ನಾನು ಚಿಕ್ಕವನಿದ್ದಾಗ ಹೊಳಲ್ಕೆರೆಯಲ್ಲಿದ್ದ ನಮ್ಮ ತಾತನ ಮನೆಗೆ ಹೋಗುತ್ತಿದ್ದುದುಂಟು. ಹಾಗೆ ಒಮ್ಮೆ ಹೋಗಿದ್ದಾಗ ಕಚ್ಚೆಪಂಚೆ, ಓಪನ್ ಕಾಲರ್ ಕೋಟು ಧರಿಸಿದ ಒಬ್ಬ ಗಣ್ಯರನ್ನು ಕಂಡಿದ್ದೆ. ಅವರು ಸಮಾಜದ ಪ್ರತಿಷ್ಠಿತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಕೋದಂಡರಾಮಯ್ಯ ಎಂದು ನಂತರ ತಿಳಿದು ಬಂತು. ನಾನು ಪ್ರಾಯಕ್ಕೆ ಬರುವಾಗಲೇ ಅವರು ಇಹಲೋಕ ತ್ಯಜಿಸಿದ್ದರು. ಆದರೂ ಅವರ ಬಗ್ಗೆ ನಮ್ಮ ತಂದೆ, ತಾತ ಹೇಳುತ್ತಿದ್ದುದನ್ನು ಕೇಳಿದಾಗ ಅವರ ಬಗ್ಗೆ ಗೌರವಭಾವನೆ ಉಂಟಾಯಿತು.
ಕೋದಂಡರಾಮಯ್ಯನವರು ಶ್ರೀಮಂತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರಾದರೂ ಸಮಾಜದಲ್ಲಿ ಆಗಿನ ಕಾಲದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದ ಲಂಬಾಣಿ ಜನರ ಕಲ್ಯಾಣಕ್ಕೆ ಪಣತೊಟ್ಟಿದ್ದರು. ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗಲೇ ಅಂಗಡಿಯವನೊಬ್ಬ ಲಂಬಾಣಿ ಮಹಿಳೆಗೆ ಹೊಡೆಯುವುದನ್ನು ನೋಡಿ ಮನಕರಗಿ, ಇಂತಹ ಮುಗ್ಧ ಜೀವಿಗಳಿಗೆ ಏನಾದರೂ ಮಾಡಬೇಕೆಂದು ನಿರ್ಧರಿಸಿದರು. ದೊಡ್ಡವರಾದ ಮೇಲೆ ತಂದೆಯವರ ಮನವೊಲಿಸಿ ಸುಮಾರು ಮೂವತ್ತು ಎಕರೆ ಭೂಮಿಯನ್ನು ಲಂಬಾಣಿ ಕುಟುಂಬಗಳಿಗೆ ದಾನ ನೀಡಿದರು. ರೆವಿನ್ಯೂ ಇನ್ಸ್ಪೆಕ್ಟರ್ ಆಗಿ ಸರ್ಕಾರಿ ಸೇವೆಯನ್ನು ಸೇರಿದಾಗಲಂತೂ ಆ ಹುದ್ದೆ ಜನಸೇವೆಗೆಂದೇ ಮೀಸಲಾಯಿತು. ಒಮ್ಮೆ ದರಖಾಸ್ತಿನಲ್ಲಿ ಲಂಬಾಣಿ ತಾಂಡಕ್ಕೆ ಉಚಿತವಾಗಿ ಜಮೀನು ನೀಡಬೇಕೆಂದು ಸರ್ಕಾರಕ್ಕೆ ಶಿಫಾರಸು ಮಾಡಿದಾಗ ಇವರ ಶಿಫಾರಸನ್ನು ಸರ್ಕಾರ ಮಾನ್ಯ ಮಾಡಲಿಲ್ಲ. ಆಗ ಅವರು ತಮ್ಮ ಸರ್ಕಾರಿ ಹುದ್ದೆಗೆ ತಿಲಾಂಜಲಿ ನೀಡಿ, ಹೊರಬಂದರು. ಕೃಷಿ ವೃತ್ತಿಯನ್ನವಲಂಬಿಸಿ ಅದರ ಜೊತೆ ಲಂಬಾಣಿ ಜನರ ಅಭಿವೃದ್ಧಿಗೆ ಪಣತೊಟ್ಟರು. ಅವರಿಗಿದ್ದ ಕುಡಿತದ ಚಟವನ್ನು ಬಿಡಿಸುವುದು, ಶುಚಿತ್ವ, ಅವರ ಮಕ್ಕಳಿಗೆ ಶಿಕ್ಷಣ ಕೊಡಿಸುವುದು, ತಾಂಡಾಗಳನ್ನು ತಾವೇ ಮುಂದೆ ನಿಂತು ಸ್ವಚ್ಛ ಮಾಡುವುದು, ಜನರಲ್ಲಿದ್ದ ಮೂಢನಂಬಿಕೆಗಳನ್ನು ತೊಡೆದು ಹಾಕಲು ಪ್ರಯತ್ನ - ಹೀಗೆ ಹತ್ತು ಹಲವಾರು ಸಮಾಜ ಸೇವೆಯನ್ನು ಕೈಗೊಂಡರು. ಕೆಲವು ಸಂಪ್ರದಾಯವಾದಿಗಳು ಇವರ ಕಾರ್ಯವನ್ನು ವಿರೋಧಿಸಿದರೂ ಸಹ ಅವೆಲ್ಲವನ್ನೂ ಮೆಟ್ಟಿನಿಂತು ಜನರ ಸೇವೆಯನ್ನು ಮುಂದುವರಿಸಿದರು. ಅವರ ಕೈಚೀಲದಲ್ಲಿ ಯಾವಾಗಲೂ ಒಂದಿಷ್ಟು ಬಿಳಿಹಾಳೆಗಳು, ವಿವಿಧ ಅರ್ಜಿ ಫಾರಂಗಳು ಇರುತ್ತಿದ್ದವು. ಇವರ ಸೇವೆಯನ್ನು ಮೆಚ್ಚಿ ಸರ್ಕಾರ ಉಚಿತ ಪ್ರಯಾಣ ಸೌಲಭ್ಯ ಮತ್ತು ಉಚಿತ ಅಂಚೆ ಸೌಲಭ್ಯ ಕಲ್ಪಿಸಿ ಕೊಟ್ಟಿತ್ತು. ಮೈಸೂರು ಸಂಸ್ಥಾನದ ಎಲ್ಲೆಡೆ ಸುತ್ತಿ ಕೊರಮರು, ಕಾಡುಕುರುಬರು, ಗೊಲ್ಲರು, ಕೊರಚರು ಮುಂತಾದ ಎಲ್ಲಾ ಹಿಂದುಳಿದ ವರ್ಗದವರಿಗೆ ಸಾಮೂಹಿಕ ನ್ಯಾಯ ದೊರಕಿಸಿಕೊಡಲು ಶ್ರಮಿಸಿದರು. ಇಂತಹ ನಿಸ್ವಾರ್ಥ ವ್ಯಕ್ತಿಗಳು ಈಗ ವಿರಳವಾಗುತ್ತಿರುವುದು ಖೇದಕರ.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ