ಕೊಪ್ಪಳ ಜಯರಾಮಾಚಾರ್ಯರ ಕೀರ್ತನೆ
1920-22ರ ಸಮಯ. ಸ್ವಾತಂತ್ರ್ಯ ಚಳವಳಿ ತೀವ್ರವಾಗಿದ್ದ ಕಾಲ. ಆಗಿನ ಕಾಲದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಜನ ಚಳವಳಿಯಲ್ಲಿ ಭಾಗವಹಿಸುತ್ತಿದ್ದರು. ಜನರನ್ನು ಚಳವಳಿಗೆ ಪ್ರೇರೇಪಿಸುವ ಕ್ರಮಗಳೂ ವಿಭಿನ್ನವಾಗಿದ್ದವು. ಅಂತಹವರಲ್ಲಿ ಒಬ್ಬರು ಕೀರ್ತನ ಕೇಸರಿ ಕೊಪ್ಪಳ ಜಯರಾಮಾಚಾರ್ಯ ಎಂಬ ಹರಿಕಥೆ ದಾಸರು. ಅವರು ಹರಿಕಥೆಯನ್ನು ಜನಜಾಗೃತಿಗಾಗಿ ಮತ್ತು ಜನ ಸಂಘಟನೆಗಾಗಿ ಬಳಸುತ್ತಿದ್ದ ರೀತಿಯೇ ಆಕರ್ಷಕವಾಗಿತ್ತು. ರಾಷ್ಟ್ರೀಯ ಹರಿಕಥೆ ಮಾಡುವುದರ ಮೂಲಕ ಜನರಿಗೆ ಸ್ವಾತಂತ್ರ್ಯ ದೀಕ್ಷೆಯನ್ನು ನೀಡಿ ರಾಷ್ಟ್ರೀಯ ಭಾವನೆಗಳನ್ನು ಉಜ್ವಲಗೊಳಿಸುತ್ತಿದ್ದರು. ಒಮ್ಮೆ ಅವರು ಶಿವಮೊಗ್ಗ ಜಿಲ್ಲೆಗೂ ಬಂದು ತಮ್ಮ ರಾಷ್ಟ್ರೀಯ ಹರಿಕಥೆ ಮಾಡಿದ್ದುಂಟು. ಹೀಗೆ ಬಂದಾಗ ಅವರ ಒಂದು ಹರಿಕಥೆ ರಾಮಚಂದ್ರಾಪುರ ಮಠದಲ್ಲಿ ಏರ್ಪಾಡಾಗಿತ್ತು. ಅವರು ಕಂಚಿನ ಕಂಠದಿಂದ ಹೊರಹೊಮ್ಮಿದ ಹರಿಕಥೆಯ ನಡುವೆ ಖಾದಿ ಪ್ರಚಾರ, ವಿದೇಶಿ ವಸ್ತುಗಳ ಬಹಿಷ್ಕಾರ, ಸತ್ಯಾಗ್ರಹ ಮುಂತಾದ ವಿಷಯಗಳನ್ನು ಮನಮುಟ್ಟುವಂತೆ ತಿಳಿಸಿಕೊಡುತ್ತಿದ್ದರು. ಇವು ಜನರ ಮೇಲೆ ಅದೆಷ್ಟು ಪರಿಣಾಮ ಬೀರುತ್ತಿದ್ದವೆಂದರೆ, ಅವರ ಮಾತುಗಳಿಂದ ಪ್ರಭಾವಿತರಾದ ಹಲವಾರು ಜನ ತಮ್ಮ ಮೈಮೇಲಿನ ವಿದೇಶಿ ಬಟ್ಟೆಗಳನ್ನು ಅಲ್ಲಿಯೇ ಕಳಚಿ ಅಗ್ನಿಗೆ ಅರ್ಪಿಸುತ್ತಿದ್ದರು. ಅಲ್ಲದೆ ಅಂದಿನಿಂದ ಖಾದಿ ವಸ್ತ್ರ ಧರಿಸುವುದಾಗಿ ಪ್ರಮಾಣ ಮಾಡುತ್ತಿದ್ದರು. ಹೀಗೆ ಹರಿಕಥೆಯ ಮೂಲಕ ಜನ ಜಾಗೃತಿ ನಿರಾತಂಕವಾಗಿ ನಡೆಯುತ್ತಿತ್ತು. ತೀರ್ಥಹಳ್ಳಿ ತಾಲ್ಲೂಕಿನ ಬಸವಾನಿಯಲ್ಲಿ ಅಂಡೇಕುಳಿ ಮಂಜಯ್ಯ ಎಂಬ ಪ್ರತಿಷ್ಠಿತ ಜವಳಿ ವರ್ತಕರಿದ್ದರು. ಅವರು ಆ ಭಾಗದಲ್ಲಿ ಸಾಕಷ್ಟು ಶ್ರೀಮಂತರಾಗಿಯೂ ಹೆಸರು ಮಾಡಿದ್ದರು. ಅವರು ಜಯರಾಮಾಚಾರ್ಯರ ಹರಿಕಥೆಯನ್ನು ತುಂಬಾ ಮೆಚ್ಚಿದ್ದರು. ಅವರೊಮ್ಮೆ ತಮ್ಮ ಊರಿನ ಸೋಮೇಶ್ವರ ದೇವಾಲಯದಲ್ಲಿ ಆಚಾರ್ಯರನ್ನು ಕರೆಸಿ ಹರಿಕಥೆಯನ್ನೇರ್ಪಡಿಸಿದ್ದರು. ಅಂದು ಸ್ವದೇಶಿ ವಸ್ತುಗಳನ್ನು ಉಪಯೋಗಿಸುವುದು, ವಿದೇಶಿ ವಸ್ತುಗಳ ಬಹಿಷ್ಕಾರ ಕುರಿತು ಎಳೆ ಎಳೆಯಾಗಿ, ಆಕರ್ಷಕವಾಗಿ ತಮ್ಮ ಹರಿಕಥೆಯ ನಡುವೆ ನಿರೂಪಿಸಿದಾಗ ಅಲ್ಲಿಯೇ ಕುಳಿತ್ತಿದ್ದ ಮಂಜಯ್ಯನವರು ಸ್ಫೂರ್ತಿಗೊಂಡು ತಮ್ಮ ಅಂಗಡಿಯಲ್ಲಿದ್ದ ಆಗಿನ ಕಾಲದಲ್ಲೇ ಎಪ್ಪತ್ತು, ಎಂಭತ್ತು ಸಾವಿರ ಬೆಲೆಬಾಳುವ ವಿದೇಶಿ ವಸ್ತ್ರಗಳನ್ನು ಎಲ್ಲರ ಎದುರು ಅಗ್ನಿಗರ್ಪಿಸಿ ಸ್ವದೇಶಿ ವ್ರತ ಕೈಗೊಂಡರು. 1927 ರಲ್ಲಿ ಗಾಂಧೀಜಿ ತೀರ್ಥಹಳ್ಳಿಗೆ ಆಗಮಿಸಿದ್ದಾಗ ಅವರ ಪತ್ನಿ ಸರಸ್ವತಮ್ಮನವರನ್ನೂ ತಮ್ಮಜೊತೆಗೆ ಕರೆದೊಯ್ದು ಗಾಂಧೀಜಿಯವರ ದರ್ಶನ ಪಡೆದರು. ಹೀಗೆ ಹೋಗುವಾಗ ತಮ್ಮ ಪತ್ನಿಗೆ ಮನೆಯಲ್ಲಿದ್ದ ಒಡವೆಗಳನ್ನೆಲ್ಲಾ ತೊಡಿಸಿ, ಸರ್ವಾಲಂಕಾರ ಭೂಷಿತೆಯಾಗಿ ಕರೆದೊಯ್ದರು. ಅಡಿಯಿಂದ ಮುಡಿಯವರೆಗೆ ಬೆಲೆಬಾಳುವ ಒಡವೆತೊಟ್ಟ ಸರಸ್ವತಮ್ಮನವರು ಮಹಾತ್ಮ ಗಾಂಧೀಜಿಯವರಿಗೆ ನಮಸ್ಕರಿಸಿ, ಪತಿಯ ಆದೇಶದಂತೆ ತಾವು ತೊಟ್ಟಿದ್ದ ಎಲ್ಲ ಒಡವೆಗಳನ್ನೂ ಗಾಂಧೀಜಿಯವರ ಪಾದಗಳಿಗೆ ಸಮರ್ಪಿಸಿ ಧನ್ಯತಾ ಭಾವ ಪಡೆದರು. ಅಂದಿನಿಂದ ಎಂದೂ ಅವರು ಒಡವೆ ತೊಡಲಿಲ್ಲ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

