ತಪ್ಪಾಯ್ತು ತಿದ್ಕೋತೀವಿ
ಬೆಳಗಾವಿ ಜಿಲ್ಲೆಯ ಅಥಣಿಯಿಂದ ರಂಜಿತಾ ಸೀತಾರಾಮ ರಣಸಿಂಗೆ ಅವರು ಬರೆಯುತ್ತಾರೆ- 'ಜ.27ರ ಕನ್ನಡಪ್ರಭದಲ್ಲಿ 64ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆದ ಪಥಸಂಚಲನದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆ ಪ್ರದರ್ಶನಗೊಂಡಿತು. ಈ ಮೂಲಕ ದೇಶದ ಗಮನಸೆಳೆಯಿತು. ರು.30 ಲಕ್ಷ ಮತ್ತು 6 ತಿಂಗಳ ಸತತ ಪ್ರಯತ್ನದ ಫಲವಾಗಿತ್ತು ಇದು. ನಮ್ಮ ಕಿನ್ನಾಳ ಕಲೆಯ ಸ್ಥಬ್ದ ಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸದೇ ಮುಖಪುಟದಲ್ಲಿ ಬೇರೆ ಬೇರೆ ರಾಜ್ಯಗಳ ಸ್ಥಬ್ದ ಚಿತ್ರವನ್ನು ಪ್ರಕಟಿಸಿದ್ದೀರಿ. ಕಿನ್ನಾಳ ಸ್ಥಬ್ದಚಿತ್ರವನ್ನು 10ನೇ ಪುಟದಲ್ಲಿ ಪ್ರಕಟಿಸಿದ್ದೀರಿ ಇದು ಸರಿಯೇ?'
'ಬೇರೆ ಪತ್ರಿಕೆಯವರು ನಮ್ಮ ರಾಜ್ಯದ ಕಿನ್ನಾಳ ಕಲೆಯನ್ನು ಮುಖಪುಟದಲ್ಲಿ ಮಾಹಿತಿಯ ಜತೆಗೆ ಪ್ರಕಟಿಸಿದ್ದಾರೆ. ಆದರೆ ಕಿನ್ನಾಳ ಸ್ಥಬ್ದಚಿತ್ರವು ನಿಮಗೆ ತಡವಾಗಿ ದೊರೆಯಿತೋ ತಿಳಿಯಲಿಲ್ಲ' ಎಂದಿದ್ದಾರೆ.
ಜ.27ರಂದು ನಮ್ಮ ಮುಖಪುಟದಲ್ಲಿ ಅಷ್ಟೇ ಅಗಲವಾದ ಫೋಟೊ ಪ್ರಕಟವಾಗಿದೆ. ಕಿನ್ನಾಳ ಕಲೆಯ ಚಿತ್ರ ಗಾತ್ರ ಬೇರೆಯಾಗಿತ್ತು. ಕಿನ್ನಾಳ ಕಲೆಯ ಚಿತ್ರ ಲಭ್ಯವಾಗಿರಲಿಲ್ಲವೆಂದಲ್ಲ. ಸಾಕಷ್ಟು ಪ್ರಮುಖ ಸುದ್ದಿಗಳೂ ಇದ್ದಿದ್ದರಿಂದ ಕಿನ್ನಾಳ ಕಲೆಯ ಚಿತ್ರವನ್ನು ಒಳಪುಟದಲ್ಲಿ ಪ್ರಕಟಿಸಲಾಗಿದೆ. ಬಹುಮಾನ ದೊರೆತಿದ್ದರೆ ಖಂಡಿತ ಮುಖಪುಟದಲ್ಲಿ ಪ್ರಕಟಿಸುತ್ತಿದ್ದೆವು. ಇದಕ್ಕೂ ಮೇಲಾಗಿ ಜ.23ರಂದೇ ನಮ್ಮ ಮುಖಪುಟದಲ್ಲಿ ಕಿನ್ನಾಳ ಕಲೆಯನ್ನೊಳಗೊಂಡ ರಾಜ್ಯದ ಟ್ಯಾಬ್ಲೋದ ಚಿತ್ರವನ್ನು ಪ್ರಕಟಿಸಿದ್ದೆವು.
ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ- 'ಜ.25ರ ಮುಖಪುಟದ ಸುದ್ದಿ ಸಂಕ್ಷೇಪ ಕಾಲಂನಲ್ಲಿ 'ಸುಭಾಷ್ ಚಂದ್ರ ಬೋಸ್ ಜನ್ಮದಿನ' ಎಂದು ಪ್ರಕಟವಾಗಿದೆ. 'ಸುಭಾಶ್ಚಂದ್ರ' ಎಂಬುದು ಸರಿಯಾದ ರೂಪ. ಅದನ್ನು 'ಸುಭಾಸ್ ಚಂದ್ರ' ಎಂದು ಬರೆದರೆ ತಪ್ಪಾಗಲಾರದು. ಸುಭಾಃಚಂದ್ರ. 'ಸು' ಉಪಸರ್ಗ. 'ಭಾಃ' ಎಂದರೆ ಬೆಳಕು, ಪ್ರಕಾಶ. ಸಂಧಿಯಾಗುವಾಗ ವಿಸರ್ಗದ ಮುಂದೆ 'ಚ' ವ್ಯಂಜನ ಬಂದರೆ ವಿಸರ್ಗವು ಶಕಾರವಾಗುತ್ತದೆ. ಆಗ 'ಸುಭಾಶ್ಚಂದ್ರ' ಎಂದಾಗುತ್ತದೆ. 'ಸುಭಾಸ ಚಂದ್ರ' ಎಂದರೂ ಸಾಧುವೆನಿಸುತ್ತದೆ.'
'ಹರಿಃ ಚಂದ್ರ ಹರಿಶ್ಚಂದ್ರ. ಸುಭಾಸಚಂದ್ರ ಎಂದರೆ ಒಳ್ಳೆಯ ಬೆಳಕನ್ನು ಬೀರುವ ಚಂದ್ರನೆಂದು ಅರ್ಥ. ಸುಭಾಶ್ಚಂದ್ರನಲ್ಲಿ 'ಭಾ' ಎಂಬುದು ಧಾತುವೇ ವಿನಾ 'ಭಾಷ್' ಎಂಬ ಧಾತುವಿಲ್ಲ. ಶುಭಾಶಯ ಎಂಬ ಪದವನ್ನು ಬಳಸುವಲ್ಲೂ ಈ ರೀತಿಯ ಗೊಂದಲದಿಂದ ವಿಶೇಷವಾಗಿ ಜಾಹೀರಾತುಗಳಲ್ಲಿ ಶುಭಾಷಯ ಎಂದು ತಪ್ಪಾಗಿ ಬಳಸುತ್ತಾರೆ. ಕನ್ನಡಪ್ರಭದಲ್ಲೂ ಬಹಳ ಸಲ ಇದನ್ನು ಗಮನಿಸಿಯೇ ಪ್ರಸ್ತಾಪಿಸಿದ್ದೇನೆ. 'ಶುಭ ಆಶಯ ಸೇರಿ ಶುಭಾಶಯ' ಆಗಬೇಕು. ಇನ್ನು 'ಸುಭಾಷಿತ' ಎಂಬ ಪದವನ್ನೂ ಕೆಲವರು ಗೊಂದಲದಿಂದ 'ಶುಭಾಷಿತ' ಎಂದು ತಪ್ಪಾಗಿ ಬರೆಯುತ್ತಾರೆ. ಇಲ್ಲಿ ಸು ಉಪಸರ್ಗ, ಭಾಷ್ ಧಾತು, ತಾ ಎಂಬ ಕೃತ್ ಪ್ರತ್ಯಯ ಆಗ ಸುಭಾಷಿತ ಎಂದಾಗುತ್ತದೆ. ಇಲ್ಲಿ ಶುಭ ಎಂಬ ಪದವಿಲ್ಲ.'
ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಎನ್.ಜಿ. ವೇಣುಗೋಪಾಲ ಅವರು 'ಅವಗಡ' ಎಂಬ ಶಬ್ದದಲ್ಲಿ 'ಘ' ಮತ್ತು 'ಢ' ಎರಡೂ ಮಹಾಪ್ರಾಣವಲ್ಲ ಎಂದಿದ್ದರು. ಆದರೆ 'ಅವಘಡ' ಎಂದು ಹಲವು ನಿಘಂಟುಗಳಲ್ಲಿ ಬರೆಯಲಾಗಿದೆ.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

