ಯುವಕರು ಎಂದರೆ ಯಾರು?
ಸದ್ಯದಲ್ಲಿಯೇ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ಜರುಗಲಿದ್ದು, ಇದರ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷದವರು ಅಭ್ಯರ್ಥಿಗಳ ಆಯ್ಕೆಯಲ್ಲಿ ಯುವಕರಿಗೆ, ಮಹಿಳೆಯರಿಗೆ ಮತ್ತು ಹಿಂದುಳಿದ ವರ್ಗದವರಿಗೆ ಹೆಚ್ಚಿನ ಆದ್ಯತೆಯನ್ನು ಕೊಟ್ಟು ಸಾಮಾಜಿಕ ನ್ಯಾಯ ಕಾಯ್ದಕೊಳ್ಳುವುದಾಗಿ ಹೇಳುತ್ತಲೇ ಇದ್ದಾರೆ. ಆದರೆ ವಿಚಿತ್ರವೆಂದರೆ ಇವರುಗಳ ದೃಷ್ಟಿಯಲ್ಲಿಯುವಕರೆಂದರೆ ಸಚಿವರುಗಳ ಪುತ್ರರು, ಮಾಜಿ ನಾಯಕರುಗಳ ಪುತ್ರರು ಇಲ್ಲವೇ ಪಕ್ಷದ ಪ್ರಮುಖ ನಾಯಕರ ಸಹೋದರರು ಮಾತ್ರ. ಇವರಿಗೆ ಟಿಕೆಟ್ ನೀಡಿದರೆ ಯುವಕರಿಗೆ ಆದ್ಯತೆ ಕೊಟ್ಟಂತೆ ಎಂಬುದು ಇವರ ಅಭಿಪ್ರಾಯ. ಸಾಮಾನ್ಯವಾದ ಒಬ್ಬ ಯುವ ಕಾರ್ಯಕರ್ತನನ್ನು ಯಾವ ನಾಯಕನೂ ತನ್ನ ಕ್ಷೇತ್ರದಲ್ಲಿ ಸೂಚಿಸಿರುವುದೇ ಇಲ್ಲ. ಇನ್ನು ಮಹಿಳೆಯರೆಂದರೆ ತಮ್ಮ ಪತ್ನಿಯರು, ತಮ್ಮ ಸಹೋದರಿಯರು ಇಲ್ಲವೇ ತಮಗೆ ಬೇಕಾದವರಿಗೆ ಮಹಿಳಾ ಕೋಟಾದಲ್ಲಿ ಟಿಕೆಟ್ ಕೊಡಿಸುವುದು ಮಹಿಳಾ ಪ್ರಾತಿನಿಧ್ಯದ ದೃಷ್ಟಿಕೋನ. ಯಾವೊಬ್ಬ ಸಾಮಾನ್ಯ ಮಹಿಳೆಯರ ಹೆಸರನ್ನು ಯಾವ ರಾಜಕೀಯ ಪಕ್ಷದ ನಾಯಕರುಗಳು ಸೂಚಿಸಲು ಮನಸೇ ಬರುವುದಿಲ್ಲ. ಇನ್ನು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಯಾರೆಂದರೆ ಅವರೂ ಸಹ ಇವರ ನೆಂಟರಾಗಿರಬೇಕು ಇಲ್ಲವೇ ಇವರ ಭಂಟರಾಗಿರಬೇಕು. ಇಲ್ಲದಿದ್ದರೇ ಅವರ ಇಷ್ಟಾರ್ಥಗಳನ್ನು ಪೂರೈಸುವವರಾಗಿರಬೇಕು. ಯಾವ ರಾಜಕೀಯ ಪಕ್ಷದ ನಾಯಕನು ವ್ಯಕ್ತಿತ್ವ, ಯೋಗ್ಯತೆ, ವಿದ್ಯಾರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಗುರುತಿಸುವ ಪ್ರಯತ್ನ ನಡೆಸುತ್ತಲೇ ಇಲ್ಲ. ಕುಲಕಸುಬುಗಳನ್ನು ಬಿಟ್ಟು ಇನ್ನು ಎಲ್ಲವನ್ನು ವಂಶಪಾರಂಪರ್ಯವಾಗಿ ಮುಂದುವರೆಸಿಕೊಂಡು ಬರಲು ಮನಸು ಮಾಡುವ ನಮ್ಮ ನೇತಾರರಿಗೇನೂ ಕಡಿಮೆಯಿಲ್ಲ. ಎಲ್ಲ ರಾಜಕೀಯ ಪಕ್ಷದ ಹಣೆಬರಹವು ಇದೇ.
-ಕೆ.ಎಸ್. ನಾಗರಾಜ್, ಬೆಂಗಳೂರು.
ಭೂತದ ಬಾಯಲ್ಲಿ ಭಗವದ್ಗೀತೆ
ದಿನಾಂಕ 11.03.13ರ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾಗಿರುವಂತೆ "ದೇಶ ಭಕ್ತರಲ್ಲದವರು ದೇಶದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ" ಎಂಬ ರಹಮತ್ ತರೀಕೆರೆಯವರ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ನುಡಿದಂತೆ ಎಂಬ ನಾಣ್ಣುಡಿಯನ್ನು ಜ್ಞಾಪಿಸುತ್ತಿದೆ. ಯಾವ ವ್ಯಕ್ತಿ ತನ್ನ ಕೃತಿಗಳಲ್ಲಿ ರಿಯಾಸುದ್ದೀನ್ ಎಂಬ ಒಬ್ಬ ವ್ಯಕ್ತಿ ಹೇಳಿದ ಕತೆಯ ಆಧಾರದ ಮೇಲೆ ಅಪ್ಪಟ ದೇಶಭಕ್ತ ಕನ್ನಡದ ಗಂಡುಗಲಿ, ಪರನಾರಿ ಸೋದರನೆಂಬ ಖ್ಯಾತಿಯ ಕುಮಾರ ರಾಮನನ್ನು ಒಬ್ಬ ರಾಕ್ಷಸನೆಂದು ಕರೆಯುತ್ತಿದ್ದಾರೋ, ಕರ್ನಾಟಕದ ಕುಲ ಪುರೋಹಿತ ಆಲೂರು ವೆಂಕಟರಾವ್ರವನ್ನು ವಸಾಹತುಶಾಹಿ ಲೇಖಕನೆಂದು ಜರಿಯುತ್ತಿದ್ದಾರೋ, ಕರ್ನಾಟಕದ ಚರಿತ್ರೆಕಾರ, ಕನ್ನಡ ಸಂಸ್ಕೃತಿ ಚಿಂತಕರ ಶೈಲಿಯು ಅಳು ಮೋರೆ ಶೈಲಿ, ಅನ್ಯರ ಅಕ್ರಮಣದಿಂದಾದ ಅಪಮಾನದ ಶೈಲಿ ಎಂದು ದೂಷಿಸುತ್ತಿದ್ದಾರೋ, ಬಸವಣ್ಣನ ಕಾಯಕವೇ ಕೈಲಾಸ ಎಂಬ ಕಾಯಕದ ಮಂತ್ರವನ್ನು ಕಾಯವೇ ಕೈಲಾಸ ಎಂದು ಕಾಯದ ಮಂತ್ರವಾಗಿ ತಿರುಚುತ್ತಿದ್ದಾರೋ ಅಂಥ ರಹಮತ್ ತರೀಕೆರೆಯವರ ಬಾಯಲ್ಲಿ ದೇಶಭಕ್ತಿ, ದೇಶಪ್ರೇಮದ ನುಡಿಗಳು ಬರುತ್ತಿರುವುದು ಭೂತದ ಬಾಯಲ್ಲಿ ಗವದ್ಗೀತೆಯ ನುಡಿ ಬಂದಂತೆ ಎಂಬ ನಾಣ್ಣುಡಿಯನ್ನು ಜ್ಞಾಪಿಸುತ್ತಿದೆ. ಈ ವ್ಯಕ್ತಿ ದೇಶಭಕ್ತಿಯ ಬಗೆಗೆ ಮಾತನಾಡುತ್ತಿರುವುದು ಸೋಜಿಗದ, ಆಶ್ಚರ್ಯದ ಸಂಗತಿಯ ಜೊತೆಗೆ ವಿಪರ್ಯಾಸದ ಸಂಗತಿಯಾಗಿದೆ.
-ಎಸ್. ಮಲ್ಲಿಕಾರ್ಜುನಪ್ಪ
ರೊಟೇಷನ್ ಪದ್ಧತಿ ಅನುಸರಿಸಿ
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಮೊನ್ನೆ ತಾನೇ ನಡೆದ ಸ್ಥಳೀಯ ಸಂಸ್ಥೆ ಚುನಾವಣೆ ಕರ್ತವ್ಯ ನಿರ್ವಹಿಸಿ, ನಿಟ್ಟುಸಿರು ಬಿಟ್ಟ ಶಿಕ್ಷಕರಿಗೆ ಮತ್ತೊಂದು ಚುನಾವಣೆಗೆ ಸನ್ನದ್ಧರಾಗುವ ಕಾಲ ಸನ್ನಿಹಿತವಾಗಿದೆ. ಆಯೋಗ, ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡುವಾಗ ಕೇವಲ ಒಂದು ಸೀಮಿತ ವರ್ಗವನ್ನು ಆಯ್ಕೆ ಮಾಡಿ ಅವರನ್ನು ಪ್ರತಿ ಬಾರಿ ಒತ್ತಡಕ್ಕೆ ಸಿಲುಕಿಸುವುದು ಅವ್ಯಾಹತವಾಗಿ ನಡೆಯುತ್ತಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡುವಾಗ ರೊಟೇಶನ್ ಪದ್ಧತಿ ಅನುಸರಿಸಿದರೆ ಎಲ್ಲರಿಗೂ ಚುನಾವಣಾ ಕರ್ತವ್ಯದ ಅನುಭವ ಆಗುತ್ತದೆ. ಕಾರಣ ಮುಂಬರುವ ವಿಧಾನಸಭಾ ಚುನಾವಣೆಗೆ ಈ ಹಿಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗೆ ವಿನಾಯಿತಿ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇನೆ.
-ವಿನೋದ್ ಹೆಗಡೆ, ಶಿರಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

