ಸಂಪಾದಕೀಯ

ಸಾರಾಯಿ ಶೀಷೆಯಲಿ ಸರ್ವನಾಶವೇ ಕಾಣುವುದು...!

Published On :

ಕಡಿಮೆ ದರದಲ್ಲಿ ಮದ್ಯ ಪೂರೈಸುವ ಸರ್ಕಾರದ ಚಿಂತನೆ ಸರಿಯೇ ಎಂಬ ಬಗ್ಗೆ ಓದುಗರ ಅಭಿಪ್ರಾಯ ಕೇಳಲಾಗಿತ್ತು. ಪ್ರತಿಕ್ರಿಯೆಗಳು ಹೀಗೆ ಹರಿದಿವೆ...

ನೀರು ಕೊಡಿ ಸಾಕು
ಯಾವ ಪಕ್ಷ ಆಡಳಿತಕ್ಕೆ ಬಂದರೂ ಪ್ರತಿವರ್ಷ ಬೇಸಿಗೆಗಾಲ ಆರಂಭವಾಗುತ್ತಿದ್ದಂತೆ ಕಾಡುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗಲಿಲ್ಲ. ಇತ್ತೀಚಿನ ದಿನಗಳಲ್ಲಂತೂ ಒಂದು ಕೊಡ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ರಾಜ್ಯದಲ್ಲಿ ಉದ್ಭವವಾಗಿದೆ. ಮದ್ಯದಂತಹ ವ್ಯಸನಗಳಿಗೆ ಬಲಿಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದನ್ನು ಕಡಿಮೆಗೊಳಿಸುವ ಜಾವಾಬ್ದಾರಿಯನ್ನು ಹೊಂದಿರುವ ಮುಖ್ಯಮಂತ್ರಿಯವರೇ ಕಡಿಮೆ ದರಕ್ಕೆ ಮದ್ಯ ಪೂರೈಸುವ ನಿರ್ಧಾರವನ್ನು ಕೈಗೊಂಡಿರುವುದು ಯಾವ ದೃಷ್ಟಿಯಲ್ಲಿ ನೋಡಿದರೂ ಲಾಭದಾಯಕವಲ್ಲ. ಸಮಾಜದ ಸ್ವಾಸ್ಥ್ಯ ಕೆದಕಲು ಕಡಿಮೆ ದರಕ್ಕೆ ಮದ್ಯ ನೀಡುವಷ್ಟು ಒಳ್ಳೆಯ ಪ್ರಯೋಗ ಇನ್ನೊಂದಿಲ್ಲ. ಒಂದು ವೇಳೆ ಕಡಿಮೆ ಬೆಲೆಗೆ ಮದ್ಯ ದೊರೆತಲ್ಲಿ ಎಷ್ಟೋ ಜನರ ಹೆಂಡತಿ ಮಕ್ಕಳು ಮತ್ತೆ ಕುಡುಕನ ದಿನನಿತ್ಯದ ಉಪಟಳಕ್ಕೆ ಬಲಿಯಾಗಬೇಕಾಗುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಇತರ ಸಂಘ ಸಂಸ್ಥೆಗಳು ಸಾಕಷ್ಟು ವರ್ಷಗಳಿಂದ ಅದೆಷ್ಟೋ ಜನರ ಕುಡಿತವನ್ನು ನಿಲ್ಲಿಸಿ ಉತ್ತಮ ಸಮಾಜದ ನಿರ್ಮಾಣದಲ್ಲಿ ತೊಡಗಿಸಿ ಕೊಂಡಿವೆ. ಇಂತಹ ಸಂಸ್ಥೆಗಳ ಧೋರಣೆಗಳಿಗೆ ವಿರುದ್ಧವಾಗಿ ಮದ್ಯ ಪೂರೈಕೆಯಲ್ಲಿ ಸರ್ಕಾರ ತೊಡಗುವುದಕ್ಕಿಂತ ನಾಚಿಕೆಗೇಡಿನ ವಿಷಯ ಇನ್ನೊಂದಿಲ್ಲ. ಮದ್ಯದ ಬದಲು ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವ ಜಿಲ್ಲೆಗಳನ್ನು ಗುರುತಿಸಿ ಅವರಿಗೆ ಕುಡಿಯುವ ನೀರನ್ನು ಒದಗಿಸುವ ಪ್ರಯತ್ನದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ.  
-ಚಂದ್ರಹಾಸ ಚಾರ್ಮಾಡಿ, ಧರ್ಮಸ್ಥಳ

ಇನ್ನಷ್ಟು ಕೆಟ್ಟ ಅಂಶ...

ಕುಡಿತ ದರ ಇಳಿಕೆ ಬಗ್ಗೆ ನಿಮ್ಮ ಲೇಖನ ಬಹಳ ಸೂಕ್ತವಾಗಿದೆ. ಇದರೊಂದಿಗೆ ಇನ್ನಷ್ಟು ಸಂಭವನೀಯ ದುಷ್ಪರಿಣಾಮಗಳನ್ನು ಸೇರಿಸಲು ಇಷ್ಟ ಪಡುತ್ತೇನೆ.
ಕ್ವಾರ್ಟರ್ ಹಾಕ್ತಿದ್ದವ ನೈಂಟಿ ಹಾಕಿದರೆ...
1. ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಚಿಂತನೆ ಮಾಡ್ಬೇಕಾಗುತ್ತೆ.
2. ಕುಡಿತಕ್ಕೆ ಸಂಬಂಧಿಸಿದ ಅಪಘಾತಗಳು ಹೆಚ್ಚಾಗುತ್ತವೆ.
3. ಸಾಮಾಜಿಕ ಸ್ಥಳಗಳಲ್ಲಿ (ರಸ್ತೆ, ಬಸ್ ನಿಲ್ದಾಣ ಮುಂತಾದವುಗಳು) ಗಲಾಟೆ, ಗದ್ದಲಗಳು ಹೆಚ್ಚಾಗುತ್ತವೆ.  ಅಂತೆಯೇ ಕುಡಿತಕ್ಕೆ ಸಂಬಂಧಿಸಿದ ಅಪರಾಧಗಳು ಇಮ್ಮಡಿಗೊಳ್ಳುತ್ತವೆ.
-ಪರೇಶ

ಕುಡಿತ ಮೂಲಭೂತ ಅಗತ್ಯವೇ?

ಕಡಿಮೆ ಬೆಲೆಗೆ ಮದ್ಯ ಕೊಡುತ್ತಾರೆ ಅಂದಾಕ್ಷಣ ಜನರು ಕಡಿಮೆ ಕುಡಿಯುತ್ತಾರೆಂದೇ ಇವರ ಮಾತಿನರ್ಥ? ಅಥವಾ ಕುಡಿದು ಉಳಿದಿದ್ದ ಹಣ ಇತರ ಅವಶ್ಯಕತೆ ಮೇಲೆ ಖರ್ಚು ಮಾಡುತ್ತಾರೆಂದೇ ನಿಮ್ಮ ಚಿಂತನೆ? ಸ್ವಲ್ಪ ಹೆಂಡದ ಅಂಗಡಿ ಬಳಿ ಹೋಗಿ ನೋಡಿ. ಅಲ್ಲಿ ಕುಡಿಯುವ ಸ್ಪರ್ಧೆ ನಡೆಯುತ್ತಿರುತ್ತದೆ. ಇನ್ನು ನಿಷೇಧದಿಂದ ದುಬಾರಿ ಬೆಲೆ ತೆರಲಾರದೇ ಕುಡಿತ ಬಿಟ್ಟವರು ಮತ್ತೆ ಕುಡಿತ ಶುರು ಮಾಡುವುದಿಲ್ವೇ? ನೀವು ಕಡಿಮೆ ಬೆಲೆಗೆ ಕೊಡಲು ಅದೇನು ಮೂಲಭೂತ ಅವಶ್ಯಕತೆಯೇ?  ನಿಮ್ಮ ಪ್ರಕಾರ ಬಡವರು ದುಬಾರಿ ಬೆಲೆಗೆ ಮದ್ಯ ತಗೋತಾರೆ ಅಂತಾದರೆ ಸಂಪೂರ್ಣ ಮದ್ಯಪಾನ ನಿಷೇಧಿಸಿ. ಹಾಳು ಮಾಡುತ್ತಿರುವ ಎಲ್ಲರ ಹಣ ಉಳಿಯುತ್ತದೆ.
-ನವೀನ್ ನಾಯಕ್ ಆರ್.

ಕುಡಿವವನನ್ನು ಮದ್ಯವೇ ಕುಡಿಯುತ್ತದೆ

ಕಡಿಮೆದರಕ್ಕೆ ಮದ್ಯ ಕೊಡುವುದು ಖಂಡಿತ ಸರಿಯಲ್ಲ. ಕುಡಿತದ ಚಟದಿಂದಾಗುವ ಹಾನಿಗಳ ಬಗ್ಗೆ ಸಾಕಷ್ಟು ಅಧ್ಯಯನಗಳು ಎಚ್ಚರ ನೀಡಿವೆ. ವೈಯಕ್ತಿಕ ಹಾಗೂ ಕೌಟುಂಬಿಕ ವಿಘಟನೆ, ಬಡತನದ ಹೆಚ್ಚಳ, ಆರೋಗ್ಯ ಹಾನಿ, ಮಕ್ಕಳ ಶಿಕ್ಷಣಕ್ಕೆ ಕಾಸಿಲ್ಲ ಹೀಗೆ ದುಷ್ಪರಿಣಾಮಗಳ ದೊಡ್ಡ ಪಟ್ಟಿಯೇ ಇದೆ. ಕಡಿಮೆ ದರದಲ್ಲಿ ಸಾರಾಯಿ ಕೊಟ್ಟರೆ ಈ ವರೆಗೆ ಕುಡಿಯದವರೂ ಪಂಕ್ತಿಯಲ್ಲಿ ಸೇರಿಕೊಳ್ಳಬಹುದು. ಮೊದಲು ಮನುಷ್ಯ ಮದ್ಯ ಕುಡಿಯುವುದು, ಮತ್ತೆ ಅದೇ ಕುಡುಕನನ್ನು ಕುಡಿಯುತ್ತದೆ. ಆಗ ಯಾವ ಡಾಕ್ಟರರಿಂದಲೂ ಅಂದರೆ ದೇವರಿಂದಲೂ ರಕ್ಷಿಸಲು ಸಾಧ್ಯವಿಲ್ಲ.
-ಡಾ. ಚಂದ್ರಶೇಖರ ದಾಮ್ಲೆ

ಅಗ್ಗದ ಸಾರಾಯಿ: ಅನುಕೂಲವೇ ಹೆಚ್ಚು

ಕಡಿಮೆ ದರಕ್ಕೆ ಮದ್ಯ ಕೊಡುವುದು ಸರಿಯೇ ಎಂದು ಪ್ರಶ್ನಿಸಿದ್ದೀರಿ. ನೂರಕ್ಕೆ ನೂರರಷ್ಟು ಸರಿ. ಒಬ್ಬ ಕೂಲಿ ಮಾಡುವ ಹೆಂಗಸಿಗೆ ಅಥವಾ ಗಂಡಸಿಗೆ ಹಳ್ಳಿ ಕಡೆ ದಿನಕ್ಕೆ ಹೆಂಗಸಿಗೆ 100 ಗಂಡಸಿಗೆ 200 ಕೂಲಿ ತೆಗೆದುಕೊಂಡು ಮದ್ಯದ ಬಾಟಲಿಗೆ 50 ಕೊಟ್ಟು ಕುಡಿದರೂ ಸಹ ಕಿಕ್ ಹೊಡೆಯುವುದಿಲ್ಲ ಎಂದು ಹೇಳುತ್ತಾರೆ. ಆದ್ದರಿಂದಲೇ ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬಾಯಿಗೆ ಬಂದ ಹಾಗೆ ಬೈಯ್ಯುತ್ತಾರೆ. 'ನಮಗೆ ಹಳೇ ಸಾರಾಯಿ ಪ್ಯಾಕೆಟ್ಟೇ ಸರಿ. 15 ಕೊಟ್ಟು ಕುಡಿದು ಇನ್ನು ಉಳಿದ ಹಣವನ್ನು ಸಂಸಾರಕ್ಕಾಗಿ ಉಳಿಸುತ್ತಿದ್ದೆವು. ಈಗ 50 ಕೊಟ್ಟು ಕುಡಿದರೂ ನಿಶೆ ಏರುವುದಿಲ್ಲ. ಹೆಚ್ಚಿಗೆ 25 ನಮ್ಮ ಕೂಲಿ ಮಾಡಿದ ಹಣದಲ್ಲಿ ಅನ್ಯಾಯವಾಗುತ್ತಿದೆ. ಈ ನನ್ಮ ಬಂದು ಸಾರಾಯಿ ನಿಲ್ಲಿಸಿ ನಮಗೆ ಮತ್ತು ನಮ್ಮ ದುಡ್ಡಿಗೆ ನಾಮ ಹಾಕಿದ್ದಾರೆ. ಅದಕ್ಕೆ ನಾವೆಲ್ಲ ಸಾರಾಯಿಪ್ರಿಯರು, ಕಾಂಗ್ರೆಸ್‌ಗೆ ವೋಟು ಹಾಕಿದ್ದೀವಿ' ಎಂದು ಹೇಳಿದ್ದನ್ನು ಕೇಳಿದ್ದೇನೆ. ಈಗ ಕಾಂಗ್ರೆಸ್ ಸರ್ಕಾರ ಬಂದು ನಮ್ ಕಷ್ಟ ಅರ್ಥ ಮಾಡಿಕೊಂಡು 35 ರೂ. ಉಳಿಸಿ ನಮಗೂ ಸಹ ಖುಷಿ ಕೊಡುತ್ತಾಯಿದೆ ಅಂತ ಮಾತಾಡುತ್ತಿರುತ್ತಾರೆ. ಅಲ್ಲದೇ ಸಾರಾಯಿ ಮಾರಾಟ ಸರಿ. 1 ಅಕ್ಕಿ ಕೊಟ್ಟು, 10ಗೆ ಸಾರಾಯಿ ಕೊಟ್ಟರೆ ಉಳಿಕೆಯನ್ನು ಕೂಲಿ ಕಾರ್ಮಿಕರು ನೇರವಾಗಿ ಸಂಸಾರಕ್ಕೆ ಮಕ್ಕಳ ವಿದ್ಯಾಭ್ಯಾಸಕ್ಕೆ ಆರೋಗ್ಯಕ್ಕೆ, ಬಟ್ಟೆಗಾಗಿ ಉಪಯೋಗಿಸುತ್ತಾರೆ. ಇನ್ನು, ದುಬಾರಿ ಬಾಟಲಾದರೂ, ಅಗ್ಗದ ಸಾರಾಯಿಯಾದರೂ ಕುಡಿದು ರೋಡಿನಲ್ಲಿ ಬೀಳುವುದು ಸಾಮಾನ್ಯ. ಅದು ಲೋಕದ ಡೊಂಕು. ಯಾರೂ ತಿದ್ದಲು ಸಾಧ್ಯವಿಲ್ಲ. ಆದ್ದರಿಂದ ಸಾರಾಯಿ ಮಾರುಕಟ್ಟೆಗೆ ಬಿಡುವುದು 100ರ್ ಸರಿ.
-ಬಿ.ವಿ. ಸತ್ಯವತಿ,  ಎಂ.ಹೊಸಳ್ಳಿ, ಕೊರಟಗೆರೆ

ಜನರ ನೆಮ್ಮದಿಗೆ ಕೊಳ್ಳಿ

ಕಾಂಗ್ರೆಸ್ ಸರ್ಕಾರದ ಮೇಲೆ ಬಹು ನಿರೀಕ್ಷೆ, ಭರವಸೆಗಳನ್ನ ಇಟ್ಟುಕೊಂಡಿದ್ದ ಜನರಿಗೆ, ಪ್ರಾರಂಭದಲ್ಲೇ ಅದು ಹುಸಿಯಾಗ ತೊಡಗಿದೆ. ಸಾರಾಯಿ ನಿಷೇಧದಿಂದಾಗಿ ಎಷ್ಟೋ ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ. ಕುಡಿತ ಸಂಪೂರ್ಣ ನಿಲ್ಲದಿದ್ದರೂ ಅದರ ಪ್ರಮಾಣ ಕುಗ್ಗಿ ಗ್ರಾಮೀಣ ಭಾಗದಲ್ಲಿ ನೆಮ್ಮದಿ ನೆಲೆಸಿದೆ. ಇದೀಗ ಅಗ್ಗದ ಮದ್ಯವೇನಾದರೂ ಕೈಗೆಟುಕುವ ದರದಲ್ಲಿ ಸಿಗುವಂತಾದರೆ, ಖಂಡಿತಾ ಕುಡಿತವೆಂಬುದು ಮಿತಿಮೀರಿ ಗ್ರಾಮೀಣ ಜನರ ಸಂಸಾರಕ್ಕೆ ಕೊಳ್ಳಿ ಇಟ್ಟಂತಾಗುತ್ತದೆ. ಇದುವರೆಗೂ 30, 60, ಮತ್ತು 90 ಕುಡಿದು ಹಿತ-ಮಿತವಾದ ಜೀವನ ಸಾಗಿಸುತ್ತಿದ್ದವರು, ಅದೇ ಬೆಲೆಯಲ್ಲಿ ಅಗ್ಗದ ಮದ್ಯ ಖರೀದಿಸಿ ಒಂದು, ಎರಡು ಬಾಟೆಲ್‌ಗಳ ಮಟ್ಟಕ್ಕೆ ಕುಡಿದು ಬಿಡಬಹುದು. ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೆ, ಸ್ವಸ್ಥ್ಯ ಸಮಾಜಕ್ಕೂ ಮಾರಕವಾಗಿ ಪರಿಣಮಿಸುವುದರಲ್ಲಿ ಎರಡು ಮಾತಿಲ್ಲ. ದೇಶದ ಬೆನ್ನೆಲುಬಾಗಿರುವ ಯುವ ಪೀಳಿಗೆ ಮದ್ಯ ವ್ಯಸನದಲ್ಲಿ ತೊಡಗಿಸಿಕೊಳ್ಳುತ್ತಿರುವ ಬಗ್ಗೆ ಹಲವು ಸಂಶೋಧನೆಗಳಿಂದ ಆಘಾತಕಾರಿ ಸುದ್ದಿ ತಿಳಿದು ಬಂದಿದೆ. ಇದರ ಬೆನ್ನಲ್ಲೇ ಇಂತಹ ಅಗ್ಗದ ಮದ್ಯವೇನಾದರೂ ಯುವ ಪೀಳಿಗೆ ಕೈಗೆ ಸಿಕ್ಕರೆ ದೇಶದ ಅಭಿವೃದ್ಧಿ ಕುಂಠಿತಗೊಳ್ಳುವ ಸಾಧ್ಯತೆಯೂ ಹೆಚ್ಚಾಗಬಹುದು.
-ವಸಂತ ಬಿ ಈಶ್ವರಗೆರೆ, ಹಿರಿಯೂರು, 9980299736.

ಜನಕಲ್ಯಾಣಕ್ಕೆ ಬೇರೆ ಮಾರ್ಗವಿಲ್ಲವೇ?

ಸಿ.ಎಂ. ಸಿದ್ರಾಮಣ್ಣನವರಿಗೆ, ನಿಮ್ಮ ಅಭಿಮಾನಿಯೊಬ್ಬನ ಮನವಿ. ಕನಸಿನಲ್ಲಿಯೂ ಕಾಂಗ್ರೇಸ್‌ಗೆ ಮತ ಹಾಕಲು ಒಪ್ಪದ ನಾನು ಮೊದಲಬಾರಿಗೆಂಬಂತೆ ಅದೂ ನೀವು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸುಳಿವು ಸಿಕ್ಕ ಕ್ಷಣದಿಂದ ರಾಜ್ಯದ ಸಮಗ್ರ ಅಭಿವೃದ್ಧಿಯ ಕನಸನ್ನು ಕಂಡು ಖುಷಿಯಾದೆ. ಜಡ್ಡುಗಟ್ಟಿರುವ ಸರ್ಕಾರಿ ವ್ಯವಸ್ಥೆ, ಬಿಳಿ ಆನೆಗಳಂತಿರುವ ಹಿರಿಯ ಅಧಿಕಾರಿ ವರ್ಗಕ್ಕೆ ಹಿಡಿದಿರುವ ನಾವೇನೇ ಮಾಡಿದರೂ ನಡೆಯುತ್ತದೆ ಎನ್ನುವ ನೀತಿಗೆ ಇನ್ನಾದರೂ ಅಂಕುಶ ಬೀಳುತ್ತದೆ ಎಂದು ಅಂದು ಕೊಂಡ ಸಮಯದಲ್ಲಿಯೇ  ನಿಮ್ಮಿಂದ ಇಂತಹ ಮನೆಮುರುಕ ನೀತಿಯನ್ನು ನಿಮ್ಮ ನೇರ ನಡೆ ನುಡಿ ಕಂಡ ಯಾರೂ ಸಹಿಸಿ ಕೊಳ್ಳುವುದಿಲ್ಲ.  ರಾಜ್ಯದ ಜನ ನೀರಿಗಾಗಿ ಹಾಹಾಕಾರ ಪಡುತ್ತ ಮಾಧ್ಯಮಗಳು ಬೆಂಗಳೂರಿಗೆ ಇನ್ನು ಮೂರೇ ದಿನ ನೀರು ಎಂಬ ವಿಷಯವನ್ನೆ ಬ್ರೇಕಿಂಗ್ ನ್ಯೂಸ್ ನೀಡುತ್ತಿದ್ದ ಹೊತ್ತಿನಲ್ಲಿ ನೀರು ಕೊಡಲು ಯೋಚಿಸುವ ಬದಲು ಬೀರು ಕೊಡಹೊರಟಿರುವುದು ಯಾವ ಸಾಮಾಜಿಕ ನ್ಯಾಯ? ಕೆ.ಜಿ ಗೆ 1ರಂತೆ 30 ಕೆ.ಜಿ. ಅಕ್ಕಿ, ಸಾಲ ಮನ್ನ ಮೊದಲಾದ ಜನೋಪಯೋಗಿ ಯೋಜನೆಯ ಬೋನಸ್ ಎಂಬಂತೆ ಮದ್ಯದ ಮೇಲಿನ ಬೆಲೆ ಕಡಿಮೆ ಮಾಡಿ, ಕಡಿಮೆ ಕುಡಿಯುತ್ತಿದ್ದ ಜನರನ್ನು ಮತ್ತಷ್ಟು ಹೆಚ್ಚು ಕುಡಿಯಲು ಪ್ರೋತ್ಸಾಹವನ್ನು ಸರ್ಕಾರವೇ ಮಾಡಿಕೊಟ್ಟಂತೆ ಆಗಿದೆ. ಮದ್ಯದ ಅಮಲಿಗೆ ಬಲಿಯಾಗಿ ಕೇವಲ ಹೆಂಡತಿಯ ಚಿನ್ನದ ಓಲೆ, ತಾಳಿಗಳನ್ನು ಮಾರುತ್ತಿದ್ದವರ ಮನೆಯ ಎಲ್ಲಾ ಪದಾರ್ಥಗಳನ್ನು ಇನ್ನು ಮುಂದೆ ಗಿರವಿ ಅಂಗಡಿಗಳಲ್ಲಿ ನೋಡಬೇಕಾಗಬಹುದು. ಮದ್ಯದ ಬೆಲೆ ಕಡಿಮೆ ಮಾಡುವಂತಹ ರಾಜಕಾರಣ ಬಿಟ್ಟು ಹಾಗೇನಾದರೂ ಬೆಲೆ ಕಡಿಮೆ ಮಾಡಲೇ ಬೇಕೆಂಬ ಬಯಕೆ ಇದ್ದರೆ ಲಕ್ಷಾಂತರ ಜನರಿಗೆ ಅನುಕೂಲವಾಗುವಂತೆ ಅಡಿಗೆ ಅನಿಲದ ಮೇಲೆ, ಪೆಟ್ರೋಲ್ ಮೇಲೆ, ದಿನ ಬಳಕೆ ಮತ್ತು ಗೃಹಬಳಕೆ ವಸ್ತುಗಳ ಮೇಲೆ ಮತ್ತಷ್ಟು ಸಬ್ಸಿಡಿ ಕೊಡಿ.  ನಿಮ್ಮನ್ನ ನಂಬಿ ಆಯ್ಕೆ ಮಾಡಿದ ನಿಮ್ಮ ಹೈ ಕಮಾಂಡ್‌ಗೆ ಮತ್ತು ಜನರಿಗೆ ಹೊಸ ಭರವಸೆ ಮೂಡಿಸಿ.
-ಸ.ವೆಂ. ತೀರ್ಥ, ಮೈಸೂರು, 7676545556

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.