ಕ್ರೀಡೆ ಹಾಗೂ ರಾಜಕೀಯ
ಕ್ರೀಡೆಯಲ್ಲಿ ರಾಜಕೀಯವನ್ನು ಬೆರೆಸುವುದು ಸರಿಯಲ್ಲ ಎನ್ನುವುದು ಎಲ್ಲ ಕಾಲಕ್ಕೂ ಅನ್ವಯಿಸುವ ಮಾತು. ಅದನ್ನು ತಾತ್ವಿಕವಾಗಿ ಯಾರೂ ವಿರೋಧಿಸುವಂತಿಲ್ಲವಾದರೂ, ಅನೇಕ ಸಂದರ್ಭಗಳಲ್ಲಿ ಸೈದ್ಧಾಂತಿಕ ರಾಜಕೀಯ ಅಥವಾ ಜನಾಂಗೀಯ ರಾಜಕೀಯ ಕ್ರೀಡಾ ಪ್ರಪಂಚದಲ್ಲಿ ಪ್ರವೇಶ ಮಾಡಿರುವುದುಂಟು.
ಉದಾಹರಣೆಗೆ ಮುಸ್ಲಿಮ್ ರಾಷ್ಟ್ರಗಳಲ್ಲಿನ ವಿಶ್ವ ಕ್ರೀಡಾಕೂಟದಲ್ಲೂ ಇಸ್ರೇಲಿಗೆ ಬಹಿಷ್ಕಾರ ಹಾಕುವುದನ್ನು ಎಲ್ಲರೂ ತೀರ ಸಹಜ ಎನ್ನುವಂತೆಯೇ ಒಪ್ಪಿಕೊಂಡಿರುವಂತಿದೆ. ಅಮೆರಿಕದಲ್ಲಿ ನಡೆದ ಒಲಿಂಪಿಕ್ ಕ್ರೀಡಾ ಕೂಟಕ್ಕೆ ರಷ್ಯ ಬಹಿಷ್ಕಾರ ಹಾಕಿತ್ತು. ಮಾಸ್ಕೋ ಕೂಟವನ್ನು ಅಮೆರಿಕ ಬಹಿಷ್ಕರಿಸಿತ್ತು.
ಇಂತಹ ವರ್ತನೆ ಕ್ರೀಡಾ ಧರ್ಮಕ್ಕೇ ವಿರುದ್ಧವಾದದ್ದು. ಆದರೆ ಅದು ಆಯಾ ರಾಷ್ಟ್ರಗಳಲ್ಲಿನ ಆಂತರಿಕ ಪರಿಸ್ಥಿತಿಯನ್ನೇ ಪ್ರತಿಬಿಂಬಿಸುತ್ತಿದೆ. ಅದು ರಾಷ್ಟ್ರ- ರಾಷ್ಟ್ರ ನಡುವಣ ಸಂಬಂಧದ ಮಾತು. ಆದರೆ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಈಗ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಯಾವ ತಂಡದಲ್ಲೂ ಶ್ರೀಲಂಕಾದ ಆಟಗಾರರು ಇರಬಾರದೆನ್ನುವ ಷರತ್ತನ್ನು ವಿಧಿಸಿ ತಮಿಳುನಾಡಿನ ಪ್ರತ್ಯೇಕತೆಯನ್ನು ವೈಭವೀಕರಿಸಿರುವುದು ಈಗಾಗಲೇ ಹಲವಾರು ಪತ್ರಿಕೆಗಳ ಟೀಕೆಗೆ ಗುರಿಯಾಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ಜಯಲಲಿತಾ, ತನ್ನ ನಿರ್ಧಾರಕ್ಕೆ ಶ್ರೀಲಂಕಾದ ಆಟಗಾರರು ತಮಿಳುನಾಡಿನ ರಾಜಧಾನಿಯಲ್ಲಿ ಮೈದಾನಕ್ಕೆ ಇಳಿದರೆ ಉಂಟಾಗಬಹುದಾದ ಕಾಯಿದೆ- ಸುವ್ಯವಸ್ಥೆಯ ಪಾಲನೆಯ ಸಮಸ್ಯೆಯ ನೆಪವನ್ನು ಹೇಳಿಲ್ಲ. ಅವರು ಆ ನಿರ್ಧಾರವನ್ನು ತಮಿಳುನಾಡಿನ (ಭಾರತದ್ದೂ ಆಗಬೇಕೆನ್ನುವುದು ಅವರ ಬಯಕೆ) ಇಂದಿನ ಸ್ಥಿತಿಯಲ್ಲಿ, ಶ್ರೀಲಂಕಾದಲ್ಲಿ ನಡೆದಿರುವ ತಮಿಳರ ಮಾರಣ ಹೋಮದ ಹಿನ್ನೆಲೆಯಲ್ಲಿ, ಸಮರ್ಥಸಿಕೊಂಡಿದ್ದಾರೆ. ಈ ವಿಚಾರದಲ್ಲಿ ಜಯಲಲಿತಾ ಅವರ ಜತೆ ಮಾತುಕತೆ ನಡೆಸುವುದಕ್ಕೂ ಕೇಂದ್ರ ಸರ್ಕಾರಕ್ಕೆ ಅವಕಾಶವೇ ಇಲ್ಲದಂತೆ ಆಗಿದೆ. ತಮಿಳುನಾಡಿನ ವಿಧಾನ ಸಭೆಯಲ್ಲಿ ಜಯಲಲಿತಾ ಒಂದು ಅಧಿಕೃತ ನಿರ್ಣಯವನ್ನೇ ಮಂಡಿಸಿ, ಭಾರತ ಸರ್ಕಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶ್ರೀಲಂಕಾ ಸರ್ಕಾರದ ವಿರುದ್ಧ ಒಂದು ನಿರ್ಣಯವನ್ನು ಮಂಡಿಸಬೇಕೆಂದು ಒತ್ತಾಯ ಪಡಿಸಿದ್ದಾರೆ. ವಸ್ತುಶಃ ಕ್ರೀಡಾ ಪ್ರಪಂಚದಲ್ಲಿ ಅಂತಾರಾಷ್ಟ್ರೀಯ ರಾಜಕೀಯವನ್ನು ತುರುಕಿದ ಜಯಲಲಿತಾ ಭಾರತದ ವಿದೇಶಾಂಗ ನೀತಿಯ ಮೇಲೆ ಪ್ರಭಾವ ಬೀರುವ ಪ್ರಯತ್ನವನ್ನೂ ಮಾಡಿದ್ದಾರೆ. ಭಾರತೀಯ ಸಂವಿಧಾನದಂತೆ, ರಾಜ್ಯಗಳಿಗೆ ವಿದೇಶಾಂಗ ನೀತಿಯ ನಿರೂಪಣೆಯಲ್ಲಿ ಯಾವ ಅಧಿಕಾರವೂ ಇಲ್ಲ. ಆದರೆ ಜಯಲಲಿತಾ ಶ್ರೀಲಂಕಾದ ಆಂತರಿಕ ವ್ಯವಹಾರ ಕುರಿತು ವಿಧಾನ ಸಭೆಯಲ್ಲೇ ನಿರ್ಣಯವನ್ನು ಮಂಡಿಸಿರುವುದು ಅಸಾಧಾರಣವಾದ ವಿಚಾರವೇ. ಶ್ರೀಲಂಕಾ ಬೆಳವಣಿಗೆಗಳ ಹಿನ್ನಲೆಯಲ್ಲಿ ಡಿಎಂಕೆ ನಾಯಕ ಕರುಣಾನಿಧಿ ಅವರು ಕಾಂಗ್ರೆಸ್ ಕೂಟ ಸರ್ಕಾರದಿಂದ ಹೊರಗೆ ಬಂದು ಒಂದು ವಿಶಿಷ್ಟವಾದ ರೀತಿಯ ರಾಜಕೀಯ ಅಸ್ಥಿರತೆಯನ್ನು ಮೂಡಿಸಿ, ತಮಿಳರ ಒಲವನ್ನು ಗಳಿಸುವ ಪ್ರಯತ್ನ ನಡೆಸಿದ್ದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಜಯಲಲಿತಾ ಶ್ರಿಲಂಕಾ ಕ್ರಿಕೆಟ್ ಆಟಗಾರರ ವಿರುದ್ಧ ನಿರ್ಣಾಯಕವಾದ ಹೆಜ್ಜೆಯನ್ನಿಟ್ಟಿರುವುದು, ಶ್ರೀಲಂಕಾದ ಆಂತರಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿಧಾನ ಸಭೆಯಲ್ಲೇ ನಿರ್ಣಯವನ್ನು ಅಂಗೀಕರಿಸುವುದಕ್ಕೆ ನಾಯಕತ್ವ ವಹಿಸಿದ್ದು ಅಸಾಧಾರಣವಾದ ವಿಚಾರವೇ. ಕೇಂದ್ರ ಸರ್ಕಾರದ ಈಗಿನ ನಿಲವು ನಿಜಕ್ಕೂ ತೀವ್ರ ಸ್ವರೂಪದ ಕುತೂಹಲವನ್ನು ಕೆರಳಿಸುವಂತಹದ್ದು. ಕಾದು ನೋಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

