ಪ್ರಧಾನಿ v/s ಪ್ರತಿಪಕ್ಷ
ಬುಧವಾರ ರಾತ್ರಿ ಪ್ರಧಾನಿಯ ಮನೆಯಲ್ಲಿನ ವಿಶಾಲವಾದ ಹಜಾರದಲ್ಲಿ ಕೇಂದ್ರದ ಆಳುವ ಕೂಟದ ಎರಡು ಹಂತಗಳಲ್ಲಿನ ಒಂಬತ್ತು ವರ್ಷಗಳ ಸಾಧನೆ ಕುರಿತಂತೆ ಸಿದ್ಧಪಡಿಸಿದ ದಾಖಲೆಯನ್ನು ಮನಮೋಹನ ಸಿಂಗ್ ಓದಿದ್ದು ಟಿವಿಗಳಲ್ಲಿ ನೇರವಾಗಿ ಪ್ರಸಾರವಾಯಿತು.
ಆ ದಾಖಲೆಯಲ್ಲಿ ಅವರು ಏನು ಹೇಳಬಹುದು, ಯಾವ ಸಂಗತಿಗಳನ್ನು ಮುಚ್ಚಿಡಬಹುದು ಎನ್ನುವ ವಿವರಗಳು ಅಧಿಕೃತವಾಗಿ ಪ್ರಕಟವಾಗದೇ ಹೋದರೂ ಅದನ್ನು ಊಹಿಸುವುದು ಕಷ್ಟವೇನೂ ಆಗಿರಲಿಲ್ಲ.
ಪ್ರಧಾನಿಯ ಹೇಳಿಕೆಗೆ ಮುಂಚೆಯೇ, ಸಂಸತ್ತಿನಲ್ಲಿನ ಬಿಜೆಪಿ ನಾಯಕರಾದ, ಸುಷ್ಮಾ ಸ್ವರಾಜ್ ಹಾಗೂ ಅರುಣ ಜೇಟ್ಲಿ ಅವರು ಪ್ರಗತಿಪರ ಸಂಯುಕ್ತ ಕೂಟ ಸರ್ಕಾರದ ಕಾರ್ಯವೈಖರಿಯನ್ನು ಕಟುವಾಗಿ ಖಂಡಿಸಿದ್ದೂ ಆಯಿತು.
ಅದರಿಂದ ದೇಶದ ಆರ್ಥಿಕ -ಸಾಮಾಜಿಕ ಮುನ್ನಡೆಗೆ ಸಂಬಂಧಿಸಿದಂತೆ ಉಭಯ ಪಕ್ಷಗಳ ನಡುವೆ ಸಮರದ ಆರಂಭವನ್ನು ಅಧಿಕೃತವಾಗಿ ಪ್ರಕಟಿಸಿದಂತೆಯೇ ಆಗಿದೆ.
ಆರ್ಥಿಕ ವ್ಯವಸ್ಥೆಯ ಉದಾರಿಕರಣದ ಮೊದಲ ವರ್ಷಗಳಲ್ಲಿ ನರಸಿಂಹರಾಯರ ಸರ್ಕಾರದ ವಿತ್ತ ಮಂತ್ರಿಯಾಗಿ ಸುಧಾರಣೆ ನೀತಿಯನ್ನು ಜಾರಿಗೆ ತರಲು ಮುನ್ನುಡಿಯನ್ನು ಬರೆದಿದ್ದ ಮನಮೋಹನ ಸಿಂಗ್ ಅವರೇ ಈಗ ಒಂಬತ್ತು ವರ್ಷಗಳಿಂದಲೂ ಪ್ರಧಾನಿ.
ಸುಧಾರಣೆ ನೀತಿಯ ಜಾರಿಯೂ ಅರೆಬರೆ ಎನ್ನುವಂತಾಗಿದೆ. ಸುಧಾರಣೆಯ ಕ್ರಮಗಳು ದೇಶದ ಮೇಲೆ ಹೊರಿಸಿರುವ ಹೊರೆಯಲ್ಲಿ ಬಹುಭಾಗವನ್ನು ಹೊರಬೇಕಾದ್ದು ಸಾಮಾನ್ಯ ಜನರೇ. 1992 ರಲ್ಲಿ ಭರವಸೆ ನೀಡಿದಂತೆ, ಕಡು ಬಡವರಿಗೆ ಸುಧಾರಣೆಯ ಅನಿಷ್ಟ ಪರಿಣಾಮದ ವಿರುದ್ಧದ ರಕ್ಷಾಕವಚ ದೊರೆತಿದ್ದು ಇತ್ತೀಚೆಗೆ ಅದರ ಜಾರಿಯೂ ಅಸಮರ್ಪಕ.
ಸುಧಾರಣೆಗೆ, ಅತಿ ಉತ್ಸಾಹದ ಬೆಂಬಲ ನೀಡಿದ್ದು ಮಧ್ಯಮ ವರ್ಗವೇ. 2004-2009ರ ಚುನಾವಣೆಗಳಲ್ಲಿ ಮನಮೋಹನ ಸಿಂಗ್ ಅವರೇ ಮಧ್ಯಮ ವರ್ಗಗಳ ಹೀರೋ. ದೇಶದಲ್ಲಿ ಸಂಪತ್ತು ವೃದ್ಧಿಯಾಯಿತು. ಆದರೆ ಅದನ್ನು ಕಬಳಿಸಿದ್ದು ಶ್ರೀಮಂತ ವರ್ಗಗಳೇ. ಕಡುಬಡವರ ಪಾಲಿಗೆ ಸರ್ಕಾರ ಹಲವಾರು ಕೊಡುಗೆಗಳನ್ನು ಒದಗಿಸಿ, ಅದು ಅವರ ಹಕ್ಕು ಎನ್ನುವಂತೆ ಮಾಡಿದೆ. ಆದರೆ ಆ ಹಕ್ಕುಗಳ ಈಡೇರಿಕೆಗೆ ಅಗತ್ಯವಾದ ಸಂಪನ್ಮೂಲದ ಮಾತನ್ನೇ ಆಡಿಲ್ಲ.
ಇದರ ಪರಿಣಾಮವಾಗಿ ರೂಪಗೊಂಡಿದ್ದು ಉದ್ಯೋಗ ಅವಕಾಶ ಹೆಚ್ಚಿಸದೇ ಹೋದ ಅಭಿವೃದ್ಧಿ. ಉದ್ಯೋಗಗಳು ಹೆಚ್ಚದೇ ಹೋದಾಗ, ಶ್ರಮಿಕ ಸಮಾಜ ಗುತ್ತಿಗೆ ಕೆಲಸಕ್ಕೆ ತುತ್ತಾಗಬೇಕಾಗಿ ಬಂದಿದ್ದು ಅನಿವಾರ್ಯ. ಸಮುದಾಯಕ್ಕೆ ಸಮುದಾಯವೇ ಈಗ ಗುತ್ತಿಗೆ ದುಡಿಮೆಯನ್ನೇ ನಂಬಬೇಕಾಗಿದೆ, ಅಂತಹ ವ್ಯವಸ್ಥೆಯನ್ನು ಸಹನೀಯವಾಗಿ ಮಾಡಬಲ್ಲ ಸಾಮಾಜಿಕ ಸೇವೆ-ಸೌಲಭ್ಯಗಳ ಹಂದರದ ನಿರ್ಮಾಣವಾಗಿಲ್ಲ.
ಈ ಹಿನ್ನೆಲೆಯಲ್ಲಿ ಪ್ರಧಾನಿಯ ಔತಣಕೂಟದ ರಾಜಕೀಯದ ಚಿತ್ರವನ್ನು ಗಮನಿಸಿದರೆ ಭದ್ರತೆಯ ಆಶಾ ಭಾವನೆಗೆ ಅವಕಾಶವಿಲ್ಲ. ಕೂಟ ಸರ್ಕಾರವನ್ನು ಜೀವಂತವಾಗಿ ಉಳಿಸಿರುವ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷಗಳ ನಾಯಕರಾದ ಮುಲಾಯಂ ಸಿಂಗ್ ಯಾದವ್ - ಮಾಯಾವತಿ ಆ ಔತಣಕೂಟದಿಂದ ದೂರ ಉಳಿದು, ಅದಕ್ಕೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿದ್ದು ಗಮನಾರ್ಹ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇನೋ ಮನಮೋಹನ ಸಿಂಗ್ ಅವರ ಕೆಲಸವನ್ನು ಮೆಚ್ಚಿ ಅವರ ಬೆಂಬಲಕ್ಕೆ ಕಾಂಗ್ರೆಸ್ ಇರುವುದನ್ನು ಪ್ರಕಟಿಸಿದ್ದಾರೆ, ಅದು ಅನಿವಾರ್ಯ. ಆದರೂ ಬುಧವಾರ ರಾತ್ರಿಯ ಬೆಳವಣಿಗೆಗಳನ್ನು ಗಮನಿಸಿದರೆ, ಸದ್ಯದ ಭವಿಷ್ಯದಲ್ಲಿ ದೇಶದ ರಾಜಕೀಯ ಪ್ರಧಾನಿ ವರ್ಸಸ್ ಪ್ರತಿಪಕ್ಷಗಳು ಎನ್ನುವಂತೆಯೇ ಇರಬಹುದು.
ಮುಂದಿನ ಕೆಲವು ತಿಂಗಳಿನಲ್ಲಿ ನಡೆಯುವ ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ, ಚತ್ತೀಸಗಡ ರಾಜ್ಯಗಳ ವಿಧಾನ ಸಭೆ ಚುನಾವಣೆಗಳಲ್ಲಿ ಸದ್ಯದ ಭವಿಷ್ಯದ ರಾಜಕೀಯದ ದಿಕ್ಕು ದೆಸೆಗಳ ಪರಿಚಯವಾಗಲೂಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

