ಕಟ್ಟು ಬಿಚ್ಚದೇ ಗಂಟು ಹಾಕಿದ ಸ್ಥಿತಿಯಲ್ಲೇ ಇರುವಿಕೆ
ಬಿಕ್ಕಟ್ಟನ್ನು ಬಾರದಂತೆ ತಡೆವಂಥದ್ದು
ಒಂದು ಮತ್ತು ಎರಡು ಕಾರ್ಯಗಳಿಗೆ ಸಂಬಂಧಪಡದ ನಾವೆಲ್ಲ ಒಂದು ಎಂಬ ಭಾವ
ಬಿಟ್ಟುಕೊಟ್ಟರೆ ಬಿಕ್ಕಟ್ಟು
ದಾರವಿಲ್ಲದೇ ಹಾಕಿದ ಹೊಲಿಗೆ, ಭಾವ ಭಾವದ ಬೆಸುಗೆ
ಚೌಕಟ್ಟು ಮುರಿಯಲು ಇದು ಬೇಕೇ ಬೇಕು
ಒಕ್ಕಟ್ಟಿನಲ್ಲಿ ಬಲವಿದೆ ಎಂದು ದುಷ್ಟರು ಹೆಚ್ಚು ಅರಿತಿರುತ್ತಾರೆ
ಪರಕೀಯರು ಬಂದರೆ ನಾವೆಲ್ಲ ಒಕ್ಕಟ್ಟು, ಅನ್ಯಥಾ ಒಬ್ಬರನ್ನೊಬ್ಬರು ಅಟ್ಟು
ಇದೊಂದಿದ್ದರೆ ಭಾರತ ಇಂಡಿಯಾ ಅಗುತ್ತಿರಲಿಲ್ಲ
ಒಗ್ಗಟ್ಟಿದ್ದರೆ ಮುಗ್ಗಟ್ಟು ಬಾಧಿಸುವುದಿಲ್ಲ
ಏಕತಾ ಮನೋಭಾವ, ಎಲ್ಲ ಸುಖಾಂತ್ಯಗೊಳ್ಳುವ ಕತೆಗಳ ಮೂಲ
ರಾಜಕಾರಣಿಗಳು ಜನರ ಒಕ್ಕಟ್ಟು ಮುರಿಯುವ ವಿಚಾರದಲ್ಲಿ ಒಕ್ಕಟ್ಟಾಗುತ್ತಾರೆ
ಹಿನ್ನೆಲೆ
ನಿಮ್ಮ ಹಿನ್ನೆಲೆಯೇ ನಿಮ್ಮ ವ್ಯಕ್ತಿತ್ವದ ಬೆನ್ನುಡಿ
ನಮ್ಮ ಹಿನ್ನೆಲೆಯ ಸೃಷ್ಟಿಕರ್ತರು ನಾವೇ
ಚಾರಿತ್ರ್ಯಕ್ಕೂ ಇದೇ ಹೆಸರು. ಚರಿತಾರ್ಥವೂ ಇದರಿಂದಲೇ
ಇದನ್ನು ಶುದ್ಧವಾಗಿ ಇರಿಸಿಕೊಳ್ಳುವುದೆಂದರೆ ಶುದ್ಧ ಜೀವನ ಜೀವಿಸುವುದೇ.
ನೀವು ಇತಿಹಾಸವನ್ನು ಸೃಷ್ಟಿಸುವ ಹಿನ್ನೆಲೆಯವರಾಗಿರದಿದ್ದರೆ ನೀವೇ ಇತಿಹಾಸದ ಹಿನ್ನೆಲೆಗೆ ಜಾರುತ್ತೀರಿ
-ವಿಶ್ವನಾಥ ಸುಂಕಸಾಳ