ಸಂಪಾದಕೀಯ

ನ್ಯಾಯದಾನ ವಿಳಂಬ ತಪ್ಪಿಸಲು ಸರ್ವ ಸಮ್ಮತ ಕ್ರಮ

Published On :

ಕಳೆದ ಲೋಕಸಭೆ ಅಧಿವೇಶನದಲ್ಲಿ ಹೆಚ್ಚು ಪ್ರಚಾರ ಪಡೆಯದೇ ಸಾಕಷ್ಟು ವಿಚಾರ ವಿನಿಮಯಕ್ಕೆ ಅವಕಾಶ ಮಾಡಿಕೊಟ್ಟ ಒಂದು ಪ್ರಸ್ತಾಪ ಎಂದರೆ ಭಯೋತ್ಪಾದನೆ ಹಾಗೂ ಹಿಂಸಾಚಾರದ ಪ್ರಕರಣಗಳಲ್ಲಿ, ಪೊಲೀಸರು ಅನೇಕರನ್ನು ಬಂಧಿಸಿ, ಅವರಲ್ಲಿ ಬಹುಜನರನ್ನು ವಿಚಾರಣೆಯೇ ಇಲ್ಲದೇ ದೀರ್ಘ ಕಾಲ ಜೈಲುಗಳಲ್ಲಿ ಕೊಳೆಯುವಂತೆ ಮಾಡುವುದು.
ಮೂಲತಃ ಈ ಪ್ರಸ್ತಾಪವನ್ನು ಎತ್ತಿದ್ದು ಮಾರ್ಕ್ಸ್‌ವಾದೀ ಕಮ್ಯುನಿಸ್ಟ್ ನಾಯಕ ಬಸುದೇವ ಆಚಾರ್ಯ. ಆದರೆ ಸಮಸ್ಯೆಯ ಮೇಲೆ ಹೆಚ್ಚು ಬೆಳಕನ್ನು ಚೆಲ್ಲಿದ್ದು ಎಲ್ಲ ಪಕ್ಷಗಳ ಮುಸ್ಲಿಮ್ ಸದಸ್ಯರೇ.
ಈ ಚರ್ಚೆಗೆ, ಅಂದು ಉತ್ತರ ನೀಡಿದ ಗೃಹ ಮಂತ್ರಾಲಯದ ಸಹಾಯಕ ಸಚಿವರು ನ್ಯಾಯದಾನದ ವಿಳಂಬದ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿ, ಸಮಸ್ಯೆಯ ನಿವಾರಣೆಗೆ ಶೀಘ್ರ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದರು.
ಸ್ಥೂಲವಾಗಿ ಸಮಸ್ಯೆಯ ತಿರುಳು ಎಂದರೆ ಸಾಮಾನ್ಯವಾಗಿ ಭಯೋತ್ಪಾದನೆ- ಹಿಂಸಾಚಾರದ ಪ್ರಕರಣಗಳಲ್ಲಿ ಘಟನೆಯ ಸುತ್ತಮುತ್ತಲೂ ಇರುವ ಯುವಕರನ್ನೇ- ಹೆಚ್ಚಾಗಿ ಮುಸ್ಲಿಮರನ್ನೇ ಬಂಧಿಸುವುದು. ಅನಂತರ ಬಂಧಿತರ ವಿರುದ್ಧ ಸಾಕ್ಷ್ಯ- ಆಧಾರವನ್ನು ಹುಡುಕುವ ಪ್ರಯತ್ನ ನಡೆಯುತ್ತದೆ. ಆ ವೇಳೆಗೆ ಕನಿಷ್ಠ ಪಕ್ಷ ಎರಡು ತಿಂಗಳಾದರೂ ಕಳೆದು ಹೋಗಿರುತ್ತದೆ.
ಈ ರೀತಿ ಸಿಕ್ಕಿ ಬೀಳುವ ಯುವಕರಲ್ಲಿ ಬಹುಮಂದಿ ಬಡವರೇ. ಅವರಿಗೆ ಸುಲಭವಾಗಿ ವಕೀಲರ ನೆರವು ಸಿಗುವುದಿಲ್ಲ. ಒಂದು ವೇಳೆ ನ್ಯಾಯಾಲಯವೇ ವಕೀಲರನ್ನು ನೇಮಿಸಿಕೊಟ್ಟರೂ ಆ ವಕೀಲರು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಶೀಲಿಸುವುದಿಲ್ಲ. ಹೀಗೇ ವಾರಗಳು ಕಳೆದ ಅನಂತರ ಬಂಧಿತ ಯುವಕರು, ಅವರ ಮನೆಯವರು ಹಾಗೂ ಪರಿಚಯಸ್ಥರನ್ನು ಬಿಟ್ಟಿರೆ ನ್ಯಾಯದಾನದ ಪ್ರಕ್ರಿಯೆಯಲ್ಲಿ ಉಳಿದವರಿಗೆ ಆಸಕ್ತಿ ಇರುವುದಿಲ್ಲ. ಪೊಲೀಸರಲ್ಲೂ ಇದು ಹತ್ತರಲ್ಲಿ ಹನ್ನೊಂದನೆಯದು ಎನ್ನುವಂತೆ ಅಲಕ್ಷ್ಯವನ್ನು ಮೂಡಿಸಿರುತ್ತದೆ.
ಇದೆಲ್ಲವನ್ನು ಗಮನಿಸಿದ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿ ಇಲಾಖೆಯ ಸಚಿವ ಕೆ. ರಹಮಾನ್ ಖಾನ್ ಅವರು ಇಂತಹ ವಿಶೇಷ ಪ್ರಕರಣಗಳ ತನಿಖೆ, ವಿಚಾರಣೆಗೆ ಪ್ರತ್ಯೇಕ ಹಾಗೂ ವಿಶೇಷ ನ್ಯಾಯಾಲಯಗಳ ರಚನೆಯ ಅಗತ್ಯವನ್ನು ಪ್ರಸ್ತಾಪಿಸಿ ಗೃಹಮಂತ್ರಿ ಸುಶೀಲ ಕುಮಾರ ಶಿಂದೆ ಅವರಿಗೆ ಪತ್ರ ಬರೆದಿದ್ದಾರೆ. ಇದೊಂದು ಒಳ್ಳೆಯ ಕ್ರಮ.
ಈ ಉದ್ದೇಶವನ್ನು ತತ್ವಶಃ ಗೃಹ ಮಂತ್ರಾಲಯ ಒಪ್ಪಿರುವಂತಿದೆ. ಆದರೆ ಈ ಪ್ರತ್ಯೇಕ- ವಿಶೇಷ ನ್ಯಾಯಾಲಯಗಳು ಈಗಿನ ನಿಯಮಗಳ ಚೌಕಟ್ಟಿನಲ್ಲೇ ಕೆಲಸ ಮಾಡಬೇಕಲ್ಲ! ವಿಶೇಷ ನ್ಯಾಯಾಲಯಕ್ಕೆ ವಿಶೇಷ ಸಿಬ್ಬಂದಿ ಪ್ರಾಸಿಕ್ಯೂಟರ್‌ಗಳು ಹಾಗೂ ಸಲಹೆಗಾರರೂ ಬೇಕಾಗುತ್ತಾರೆ. ಆದರೆ ಈ ವ್ಯವಸ್ಥೆ ಬದಲಾಗುವುದಿಲ್ಲ.
ಸಾಕ್ಷ್ಯ ಹೇಳಬೇಕಾಗಿದ್ದ ವ್ಯಕ್ತಿ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಅದರಿಂದ ಉಳಿದ ಕೆಲಸ ನಿಂತು ಹೋಗುತ್ತದೆ. ವಿಶೇಷ ಪ್ರಾಸಿಕ್ಯೂಟರ್‌ಗಳಿಗೆ ಇದೊಂದೇ ಕೆಲಸವನ್ನು ವಹಿಸದೇ ಬೇರೆ ಜವಾಬ್ದಾರಿಗಳನ್ನೂ ವಹಿಸಲಾಗಿರುತ್ತದೆ. ಹೀಗೆ ತನಿಖೆ, ವಿಚಾರಣೆಯ ವಿಳಂಬಕ್ಕೆ ಏನು ಬೇಕೋ ಎಲ್ಲವೂ ಅಲ್ಲಿ ಕಂಡು ಬರುತ್ತದೆ. ಪಾಪ ವಿಚಾರಣಾಧೀನ ಖೈದಿಗಳು, ಆರೋಪಿಗಳು, ಅವರ ಕುಟುಂಬಗಳು ಹೀಗೇ ಕಾಲ ತಳ್ಳಬೇಕು.
ಇದು ವಾಸ್ತವ. ವಿಶೇಷ ನ್ಯಾಯಾಲಯಗಳಿಗೆ ನೇಮಕಗೊಳ್ಳುವ ನ್ಯಾಯಾಧೀಶರು, ಪ್ರಾಸಿಕ್ಯೂಟರ್‌ಗಳು ಹಾಗೂ ಸ್ಥಳೀಯ ಪೊಲೀಸರಿಗೂ ಪ್ರಕರಣಗಳ ವಿಲೇವಾರಿಯಲ್ಲಿ ಆಸಕ್ತಿ ಇರಬೇಕು. ಅದಕ್ಕೆ ವೃತ್ತಿ ನಿಷ್ಠೆ ಬೇಕು. ಅಂತಹವರನ್ನು ಹುಡುಕಬೇಕು.
ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿ ಇಲಾಖಾ ಸಚಿವ ರಹಮಾನ್ ಖಾನ್ ಈ ವಿಚಾರದಲ್ಲಿ ಪ್ರಕಟಿಸಿರುವುದರ ಹಿಂದೆ ಇರುವುದು ಮಾನವೀಯತೆ. ನ್ಯಾಯದಾನದ ಪ್ರಕ್ರಿಯೆಯಲ್ಲಿ ಆಗುವ ವಿಳಂಬ ಮಾನವ ಹಕ್ಕುಗಳ ಉಲ್ಲಂಘನೆಯೂ ಹೌದು. ಇದೆಲ್ಲವೂ ಸರಿ.
ಆದರೆ ನ್ಯಾಯದಾನದ ವಿಳಂಬದಿಂದ ನರಳುವ ಬಡವರಲ್ಲಿ ಮುಸ್ಲಿಮರಷ್ಟೇ ಇದ್ದಾರೆ ಎನ್ನುವ ಚಿಂತನೆ ತಪ್ಪು, ನಿಜ. ಈಗಿನ ವಿಶಿಷ್ಟ ಸನ್ನಿವೇಶದಲ್ಲಿ ಭಯೋತ್ಪಾದಕ- ಹಿಂಸಾಚಾರದ ಪ್ರಕರಣಗಳಲ್ಲಿ ಬಂಧಿತರಾಗುವುದು ಹೆಚ್ಚಿನ ಜನರು ಮುಸ್ಲಿಮರೇ. ಈಚೆಗೆ, (ಕೆಲವು ವರ್ಷಗಳ ಹಿಂದಿನಿಂದ) ಸಂಝೋತಾ ಎಕ್ಸ್‌ಪ್ರೆಸ್, ಮಾಲೆಗಾಂವ್ ಬಾಂಬ್ ಸ್ಫೋಟದ ಪ್ರಕರಣಗಳ ಅನಂತರ, ಹಿಂದೂ ಟೆರರ್ ಅಥವಾ ಹಿಂದೂ ಭಯೋತ್ಪಾದನೆ ಎನ್ನುವ ಪ್ರಯೋಗವೂ ಬಳಕೆಗೆ ಬಂದಿದೆ. ಹಿಂದೂಗಳೇ ಅಂತಹ ಪ್ರಕರಣಗಳಲ್ಲಿ ಹೆಚ್ಚಾಗಿ ಬಂಧನಕ್ಕೆ ಒಳಗಾಗುವುದು. ಅಂತಹವರಿಗೂ ಕ್ಷಿಪ್ರ ನ್ಯಾಯದಾನದ ವಿಶೇಷ ವ್ಯವಸ್ಥೆಯಲ್ಲಿ ಅವಕಾಶವಿರಬೇಕು. ಭಯೋತ್ಪಾದನೆಗೆ ಜಾತಿ- ಮತಧರ್ಮಗಳ ಭೇದ ಇಲ್ಲ ಎನ್ನುವುದಾದರೆ, ನ್ಯಾಯದಾನಕ್ಕೂ ಅಂತಹ ಭೇದದ ಸೋಂಕು ಇರಬಾರದು.
ನ್ಯಾಯದಾನದ ಪದ್ಧತಿಯ ಸುಧಾರಣೆಗೆ ಸಂಬಂಧಿಸಿದಂತೆ ಹಲವಾರು ಆಯೋಗಗಳು ನೀಡಿರುವ ಸಲಹೆಗಳನ್ನು ಪರಿಶೀಲಿಸುವುದೂ ವಿಳಂಬವಾಗುತ್ತಿದೆ. ರಹಮಾನ್ ಖಾನ್ ಅವರ ಸಲಹೆಯಲ್ಲಿ ಎಲ್ಲ ಜನಾಂಗಗಳಿಗೂ ಸೇರಿದ ಸಂತ್ರಸ್ತರಿಗೂ ನ್ಯಾಯ ಸಿಗುವಂತೆ ಆಗಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.