ಮಾಸ್ತಿ ವೆಂಕಟೇಶ ಅಯ್ಯಂಗಾರರು ಒಂದು ಪದ್ಧತಿಯನ್ನು ಬೆಳೆಸಿಕೊಂಡು ಬಂದಿದ್ದರು. ಯಾರಾದರೂ ಸಾಹಿತಿಗಳು, ಕಲಾವಿದರು ತೊಂದರೆಯಲ್ಲಿದ್ದುದು ಕಂಡುಬಂದರೆ ಅವರಿಗೆ ಗುಪ್ತವಾಗಿ ಹಣ ಸಹಾಯಮಾಡುತ್ತಿದ್ದರು. ದೂರದಲ್ಲಿದ್ದರೆ ಮನಿಯಾರ್ಡರ್ ಕಳುಹಿಸುತ್ತಿದ್ದರು. ಹತ್ತಿರದಲ್ಲಿದ್ದರೆ ತಾವೇ ಸ್ವತಃ ಹೋಗಿ ಧನ ಸಹಾಯ ಮಾಡುತ್ತಿದ್ದರು. ಅದನ್ನು ಅವರು ಯಾರಿಗೂ ತಿಳಿಸುತ್ತಿರಲಿಲ್ಲ ಕೂಡ. ಹೀಗೆ ಅವರಿಂದ ಅಯಾಚಿತವಾಗಿ ಸಹಾಯ ಪಡೆದ ಅನೇಕರು ಅದನ್ನು ಬೇರೆಯವರಲ್ಲಿ ಸಂತಸದಿಂದ ಹಂಚಿಕೊಂಡದ್ದೂ ಇದೆ.
ಒಮ್ಮೆ ಮಾಸ್ತಿಯವರಿಗೆ ಕರೀಂಖಾನರು ಕಷ್ಟದಲ್ಲಿರುವುದು ಗೊತ್ತಾಯಿತು. ಆಗ ಸ್ವತಃ ತಾವೇ ಕರೀಂ ಖಾನರ ರೂಮಿನ ಮೆಟ್ಟಿಲೇರಿ ಬಂದು ಖಾನರ ಕಷ್ಟ ಸುಖ ವಿಚಾರಿಸಿದರು. ಕರೀಂ ಖಾನರು ತಮ್ಮ ಕೋಣೆಗೆ ಬಂದ ಮಾಸ್ತಿಯವರಿಗೆ ಸೂಕ್ತ ಗೌರವ ನೀಡಿ, 'ಏನೋ ದೇವ್ರು ನಡಸ್ತಾ ಇದ್ದಾನೆ' ಎಂದರು. ಆಗ ಮಾಸ್ತಿಯವರು ತಾವು ತಂದಿದ್ದ ಹಣವನ್ನು ನೀಡಿ, ತೆಗೆದುಕೊಳ್ಳಲು ವಿನಂತಿಸಿದರು. ಅದಕ್ಕೆ ಕರೀಂ ಖಾನರು, 'ನೀವು ಅನೇಕರಿಗೆ ಇದೇ ರೀತಿ ಸಹಾಯ ಮಾಡಿದ್ದೀರಾ ಎಂದು ನನಗೆ ತಿಳಿದಿದೆ. ಆದರೆ ನನಗೀಗ ಹಣದ ಅವಶ್ಯಕತೆಯಿಲ್ಲ, ನನಗೆ ಅಗತ್ಯ ಬಿದ್ದಾಗ ಕೇಳ್ತೀನಿ' ಎಂದು ನಯವಾಗಿ ಮಾಸ್ತಿಯವರ ಸಹಾಯವನ್ನು ನಿರಾಕರಿಸಿದರು. ಬಲವಂತ ಮಾಡಿದಾಗಲೂ ಅದೇ ಉತ್ತರ. ಸುತಾರಾಂ ಹಣವನ್ನು ಸ್ವೀಕರಿಸಲೇ ಇಲ್ಲ. ಈ ಘಟನೆಯನ್ನು ಕರೀಂ ಖಾನರು ಸದಾ ನೆನೆಸಿಕೊಂಡು ಹೇಳುತ್ತಿದ್ದುದು ಹೀಗೆ. 'ಮಾಸ್ತಿಯವರನ್ನು ನಾನು ಸದಾ ನೆನೆಯುತ್ತೇನೆ. ಏಕೆಂದರೆ, ಅವರ ಆತ್ಮೀಯತೆ, ಕಷ್ಟದಲ್ಲಿರುವರನ್ನು ಕಂಡು ಮರುಗುವ ಹೃದಯ ವೈಶಾಲ್ಯ ದೊಡ್ಡದು. ಸ್ವಜಾತಿಯವವರಲ್ಲ, ಜೊತೆಗಾರರಲ್ಲ, ಏನೋ ಪಾಪ ಕಷ್ಟದಲ್ಲಿದ್ದಾನೆ ಸಹಾಯ ಮಾಡಬೇಕೆಂಬ ಮರುಕ ಹುಟ್ಟಬೇಕಾದರೆ ಸಣ್ಣ ಮಾತಲ್ಲ. ಹಿಂದೂ ಮುಸ್ಲಿಂ ದ್ವೇಷ ಹರಡುತ್ತಿರುವ ಈ ದಿನಗಳಲ್ಲಿ ಅವರು ನನ್ನನ್ನು ಹುಡುಕಿಕೊಂಡು ಬಂದು ಹಣ ಸಹಾಯ ಮಾಡುವುದು ಅವರ ದೊಡ್ಡ ಗುಣ. ಈ ಘಟನೆ ಮಾಸ್ತಿಯವರು ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಮನೋಭಾವವನ್ನೂ, ಅಯಾಚಿತವಾಗಿ ಸ್ವೀಕರಿಸದ ಕರೀಂ ಖಾನರ ಸ್ವಾಭಿಮಾನವನ್ನೂ ತಿಳಿಸಿಕೊಡುತ್ತದೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ