ರಂಗಾಯಣ ಹರಿದು ಹಂಚುತ್ತಿರುವುದೇಕೆ?
ರಂಗಾಯಣ ಕಲಾವಿದರ ವರ್ಗಾವಣೆ ವಿಷಯ ಮತ್ತೆ ತಲೆಯೆತ್ತಿರುವುದು ನಾಟಕ ಸಾಹಿತ್ಯ ಮತ್ತು ರಂಗಕ್ಷೇತ್ರದ ಚಿಂತಕರು ಯೋಚಿಸಲೇಬೇಕಾದಂಥ ವಿಷಯ. ರಂಗಾಯಣದ ಕಲಾವಿದರನ್ನು ಹೀಗೆ ವರ್ಗಾಯಿಸುವುದರಿಂದ ಅಲ್ಲಿ ನಿರಂತರವಾಗಿ ನಡೆಯುವ ರಂಗ ಚಟುವಟಿಕೆಗಳಿಗೆ ಧಕ್ಕೆಯುಂಟಾಗುತ್ತದೆ ಎಂಬುದು ಕೆಲವರ ಅಭಿಪ್ರಾಯವಾದರೆ, ರಂಗಾಯಣದ ಕೆಲವು ಅಧಿಕಾರಿಗಳು, ಅದೇ ರಂಗಾಯಣದ ಸರ್ವರೀತಿಯ ಚಟುವಟಿಕೆಗಳನ್ನೂ ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದು ಮತ್ತೆ ಕೆಲವು ರಂಗಾಸಕ್ತರ ಆಕ್ಷೇಪವಾಗಿದೆ. ಹಾಗಾಗಿ, ಈ ಎರಡೂ ಅಂಶಗಳನ್ನು ಕುರಿತ ಚಿಂತನೆ ಅತ್ಯಗತ್ಯ. ಆದರೆ ಈ ಎರಡೂ ಅಂಶಗಳ ಹಿನ್ನೆಲೆಯಲ್ಲಿ ಇಲ್ಲಿ ಪ್ರಸ್ತಾಪಿಸಬೇಕಾಗಿರುವುದು ಸೇವಾ ಕಾನೂನಿನ ವಿಷಯ. ಕಳೆದ 25 ವರ್ಷಗಳಿಂದಲೂ ರಂಗಾಯಣದ ಹತ್ತಿರದ ಆಸಕ್ತನಾಗಿ ನಾನು ಗಮನಿಸಿರುವ ಸೇವಾ ಕಾನೂನಿನ ಅಂಶವೆಂದರೆ, ಸೇವಾ ಕಾನೂನಿನ ಯಾವ ಅಧಿನಿಯಮದ ಪ್ರಕಾರ, ಸರ್ಕಾರವು ರಂಗಾಯಣದ ಕಲಾವಿದರ ಸೇವೆಯನ್ನು ನಡೆಸಿಕೊಳ್ಳುತ್ತದೆ ಎಂಬುದು. ಅಂದರೆ, ರಂಗಾಯಣದ ಕಲಾವಿದರ ಸೇವೆ ಅನ್ಯ ಸರ್ಕಾರಿ ನೌಕರರ ಸೇವೆಯಂತೆ ಅಲ್ಲವಾದುದರಿಂದ, ರಂಗಾಯಣದ ಕಲಾವಿದರ ಸಲುವಾಗಿಯೇ ರಚಿಸಬೇಕಾಗಿದ್ದಂಥ ಸೇವಾ ನಿಯಮಗಳನ್ನು ಸರ್ಕಾರವು ಈವರೆಗೂ ರಚಿಸಿದಂತೆ ತೋರುವುದಿಲ್ಲ. ಅಂದ ಮೇಲೆ, ಅಂಥ ಯಾವ ನಿಯಮಗಳ ಪ್ರಕಾರ ರಂಗಾಯಣದ ಕಲಾವಿದರನ್ನು ಹೀಗೆ ವರ್ಗಾಯಿಸುವ, ಈ ರೀತಿಯ ಕ್ರಮಗಳನ್ನು ಸರ್ಕಾರವು ಮೇಲಿಂದ ಮೇಲೆ ತೆಗೆದುಕೊಳ್ಳುತ್ತಿದೆ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟಪಡಿಸಬೇಕು. ರಂಗಾಯಣದ ಹಿರಿಯ ರಂಗಪರಿಣತರು ರಂಗಕಲಾವಿದರನ್ನು ಅರ್ಥಪೂರ್ಣವಾಗಿಯೂ ಶೈಕ್ಷಣಿಕವಾಗಿಯೂ ತರಬೇತಿಗೊಳಿಸಿ ನಾಡಿನಾದ್ಯಂತ ಅವರನ್ನು ವಿಸ್ತರಿಸಬಹುದೇ ಹೊರತು, ರಂಗಾಯಣವನ್ನೇ ಹೀಗೆ ಹರಿದು ಹರಿದು ಹಂಚುವುದು, ಆ ಕ್ಷೇತ್ರದ ಜ್ಞಾನಶೂನ್ಯ ಆಡಳಿತದ ಕ್ರಮವೆನಿಸುತ್ತದೆ.
-ಡಾ. ಮ.ನ. ಜವರಯ್ಯ, ನಾಟಕಕಾರ, ಮೈಸೂರು
ಇವರನ್ನು ಬೆಂಬಲಿಸುವುದು ಅರ್ಥಹೀನ
ದಿ. 16.3.13ರ ರಂದು ಪ್ರಕಟವಾದ ಪ್ರತಾಪ್ ಸಿಂಹ ಅವರ ಲೇಖನ ಅರ್ಥಪೂರ್ಣವಾಗಿತ್ತು. ಜನರು ಎಲ್ಲಾ ಪಕ್ಷಗಳ ಆಡಳಿತದ ಮಜಲುಗಳನ್ನು ನೋಡಿದ್ದರು. ಬಿಜೆಪಿ ಸರ್ಕಾರ ಖಂಡಿತವಾಗಿ ಒಳ್ಳೆಯ ಆಡಳಿತ ನೀಡಲಿದೆ ಎಂದು ಭಾವಿಸಿದ್ದರು. ಬಿಜೆಪಿ ಆರ್.ಎಸ್.ಎಸ್.ನಿಂದ ಬಂದಂತಹ ಪಕ್ಷ. 'ಮೊದಲು ನನ್ನ ದೇಶ ನಂತರ ನಾನು" ಎಂಬುದು ಬಿಜೆಪಿಯ ಧ್ಯೇಯವಾಕ್ಯ. ಆದರೆ ಆದದ್ದೇ ಬೇರೆ. ಯಡಿಯೂರಪ್ಪನವರು ಅನ್ನದಾತ ರೈತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ, ಎರಡು ಬೆರಳುಗಳನ್ನು ಎತ್ತಿ ಎತ್ತಿ ತೋರಿಸಿ, ಯಕ್ಷಿಣಿ ಮಾಡಿದರು. ಪಕ್ಷದವರ ಅಡ್ಡಗಾಲಿನ ನಡುವೆಯೇ 42 ತಿಂಗಳು ರಾಜ್ಯಭಾರ ಮಾಡಿದರು. ರಾಜ್ಯವನ್ನು ಉನ್ನತ ಸ್ಥಿತಿಗೆ ತರುತ್ತೇನೆ, ನನ್ನ ಕನಸು "ಕಲ್ಯಾಣ ರಾಜ್ಯದ ಕನಸು" ಎಂದು ಕರ್ನಾಟಕದ ಉದ್ದಗಲಕ್ಕೂ ಅಡ್ಡಾಡಿದರು. ಅದರಲ್ಲಿ 12 ತಿಂಗಳುಗಳ ಕಾಲ ಆಕಾಶದಲ್ಲೇ ಹಾರಾಟ! ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ತಗುಲಿದ ಖರ್ಚು 36 ಕೋಟಿ. ಆ ಅವಧಿಯ ಸಾಧನೆ ಸಮಾರಂಭಗಳು 1750. ಇದಕ್ಕಾಗಿ ನೂರಾರು ಕೋಟಿ ವ್ಯರ್ಥ ಖರ್ಚು. ಮಠಮಾನ್ಯಗಳಿಗೆ ಕೋಟ್ಯಂತರ ಹಣ ಮಂಜೂರು ಮಾಡಿದ್ದೇ ಅವರ ಸಾಧನೆ ಎಂಬುದು ಎಲ್ಲರಿಗೂ ತಿಳಿದಿದೆ. ರಾಜಕೀಯದಲ್ಲಿ ಪರ, ವಿರೋಧ ಕಂಡಿದ್ದೇವೆ. ಆದರೆ ಇವರಿಗೆ ಇವರೇ ಶತ್ರು! ತಮ್ಮ ಬೇಳೆ ಬೇಯಿಸಿಕೊಳ್ಳಲು "ಆಪರೇಷನ್ ಕಮಲ"ದಂತಹ ಕೀಳು ರಾಜಕೀಯಕ್ಕೆ ಮೊರೆ ಹೋದರು. ಪಕ್ಷದಲ್ಲಿ ಒಬ್ಬರಾದರೆ ಸರಿ, ಬಹುತೇಕರು ಒಂದಲ್ಲ ಒಂದು ಹಗರಣದಲ್ಲಿ ಭಾಗಿಯಾಗಿರುವುದು ಸುಸ್ಪಷ್ಟ. ಇವರನ್ನೆಲ್ಲ ಬೆಂಬಲಿಸುವುದು ಅರ್ಥಹೀನ!
-ಎಂ. ಮೃತ್ಯುಂಜಯಪ್ಪ, ಚಿತ್ರದುರ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

