1794 ರಿಂದ 1797 ರವರೆಗೆ ಉತ್ತರಾದಿ ಮಠದ ಸ್ವಾಮಿಗಳಾಗಿದ್ದ ಸತ್ಯವರ ತೀರ್ಥರು ತುಂಬಾ ಸಾತ್ವಿಕ ಸ್ವಭಾವದವರು. ವ್ಯಾಕರಣ, ಮೀಮಾಂಸೆ ಮತ್ತಿತರ ಶಾಸ್ತ್ರಗಳಲ್ಲಿ ಪಾರಂಗತರಾಗಿದ್ದ ಸ್ವಾಮಿಗಳು ಮೃದುಭಾಷಿಗಳೂ, ತಮ್ಮ ಆರಾಧ್ಯ ದೈವ ರಾಮಚಂದ್ರರ ಪರಮ ಭಕ್ತರೂ ಆಗಿದ್ದರು. ಪ್ರತಿನಿತ್ಯ ಸೀತಾಸಮೇತ ರಾಮದೇವರನ್ನು ಪೂಜಿಸುತ್ತಿದ್ದ ಶ್ರೀಗಳವರಿಗೆ ರಾಮದೇವರನ್ನು ಪೂಜಿಸಿದಷ್ಟೂ ಪೂಜಿಸಬೇಕೆನಿಸುತ್ತಿತ್ತು. ಏಕೆಂದರೆ ಅದು ಅವರಿಗೆ ಕೇವಲ ಮೂರ್ತಿಯಾಗಿರದೆ ಸಾಕ್ಷಾತ್ ದೈವಸ್ವರೂಪವೇ ಆಗಿತ್ತು. ಹೀಗಾಗಿ ಅವರು ರಾಮದೇವರ ಮೂರ್ತಿಯನ್ನು ಸದಾ ಭಕ್ತಿಯಿಂದ ನೆನೆಯುತ್ತಿದ್ದರು.
ಒಮ್ಮೆ ಮಠಕ್ಕೆ ಕಳ್ಳತನಕ್ಕಾಗಿ ಬಂದ ಕಳ್ಳನಿಗೆ ಈ ದೇವರ ಪೆಟ್ಟಿಗೆಯ ಮೇಲೆ ಕಣ್ಣು ಬಿತ್ತು. ಅದನ್ನು ತೆರೆದು ನೋಡಿದಾಗ ಮುದ್ದಾದ ಮೂರ್ತಿಯ ಜೊತೆ ಅಮೂಲ್ಯವಾದ ವಜ್ರಾಭರಣಗಳೂ ಇದ್ದುದು ಅವನ ಗಮನಕ್ಕೆ ಬಂತು. ಇಂತಹ ಅಪೂರ್ವ ಸಂಪತ್ತನ್ನು ಅವನು ತನ್ನ ಜನ್ಮದಲ್ಲಿ ನೋಡಿರಲಿಲ್ಲ. ಹೀಗಾಗಿ ಅದನ್ನು ಮೆಲ್ಲನೆ ಎತ್ತಿಕೊಂಡು ಪರಾರಿಯಾದ. ಮಾರನೇ ದಿನ ಆಶಾಢ ಶುದ್ಧ ಚತುರ್ಥಿಯಂದು ಸ್ವಾಮಿಗಳು ಪೂಜೆ ಮಾಡಲೆಂದು ನೋಡುತ್ತಾರೆ, ರಾಮದೇವರು ಇದ್ದ ಪೆಟ್ಟಿಗೆಯೇ ನಾಪತ್ತೆ. ಅವರಿಗಾದ ಆಘಾತ, ದುಃಖ, ನಿರಾಶೆ ಅಷ್ಟಿಷ್ಟಲ್ಲ. ತಮ್ಮ ಆರಾಧ್ಯ ದೇವರು ಸಿಗುವವರೆಗೂ ತಾವು ಉಪವಾಸವಿರುವುದಾಗಿ ಘೋಷಿಸಿ ಉಪವಾಸಕ್ಕೆ ಕುಳಿತೇಬಿಟ್ಟರು. ಒಂದುವಾರ ನಿಟ್ಟುಪವಾಸ ಮಾಡಿದರೂ ಮೂರ್ತಿ ಪತ್ತೆಯಾಗಲಿಲ್ಲ. ಆ ಉಪವಾಸ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿತು. ಆಗ ದಿವಾನ್ ಪೂರ್ಣಯ್ಯನವರು ಬಂದು ಉಪವಾಸವನ್ನು ಕೈಬಿಡಬೇಕೆಂತಲೂ, ಮೂರ್ತಿಯನ್ನು ಹೇಗಾದರೂ ಪತ್ತೆ ಮಾಡುವುದಾಗಿಯೂ ಮಾಡಿಕೊಂಡ ಮನವಿಗೆ ಸ್ವಾಮಿಗಳು ಸ್ಪಂದಿಸಲಿಲ್ಲ. ಅವರು ತಮ್ಮ ಉಪವಾಸವನ್ನು ಮುಂದುವರೆಸಿದರು.
ಇಪ್ಪತ್ತೊಂದನೆಯ ದಿನ ಕಳ್ಳನಿಗೆ ಅದೇನು ಅನ್ನಿಸಿತೋ ಏನೋ ಒಡವೆಗಳನ್ನು ತೆಗೆದುಕೊಂಡು ದೇವರ ಮೂರ್ತಿಗಳನ್ನು ಮಾತ್ರ ಒಂದು ಬಾಳೆ ಎಲೆಯಲ್ಲಿ ಸುತ್ತಿಕೊಂಡು ಮಠದ ಆವರಣಕ್ಕೆ ಬಂದು ಇಟ್ಟುಹೋದ. ಸ್ವಾಮೀಜಿಯವರು ತಮ್ಮ ಇಷ್ಟದೈವವನ್ನು ಕಂಡು ಆನಂದ ತುಂದಲಿತರಾದರು. ಒಡವೆ ಹೋದರೆ ಹೋಗಲಿ ತಮಗೆ ವಿಗ್ರಹಗಳಾದರೂ ಸಿಕ್ಕಿತಲ್ಲ ಎಂದು ಆನಂದಿಸಿದರು. ಸ್ವಾಮಿಗೆ ಮನಸಾರೆ ಪೂಜೆ ಸಲ್ಲಿಸಿದ ನಂತರ ಆಹಾರ ಸೇವಿಸಿದರು. ಆದರೆ ಉಪವಾಸದಿಂದ ಕಂಗೆಟ್ಟಿದ್ದ ಅವರಿಗೆ ಅನಾರೋಗ್ಯ ಕಾಡಿತು. ಕೊನೆಗೆ ತಮ್ಮ ಪೀಠಕ್ಕೆ ಸತ್ಯಧರ್ಮರನ್ನು ನೇಮಿಸಿ, ಎರಡೇ ದಿನಗಳಲ್ಲಿ ಪರಮಾತ್ಮನ ಪಾದಗಳಲ್ಲಿ ಐಕ್ಯರಾದರು. ಇವರ ಬೃಂದಾವನವನ್ನು ಗೌರಿಬಿದನೂರು ಬಳಿಯ ಸಂತೆಬಿದನೂರಿನಲ್ಲಿ ದಿವಾನ್ ಪೂರ್ಣಯ್ಯನವರ ಉಸ್ತುವಾರಿಯಲ್ಲಿ ಕಟ್ಟಿಸಲಾಯಿತು. ಹೀಗೆ ದೇವರಿಗಾಗಿ ಪ್ರಾಣತ್ಯಾಗ ಮಾಡಿದವರು ನಮ್ಮ ಇತಿಹಾಸದಲ್ಲಿ ಅಪರೂಪ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ