ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಬೆಂಗಳೂರಿನ ಟಿ. ದಾಸರಹಳ್ಳಿಯಿಂದ ರಾಜೀವ ಪಟವರ್ಧನ್ ಅವರು ಬರೆಯುತ್ತಾರೆ- 'ಜ.21ರಂದು 'ಕನ್ನಡಪ್ರಭ'ದ ಪುಟ 3ರಲ್ಲಿ 'ಈಜಿಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಮಗುವನ್ನು ಎತ್ತಿ ಬಿಸಾಡಿದ ದೃಶ್ಯ' ಪ್ರಕಟಿಸಿದ್ದೀರಿ. ಇದು ಓದುಗರಲ್ಲಿ (ಎಳೆ ಮನಸ್ಸಿನ) ಎಂಥ ಪರಿಣಾಮ ಬೀರಬಹುದು ಎಂಬುದು ನನ್ನ ಪ್ರಶ್ನೆ. ತಾವು ಯಾವುದಾದರೊಂದು ಚಿತ್ರ ಪ್ರಕಟಿಸಿ ಕಿರುವರದಿ ನೀಡಬಹುದಿತ್ತು. ಪೂರ್ತಿ ಘಟನೆಯ ವಿವರವನ್ನು ಕಿರುಸಿನಿಮಾದಂತೆ ಪ್ರಕಟಿಸಿದ್ದೀರಿ ಮತ್ತು ಪ್ರಕಟಿಸಿರುವುದು ಎಷ್ಟು ಔಚಿತ್ಯ?'
'ಇನ್ನೊಂದು, ಚಿತ್ರ ತೆಗೆಯುವ ಮುನ್ನ ಛಾಯಾಗ್ರಾಹಕ ಸುರೇಶ್ ನಂಬೂದಿರಿ ಮತ್ತು ಸುತ್ತಮುತ್ತಲಿನ ಜನ (ಒಬ್ಬನನ್ನು ನಿಯಂತ್ರಿಸುವುದು ಕಷ್ಟವಲ್ಲದ್ದರಿಂದ) ಈ ಅಮಾನವೀಯ ಕೃತ್ಯ ತಡೆಗಟ್ಟಬಹುದಿತ್ತು.'
'ಭಾರತೀಯ ಸಮಾಜದಲ್ಲಿ ಒಬ್ಬ ನಾಗರಿಕ ತನ್ನ ಸುತ್ತಮುತ್ತ ಆಗುತ್ತಿರುವ ಅನ್ಯಾಯ ತಡೆಗಟ್ಟುವಲ್ಲಿ ಕಾರ್ಯನಿರ್ವಹಿಸಬೇಕೊ? ಅಥವಾ ದೃಶ್ಯಾವಳಿ ರಸಾನುಭವ ತೆಗೆದುಕೊಳ್ಳುವಲ್ಲಿ ಕಾರ್ಯಪ್ರವೃತ್ತನಾಗಬೇಕೊ? ತಿಳಿಸಿ. ಘಟನೆಯಲ್ಲಿ ಮಗು ಜೀವ ತೆತ್ತಿದ್ದರೆ, ಅದರ (ಕಾನೂನು ಮತ್ತು ಮಾನವೀಯತೆ ದೃಷ್ಟಿಯಿಂದ) ಪ್ರತ್ಯಕ್ಷದರ್ಶಿ ಯಾರಾಗುತ್ತಿದ್ದರು? ನನ್ನ ಮನವಿ ಇಂತಹ ಅಮಾನವೀಯ ಚಿತ್ರಗಳನ್ನು ಸರದಿಸಾಲಿನಂತೆ ಕೊಡುವ ಬದಲು ಕಿರುವರದಿಯಲ್ಲಿ ನೀಡಿ ಎಂದು' ಹೇಳಿದ್ದಾರೆ.
ರಾಜೀವ ಪಟವರ್ಧನ್‌ರಂತೆ ಹೇಳುವವರಿಗೆ ಒಂದು ಪ್ರಶ್ನೆ ಕೇಳುತ್ತೇನೆ. ನಾಲ್ಕು ಜನ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಮೊದಲು ಓಡುತ್ತಿದ್ದ ವ್ಯಕ್ತಿ ಆಯತಪ್ಪಿ ಬಿದ್ದ. ಎರಡನೇ ಸ್ಥಾನದಲ್ಲಿದ್ದ ವ್ಯಕ್ತಿ ಆತನನ್ನು ಎಬ್ಬಿಸಬೇಕೊ? ಓಡಿ ಗುರಿ ತಲುಪಿ ಸ್ಪರ್ಧೆ ಗೆಲ್ಲಬೇಕೊ? ಆತನನ್ನು ಮಾನವೀಯ ದೃಷ್ಟಿಯಿಂದ ಎಬ್ಬಿಸಲು ಹೋದರೆ ಸ್ಪರ್ಧೆಯಲ್ಲಿ ಸೋಲಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಅವನನ್ನು ಅಮಾನವೀಯ ವ್ಯಕ್ತಿ ಎಂದು ಕರೆಯಲಾಗುತ್ತದೆಯೇ?
ಇಷ್ಟಕ್ಕೂ ರಾಜೀವ್ ಪಟವರ್ಧನ್ ಅವರು ಪ್ರಸ್ತಾಪಿಸಿರುವ ಫೋಟೊವನ್ನು ಛಾಯಾಗ್ರಾಹಕ ಸುರೇಶ್ ನಂಬೂದಿರಿ ಅವರು ಆರೋಪಿ ವ್ಯಕ್ತಿಯ ಪಕ್ಕದಲ್ಲಿ ನಿಂತು ಕ್ಲಿಕ್ಕಿಸಿಲ್ಲ. ಕ್ಯಾಮರಾ ಲೆನ್ಸ್ ಸಹಾಯದಿಂದ ದೂರದಿಂದಲೇ ಕ್ಲಿಕ್ಕಿಸಿದ್ದಾರೆ. ಅವರು ಫೋಟೊ ತೆಗೆಯದೇ ಮಗುವನ್ನು ರಕ್ಷಿಸಬೇಕು ಎಂಬ ಉದ್ದೇಶದಿಂದ ಓಡಿ ಹೋಗಿದ್ದರೂ ಈ ಘಟನೆಯನ್ನು ತಡೆಯಲು ಸಾಧ್ಯವಿರಲಿಲ್ಲ.
ಫೋಟೋದಲ್ಲೇ ಕಾಣುವಂತೆ ಮಗುವನ್ನು ಎತ್ತಿ ತಗಡಿಗೆ ಬಾರಿಸಿದ ವ್ಯಕ್ತಿಯ ಪಕ್ಕದಲ್ಲೇ ಜನರಿದ್ದಾರೆ. ಮಗುವಿನ ತಾಯಿಯೂ ಇದ್ದಾಳೆ. ಅವರು ಅವನನ್ನು ತಡೆಯುವ ಪ್ರಯತ್ನ ಮಾಡುತ್ತಿರುವುದು ಚಿತ್ರದಲ್ಲಿ ಕಾಣುತ್ತಿದೆ. ಅವರ ಬಳಿಯೇ ತಡೆಯಲು ಸಾಧ್ಯವಾಗಿಲ್ಲ. ಇನ್ನು ಫೋಟೋಗ್ರಾಫರ್ ಹೇಗೆ ತಡೆದಾರು?
ಅದೊಂದು ಅನೂಹ್ಯ ಘಟನೆ. ಆತನ ಪಕ್ಕದಲ್ಲಿರುವವರು ಕೂಡ ಆತ ಮಗುವನ್ನು ಎತ್ತಿ ಬಡಿಯುತ್ತಾನೆ ಎಂಬುದನ್ನು ಯಾರೂ ಊಹಿಸಿರಲಿಲ್ಲ. ಹಾಗೆ ಊಹಿಸಲು ಸಾಧ್ಯವಿಲ್ಲ. ಆತ ಮಗುವನ್ನು ಎತ್ತಿದಾಗ ಛಾಯಾಗ್ರಾಹಕರು ಏನೋ ನಡೆಯಲಿದೆ ಎಂಬುದನ್ನು ಊಹಿಸಿ, ಅದರ ಚಿತ್ರ ತೆಗೆದಿದ್ದಾರೆ. ಇಂತಹ ಚಿತ್ರಗಳೆಲ್ಲ ಕಾದು ನಿಂತು, ಉದ್ದೇಶಪೂರ್ವಕವಾಗಿ ತೆಗೆಯುವಂತಹ ಚಿತ್ರಗಳಲ್ಲ. ನನ್ನ ದೃಷ್ಟಿಯಲ್ಲಿ ಈ ಚಿತ್ರಗಳಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದರೂ ಅಚ್ಚರಿಯಿಲ್ಲ.
ಗೋಲಿಬಾರ್ ಮಾಡುವಾಗ ಪೊಲೀಸರಿಗೆ ಮಾನವೀಯತೆ ಇಲ್ಲವೇ ಎಂದು ಪ್ರಶ್ನಿಸಿದರೆ? ಆ ತಕ್ಷಣಕ್ಕೆ ಅಧಿಕಾರಿಗಳ ಆದೇಶ ಪಾಲಿಸಿ, ಗೋಲಿಬಾರ್ ಮಾಡಿ, ಗುಂಪು ಚದುರಿಸುವುದು ಅವನ ತುರ್ತು ಅಗತ್ಯ ಮತ್ತು ಕರ್ತವ್ಯ ಕೂಡ. ಹಾಗೆ ಮಾಡದೇ ಇದ್ದಲ್ಲಿ ಆತ ಕರ್ತವ್ಯಲೋಪ ಎಸಗಿದಂತಾಗುತ್ತದೆ. ಛಾಯಾಗ್ರಾಹಕರ ವಿಷಯದಲ್ಲೂ ಹೀಗೇ ಆಗಿರುತ್ತದೆ. ಸಾಕಷ್ಟು ಸಂದರ್ಭಗಳಲ್ಲಿ ಕರ್ತವ್ಯ ಮತ್ತು ಮಾನವೀಯತೆಯ ಸಂದಿಗ್ಧ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಆಗ ತಕ್ಷಣಕ್ಕೆ ಅವರು ಕೈಗೊಳ್ಳುವ ನಿರ್ಧಾರವೇ ಅತ್ಯುಮವಾದದ್ದಾಗಿರುತ್ತದೆ.

- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.