ಸಂಜಯ್ಗೆ ಸಜೆಯಾದರೆ ಏನು ತಪ್ಪು?
ಸಂಜಯ್ ದತ್ ಎಂಬ ಬಾಲಿವುಡ್ನ (ಖಳ)ನಾಯಕನಿಗೆ 1993 ರ ಮುಂಬೈ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಆತನ ಪಾತ್ರವಿರುವುದನ್ನು ಖಚಿತಪಡಿಸಿದ ಸುಪ್ರೀಂ ಕೋರ್ಟ್ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ ಬಾಲಿವುಡ್ನ ಅನೇಕರು ಸೇರಿದಂತೆ ಆತನ ಅಭಿಮಾನಿಗಳು, ಆತನಿಗೆ ಹೀಗಾಗಬಾರದಿತ್ತು, ದುರದೃಷ್ಟಕರ ತೀರ್ಪು ಎಂಬಿತ್ಯಾದಿ ಹೇಳಿಕೆ ನೀಡುವುದನ್ನು ಕಂಡರೆ ಆಶ್ಚರ್ಯ ಮತ್ತು ಆಘಾತವಾಗುತ್ತದೆ. ಎಣಣ:ಣಿಜ ಜಜಟಚಿಥಿಜಜ ರಿಣಣ:ಣಿಜ ಜಜಟಿಜಜ ಎಂಬ ಮಾತಿನಂತೆ, ನ್ಯಾಯವು ವಿಳಂಬವಾಗಿ ದೊರೆತರೆ ಅದು ನ್ಯಾಯವನ್ನು ನಿರಾಕರಿಸಿದಂತೆ. ಹಾಗಿರುವಾಗ 250ಕ್ಕೂ ಹೆಚ್ಚು ಜನರ ಸಾವಿಗೆ ತಡವಾಗಿಯಾದರೂ, ದೊರೆತಿರುವ ನ್ಯಾಯಕ್ಕೆ ನಾವು ಹರ್ಷಿಸಬೇಕೇ ಹೊರತು ಅದನ್ನು ಪ್ರಶ್ನಿಸುವುದು ಯಾವ ರೀತಿಯಲ್ಲೂ ಉಚಿತವಲ್ಲ. ನಾವು ಒಬ್ಬ ನಟನ ನಟನೆ ಮತ್ತು ಆತನ ಚಿತ್ರಗಳ ಪ್ರಶಂಸಕರಾಗಿರಬೇಕೇ ಹೊರತು, ಆತನ ವೈಯಕ್ತಿಕ ಬದುಕಿನ ತಪ್ಪುಗಳನ್ನು, ಅದರಲ್ಲೂ ಮುಂಬೈ ಸರಣಿ ಸ್ಫೋಟದಂತಹ ಹೀನ ಕೃತ್ಯಕ್ಕೆ ನೀಡಿದ ಸಹಕಾರವನ್ನು ಕ್ಷಮಿಸಿ ಆತನಿಗೆ ಅನ್ಯಾಯವಾಯಿತು ಎಂದು ಜರಿಯುವುದು ಎಷ್ಟರ ಮಟ್ಟಿಗೆ ಸರಿ? ಇದು ನಮ್ಮ ದೇಶದ ದೊಡ್ಡ ದುರಂತ ಮತ್ತು ವಿಪರ್ಯಾಸವೇ ಸರಿ.
-ರಾಮಕೃಷ್ಣ ಜೋಷಿ, ಉಡುಪಿ
ಹೊಸ ವಿಮರ್ಶೆಯ ಬಗ್ಗೆ ಅಸಹನೆ ಏಕೆ?
ಡಿ.ಎ. ಶಂಕರ್ ಅವರ 'ಹೊಸ ವಿಮರ್ಶೆ ಎಂದರೆ ಬರೀ ಅನುವಾದವೇ?' ಎಂಬ ಲೇಖನಕ್ಕೆ (ಕ.ಪ್ರ. 2.3.13) ಎಚ್. ಆನಂದರಾಮ ಶಾಸ್ತ್ರಿ (ಕ.ಪ್ರ. 6.3.13) ಮತ್ತು ಜಿ.ಎಂ. ಶಾಸ್ತ್ರಿ (ಕ.ಪ್ರ. 13.3.13) ಅವರುಗಳು ಪ್ರತಿಕ್ರಿಯಿಸಿದ್ದಾರೆ. ಈ ಶಾಸ್ತ್ರಿದ್ವಯರುಗಳಿಗೆ ಹೊಸ ವಿಮರ್ಶೆಯ ಬಗ್ಗೆ 'ಅಸಹನೆ'ಯಿದೆ. ಅಸಹನೆಗೆ ಎರಡು ಮುಖ್ಯ ಕಾರಣಗಳಿರಬಹುದು. ತಮ್ಮನ್ನು ಯಾರೂ ಗುರುತಿಸುತ್ತಿಲ್ಲ (ಐಡೆಂಟಿಟಿ ಕ್ರೈಸಿಸ್) ಎಂಬುದೊಂದಾಗಿರಬಹುದು. ಮತ್ತೊಂದು ಹಳೆಯ ಕಾಲವೇ ಚೆನ್ನಾಗಿತ್ತು ಎನ್ನುತ್ತಾ ಬದಲಾವಣೆಗೆ ತೆರೆದುಕೊಳ್ಳದ ಪೂರ್ವಾಗ್ರಹ ಮನಸ್ಥಿತಿ.
ಶಾಸ್ತ್ರಿದ್ವಯರುಗಳಿಗೆ ಅಪ್ರಿಯವಾಗಿರುವ ನವ್ಯ ವಿಮರ್ಶೆಯು ಒತ್ತು ಕೊಟ್ಟಂತಹ ಭಾಷೆಯ ಬಳಕೆಯ ಬಗೆಗಿನ ಎಚ್ಚರ, ಬಿಗಿ, ತಂತ್ರದ ಕಾಳಜಿಗಳನ್ನು ಅವಲೋಕಿಸದೆ ಕಣ್ಮುಚ್ಚಿ ನಡೆಯುವುದು- ನವೋದಯದ ನಂತರ ನಮ್ಮ ಸಾಹಿತ್ಯ ನಡೆದು ಬಂದ ದಾರಿಯನ್ನು ಅದರ ಬೆಳವಣಿಗೆಗಳನ್ನು ಅರಿಯಲು ಸಾಧ್ಯವಾಗಲಾರದು. ಇದಕ್ಕೆ ಎರಡು ಉದಾಹರಣೆಗಳನ್ನು ಕೊಡಬಹುದಾದರೆ ಒಂದು ಕೆ.ಎಸ್. ನರಸಿಂಹಸ್ವಾಮಿ ಮತ್ತೊಂದು ಎಸ್.ಎಲ್. ಭೈರಪ್ಪ.
'ಮೈಸೂರ ಮಲ್ಲಿಗೆ' ಯಿಂದ 'ಶಿಲಾಲತೆ', 'ತೆರೆದ ಬಾಗಿಲು'ಗಳ ತನಕ ಅವರು ನಡೆದು ಬಂದ ದಾರಿ; ಯಾವ ಸಾಹಿತ್ಯಿಕ ಪಂಥ ಚಳುವಳಿಗಳ ಜತೆ ತಮ್ಮನ್ನು ಗುರ್ತಿಸಿಕೊಳ್ಳದಿದ್ದರೂ 'ಅನ್ವೇಷಣ', 'ಪರ್ವ', 'ನೆಲೆ', 'ಮಂದ್ರ' ಕಾದಂಬರಿಗಳಲ್ಲಿನ ಭಾಷೆಯ ಬಳಕೆ, ತಂತ್ರಗಳ ಹಿಂದೆ ಹೊಸ ವಿಮರ್ಶೆಯು ಸಾಕಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಕೆ.ಎಸ್.ನ ಮತ್ತು ಭೈರಪ್ಪ ಎರಡು ಉದಾಹರಣೆಗಳಷ್ಟೆ. ಕನ್ನಡದ ಸಾಕಷ್ಟು ಸಾಹಿತಿಗಳ ಮೇಲೆ ಹೊಸ ವಿಮರ್ಶೆಯು ಧನಾತ್ಮಕವಾಗಿ ಪರಿಣಾಮ ಬೀರಿದೆ. ಪರಂಪರೆಯಲ್ಲಿ ಕಾಲೂರಿರಲೂಬೇಕು; ಆಕಾಶದತ್ತ ಮುಖ ಮಾಡಿ ಸುತ್ತಲೂ ಕೈ ಚಾಚಿರಬೇಕು. ಅಂತಹವರು ಮಾತ್ರ ಪ್ರಸ್ತುತರಾಗುತ್ತಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಜಿ.ಎಂ. ಶಾಸ್ತ್ರಿಗಳು ಐದು ಭಿನ್ನ ರೀತಿಯ ವಿಮರ್ಶೆಗಳನ್ನು ಓದಿದ ಮೇಲೂ 'ಕವಲು' ಕಾದಂಬರಿಯನ್ನೋದಿ ತಮ್ಮ ಸ್ವಂತ ಅಭಿಪ್ರಾಯವನ್ನು ರೂಪಿಸಿಕೊಳ್ಳಬಹುದಾಗಿತ್ತಲ್ಲವೆ? ಅವರ ನಿರುತ್ಸಾಹಕ್ಕೆ, ದುರ್ಗತಿಗೆ ಅವರೇ ಕಾರಣರಲ್ಲವೇ?
ಆನಂದ ರಾಮಶಾಸ್ತ್ರಿಗಳು ಉದಾಹರಿಸಿರುವ ಶತಾವಧಾನಿ ಆರ್. ಗಣೇಶರ ರಾಚನಿಕ ವಿಮರ್ಶೆಯ ಲೇಖನವನ್ನು ನಾನು ಓದಿದ್ದೇನೆ. ಆ ಮಾದರಿಯ ವಿಮರ್ಶೆಯ ಸಾಧಕ ಬಾಧಕಗಳನ್ನು ಕುರಿತಂತೆ ನನ್ನ ಪ್ರತಿಕ್ರಿಯೆಯೂ ಅದೇ ಸಾಹಿತ್ಯಿಕ ಪತ್ರಿಕೆಯ ನಂತರದ ಸಂಚಿಕೆಯಲ್ಲಿ ಪ್ರಕಟವಾಗಿದೆ. ಶಾಸ್ತ್ರಿಗಳು ಮತ್ತು ಇತರ ಆಸಕ್ತರು ಬೇಕಾದರೆ ಗಮನಿಸಬಹುದು.
-ಮು.ಅ. ಶ್ರಿರಂಗ, ದೊಡ್ಡಬಳ್ಳಾಪುರ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

