ಸಂಪಾದಕೀಯ

ಅಕ್ರಮ-ಸಕ್ರಮ: ಪರಿಹಾರ

Published On :

ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಮನೆಗಳನ್ನು ಕಟ್ಟಿಕೊಂಡಿರುವುದನ್ನು ಸಕ್ರಮಗೊಳಿಸುವ ವಿಚಾರ ಒಂದು ದೊಡ್ಡ ರೀತಿಯ ಕಾಯಿದೆಯ ವಿವಾದವಾಗಿ ಪರಿವರ್ತನೆಯಾಗಿದ್ದು ಈಗ ರಾಜ್ಯಪಾಲ ಹಂಸರಾಜ ಬಾರಧ್ವಾಜ್ ಅವರು, ಕೆಲವು ಸಲಹೆಗಳೊಡನೆ, ವಿಧಾನಮಂಡಲ ಅಂಗೀಕರಿಸಿದ್ದ ವಿಧೇಯಕವನ್ನು ಒಪ್ಪಿರುವುದರಿಂದ ಸಮಸ್ಯೆಯ ಪರಿಹಾರದ ಸೂತ್ರ ಸಿಗುವುದು ಸಾಧ್ಯವೆನಿಸಿದೆ.
ಶಾಸನ ಕಟ್ಟುನಿಟ್ಟಾಗಿ ಅನ್ವಯವಾಗುವುದಾದರೆ ಸಮಸ್ಯೆಗೆ ಪರಿಹಾರದ ಸೂತ್ರವೇ ಇಲ್ಲ. ಆದರೆ ರಾಜ್ಯಪಾಲರು ವಾಸ್ತವ ಸ್ಥಿತಿಯನ್ನು ಗಮನಿಸಿ, ಹಲವು ವಿವರಣೆಗಳನ್ನು ಕೇಳಿ, ಸಲಹೆಯನ್ನೂ ನೀಡಿರುವುದರಿಂದ ಒಂದು ರೀತಿಯ ರಾಜಿ ಸೂತ್ರ ಗೋಚರಿಸುವ ಸಂಭವ ಕಂಡುಬಂದಿರುವುದು ಲಕ್ಷಾಂತರ ಜನರಿಗೆ ಸಂತಸದ ಸುದ್ದಿಯೇ.
ಇಲ್ಲಿ ಮೂರು ವಿಷಯಗಳು ಅಡಕವಾಗಿವೆ. ಮೊದಲನೆಯದು, ಹಳ್ಳಿಗಳಲ್ಲಿ, ಯಾವ ಹಕ್ಕೂ ಇಲ್ಲದಿದ್ದರು ಬಡವರು ಸರ್ಕಾರಿ ಭೂಮಿಯಲ್ಲಿ ಮನೆಗಳನ್ನು ಕಟ್ಟಿರುವುದು. ಅವರಿಗೆ ಬೇರೆ ದಾರಿಯೇ ಇರಲಿಲ್ಲ. ಈ ಅಕ್ರಮವನ್ನು ಸಕ್ರಮಗೊಳಿಸುವ ವಿಚಾರದಲ್ಲಿ ಹೆಚ್ಚು ತಕರಾರಿಲ್ಲ. ಅದನ್ನು ರಾಜ್ಯಪಾಲರು ಒಪ್ಪಿದ್ದಾರೆ.
ಪಟ್ಟಣಗಳಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅನೇಕರು ಮನೆ ಕಟ್ಟಿರುವುದೂ ಉಂಟು. ಇದನ್ನು ಎಲ್ಲ ಪ್ರಕರಣಗಳಲ್ಲೂ ಸಕ್ರಮಗೊಳಿಸುವುದು ಕಷ್ಟ. ನಗರಗಳ ಅಂಚಿನ ಭೂಮಿಗೆ ಈಗ ಭಾರಿ ಬೆಲೆ ಇದೆ. ಅದನ್ನು ಕಡೆಗಾಣಿಸುವಂತಿಲ್ಲ.
ಸರ್ಕಾರ ನೇಮಿಸಿದ್ದ ಒಂದು ಸಮಿತಿಯ ವರದಿಯಂತೆ, ಸುಮಾರು ಹನ್ನೊಂದು ಲಕ್ಷ ಎಕರೆಗೂ ಹೆಚ್ಚಿನ ವಿಸ್ತೀರ್ಣದ ಭೂಮಿಯ ಒತ್ತುವರಿಯಾಗಿದೆ. ಇಲ್ಲಿ ಹಲವರು ಸ್ವಂತಕ್ಕೆಂದು ಮನೆ ಕಟ್ಟಿಕೊಂಡಿದ್ದರೆ ಇನ್ನು ಕೆಲವು ಸ್ಥರಾಸ್ತಿ ಮಾಫಿಯಾ ಜನರು ಕಳ್ಳ ವ್ಯಾಪಾರಕ್ಕೆಂದೇ ಭೂಮಿಯನ್ನು ಅತಿಕ್ರಮಣ ಮಾಡಿದ್ದಾರೆ. ಅದರಲ್ಲಿ ಅನೇಕರು ಆ ಭೂಮಿಯನ್ನು ತುಂಡು - ತುಂಡುಗಳಾಗಿ ಬೇರೆಯವರಿಗೆ ಮಾರಿದ್ದೂ ಆಗಿದೆ. ಈ ಬಗೆಯ ಎಲ್ಲ ಅವ್ಯವಹಾರವನ್ನೂ ಮನ್ನ ಮಾಡಿದರೆ ಸಂವಿಧಾನಕ್ಕೇ ದ್ರೋಹ ಬಗೆದಂತೆ ಆಗಬಹುದು.
ಆದ್ದರಿಂದ ರಾಜ್ಯಪಾಲರು ಈ ವಿಧೇಯಕದ ಸಂಬಂಧದಲ್ಲಿ ಮಾಡಿರುವ ಸಲಹೆಗಳನ್ನು ಪರಿಶೀಲಸಿ, ಅವರು ಕೇಳಿರುವ ವಿವರಣೆಗಳಿಗೆಲ್ಲ ಸ್ಪಷ್ಟ ರೀತಿಯ ಸಮಜಾಯಿಷಿ ನೀಡುವುದು ಸಾಧ್ಯವಾಗುವಂತೆ ವಿಧೇಯಕವನ್ನೇ ಬದಲಾವಣೆ ಮಾಡಬೇಕಾಗಿದೆ. ಆ ಕೆಲಸವನ್ನು ಸಮರ್ಪಕವಾಗಿ ಮಾಡುವುದರಲ್ಲಿ ಸರ್ಕಾರಕ್ಕೆ ಸಲಹೆ ನೀಡಲು ಕಾಯಿದೆ ಪಂಡಿತರ ಸಮಿತಿಯನ್ನು ರಚಿಸುವ ಸಲಹೆಯೂ ಈಗ ಮುಂದೆ ಬಂದಿದೆ. ಇಲ್ಲೂ ಕೂಡ ಸಮಸ್ಯೆಯ ಪರಿಹಾರದ ದಿಕ್ಕಿನಲ್ಲಿ ಒಂದು ದಿಟ್ಟ ಹೆಜ್ಜೆಯನ್ನು ಇಟ್ಟಂತೆಯೇ ಆಗಿದೆ. ಮತ್ತೊಂದು ಅಕ್ರಮ-ಸಕ್ರಮದ ಸಮಸ್ಯೆ ಎಂದರೆ ಬೆಂಗಳೂರು ಹಾಗೂ ರಾಜ್ಯದ ಇತರ ನಗರ ಪ್ರದೇಶಗಳಲ್ಲಿ, ಕಟ್ಟಡಗಳ ನಿರ್ಮಾಣದ ನಿಯಮಗಳನ್ನು ಉಲ್ಲಂಘಿಸಿ ಮನೆಗಳನ್ನು ಕಟ್ಟಿರುವಂತೆಯೇ, ಬೃಹತ್ ವ್ಯಾಪಾರಿ ಮಳಿಗೆಗಳನ್ನು ನಿರ್ಮಿಸಿರುವುದು.
ಈ ಅಕ್ರಮವನ್ನು ಒಂದು ಇತಿ-ಮಿತಿಯ ಒಳಗೆ ಸಕ್ರಮಗೊಳಿಸಲೇಬೇಕಾಗುತ್ತದೆ. ಬೇರೆ ದಾರಿಯೇ ಇಲ್ಲ. ಲಕ್ಷಾಂತರ ಮನೆಗಳನ್ನು ಕಟ್ಟಡಗಳನ್ನು ಒಡೆದು ಹಾಕುವುದು ಈಗಿನ ಸನ್ನಿವೇಶದಲ್ಲಿ ಅಸಾಧ್ಯದ ಮಾತು.
ಈ ವಿಧೇಯಕಕ್ಕೆ ಸಂಬಂಧಿಸಿದಂತೆಯೂ ರಾಜ್ಯಪಾಲರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಅದನ್ನು ಶಾಸನದಲ್ಲಿ ಅಳವಡಿಸಲು ಸರ್ಕಾರ ಒಪ್ಪಿದೆ. ಈ ಅಕ್ರಮ-ಸಕ್ರಮದಿಂದ ಸರ್ಕಾರಕ್ಕೆ ಸುಮಾರು ಹತ್ತು ಸಾವಿರ ಕೋಟಿ ರುಪಾಯಿಗಳ ಆದಾಯ ಬರುವುದನ್ನು ಸರ್ಕಾರವೂ ನಿರೀಕ್ಷಿಸುತ್ತಿದೆ. ಆದಷ್ಟು ಬೇಗ ಇದೆಲ್ಲವೂ ಆಗಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.