಂದಾಗ ಸ್ವತಃ ಶಿವಸುಬ್ರಹ್ಮಣ್ಯ ಅಯ್ಯರ್‌ರ ಪತ್ನಿಯೇ ಅಡುಗೆ ಮನೆಯಲ್ಲಿ ಎಲೆಹಾಕಿ ಊಟ ಬಡಿಸಿದರು.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.