ಸಂಪಾದಕೀಯ

ಅಮಾನುಷ, ವ್ಯವಸ್ಥಿತ, ಹೇಯ ನರಮೇಧ: ನಕ್ಸಲರ ಕೇಕೆ

Published On :

ಶನಿವಾರ, ಮಧ್ಯಭಾರತದ ಚತ್ತೀಸಗಡ ರಾಜ್ಯದ ದರ್ಭಾಘಟಿ ಕಣಿವೆಯ ದಟ್ಟ ಅರಣ್ಯದ ನಡುವೆ, ಸಂಘಟಿತ ನಕ್ಸಲೀಯ ದಂಡಕಾರಣ್ಯ ವಿಭಾಗದ ದಳ ನಡೆಸಿದ ನರಮೇಧವನ್ನು ದೇಶಕ್ಕೆ ದೇಶವೇ ಖಂಡಿಸಿದೆ. ಇಂತಹ ಕ್ರೌರ್ಯ, ಅಮಾಯಕರ ಸಾಮೂಹಿಕ ಕೊಲೆ ಜನತಾಂತ್ರಿಕ ಮೌಲ್ಯಗಳ ಮೇಲೇ ನಡೆಸಿದ ಅತ್ಯಾಚಾರ. ಸದ್ಯದಲ್ಲಿ ಮಾವೋ ವಾದಿಗಳನ್ನು ಬಿಟ್ಟು ಬೇರೆ ಯಾರೂ ಒಪ್ಪುವಂತಹ ಕ್ರಿಯೆಯಲ್ಲ ಇದು. ದಾಳಿ ನಡೆದಿದ್ದು ಕಾಂಗ್ರೆಸ್ ರ್ಯಾಲಿಯ ಮೇಲೆ.
ಛತ್ತೀಸಗಡ ರಾಜ್ಯದಲ್ಲಿ ಇನ್ನೇನು ಚುನಾವಣೆಯ ಶಂಕನಾದ, ರಣಕಹಳೆ ಕೇಳಿಬರುವ ಸಮಯವಿದು. ರಾಜಕೀಯ ಪಕ್ಷಗಳು ಚುನಾವಣೆ ಪೂರ್ವದ ಪ್ರದರ್ಶನಗಳು, ರ್ಯಾಲಿಯನ್ನು ನಡೆಸುವ ಸನ್ನಿವೇಶ. ಚತ್ತೀಸ್‌ಗಡದ ಕೆಲವು ಪ್ರದೇಶಗಳಲ್ಲಿ ನಕ್ಸಲೀಯ ಹಿಂಸಾಚಾರ ವಿಪರೀತವಾಗಿರುವ ಕಡೆಗಳಲ್ಲಿ ರಾಜಕೀಯ ನಾಯಕರು ಗುಂಪು ಗುಂಪಾಗಿ ಪ್ರಯಾಣ ಮಾಡಬಾರದೆನ್ನುವ ಸಲಹೆಯನ್ನು ನೀಡಿದ್ದರೂ, ಕಾಂಗ್ರೆಸ್ ಶನಿವಾರದ ರ್ಯಾಲಿಯನ್ನು ಏರ್ಪಡಿಸಿತ್ತು. ಅಷ್ಟೇ ಅಲ್ಲ. ಆ ರ್ಯಾಲಿಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ, ನಕ್ಸಲೀಯ ವಿರೋಧಿ ದಳವಾದ ಸಲ್ಮಾ ಜುಡುಂನ ಸಂಸ್ಥಾಪಕರ ಕರ್ಮ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನಂದಕುಮಾರ ಪಟೇಲ್ ಅವರೆಲ್ಲ ಪಾಲುಗೊಳ್ಳುವರೆನ್ನುವ ಪ್ರಕಟಣೆಯೂ ಆಗಿತ್ತು.
ಇದೆಲ್ಲ ವಿವರಗಳನ್ನು ತಿಳಿದ ನಕ್ಸಲೀಯ ದಂಡಕಾರಣ್ಯ ವಿಭಾಗೀಯ ದಳ ತನ್ನ ದಾಳಿಯ ಹಿಂಸಾಚಾರದ ಯೋಜನೆಯ ಎಲ್ಲ ವಿವರಗಳನ್ನು ಮಿಲಿಟರಿ ಶಿಸ್ತಿನ ವ್ಯವಸ್ಥೆಯಲ್ಲಿ ರೂಪಿಸಿಕೊಂಡಿದ್ದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.
ದಾರಿಗೆ ಅಡ್ಡವಾಗಿ ಮರಗಳನ್ನು ಉರುಳಿಸಿ, ಕಾರುಗಳು ಸಾಲುಸಾಲಾಗಿ ಬಂದು ನಿಂತ ಕೂಡಲೇ ಎರಡೂ ಕಡೆಗಳಿಂದ ಗುಂಡುಹಾರಿಸಿ ಸುಮಾರು ಮೂವತ್ತು ಮಂದಿಯ ಮಾರಣಹೋಮ ಮಾಡುವುದು ಅವರಿಗೆ ಸಾಧ್ಯವಾಯಿತು.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನಂದಕುಮಾರ ಪಟೇಲ್ ಅವರನ್ನು ದಾಳಿಕೋರರು ಅಪಹರಿಸಿಕೊಂಡು ಹೋದರು. ಅವರ ಶವ ಭಾನುವಾರ ಬೆಳಿಗ್ಗೆ ಸಿಕ್ಕಿತ್ತು. ಅವರ ಪುತ್ರನೂ ಅಪಹರಣಕ್ಕೆ ತುತ್ತಾಗಿದ್ದಾನೆ. ಅವರ ಪತ್ತೆಯಾಗಿಲ್ಲ. ಸಲ್ವಾ ಜುಡುಂ ಸಂಸ್ಥಾಪಕ ಮಹೇಂದ್ರ ಕರ್ಮ ಗುಂಡೇಟಿಗೆ ಬಲಿಯಾಗಿದ್ದಾರೆ. ಮಾಜಿ ಕೇಂದ್ರ ಮಂತ್ರಿ ವಿದ್ಯಾಚರಣ ಶುಲ್ಕ ಅವರೂ ಗುಂಡೇಟಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಕ್ಸಲೀಯರು ನಡೆಸಿರುವ ಅತಿದೊಡ್ಡ ದಾಳಿ ಇದು. ಅವರ, ಘಟನೆಯ ಪೂರ್ವ ತಯಾರಿ ಅಚ್ಚುಕಟ್ಟಾಗಿತ್ತು. ಮುಂದಿನದ್ದೆಲ್ಲ ಯಥಾಪ್ರಕಾರವೇ.
ಇಂತಹ ಅಮಾನುಷ ಘಟನೆಯನ್ನು ಎಲ್ಲ ರಾಜಕೀಯ ಪಕ್ಷಗಳ ನಾಯಕರೂ ಕಟುವಾಗಿ ಖಂಡಿಸಿ, ಅದನ್ನು ದೇಶ ಸಹಿಸಬಾರದೆಂದು ಹೇಳಿದ್ದಾರೆ. ಪ್ರಧಾನಿ ಮನಮೋಹನ ಸಿಂಗ್ ಸಂತ್ರಸ್ತರಿಗೆ, ಅವರ ಕುಟುಂಬಕ್ಕೆ ತತ್‌ಕ್ಷಣದ ನೆರವನ್ನೂ ಪ್ರಕಟಿಸಿದ್ದಾರೆ. ಇಂತಹ ಕೃತ್ಯ ನಡೆಸಿದ ಪಾತಕಿಗಳನ್ನು ಹಿಡಿದೇ ತೀರುತ್ತೇವೆ. ಅವರ ವಿರುದ್ಧ ಕಾಯಿದೆಯ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಖಚಿತ ಎಂದಿದ್ದಾರೆ. ರಾಹುಲ ಗಾಂಧಿ ಅವರು ಎಲ್ಲ ನಾಯಕರಿಗಿಂತ ಮೊದಲೇ ರಾಯಪುರವನ್ನು ತಲುಪಿದ್ದರು. ಪ್ರಧಾನಿ, ಸೋನಿಯಾ ಗಾಂಧಿ ಬಂದಿದ್ದು ಅನಂತರ. ಕಾಂಗ್ರೆಸ್‌ನ ವಕ್ತಾರ ಮನೀಶ್ ತಿವಾರಿ ಇದು ರಾಜಕೀಯ ಚೆಲ್ಲಾಟಕ್ಕೆ ಸಮಯವಲ್ಲ ಎಂದಿದ್ದಾರೆ. ಚತ್ತೀಸಗಡದ ನಾಯಕರು ಕೇಂದ್ರ ಸರ್ಕಾರ ಆ ರಾಜ್ಯಕ್ಕೆ ವಚನ ನೀಡಿದ್ದಂತೆ ಅಧಿಕ ಪೊಲೀಸ್ ನೆರವನ್ನು ನೀಡಿಲ್ಲ ಎಂದು ಹೇಳಿದ್ದಕ್ಕೆ ತಿವಾರಿ ಪ್ರತಿಸ್ಪಂದಿಸಿದ್ದ ರೀತಿ ಅದು. ಆದರೆ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರು ರಾಜ್ಯ ಬಿಜೆಪಿ ಸರ್ಕಾರ, ಕಾಂಗ್ರೆಸ್ ರ್ಯಾಲಿಗೆ ಒದಗಿಸಬೇಕಾದಷ್ಟು ಭದ್ರತೆಯನ್ನು ಒದಗಿಸಿರಲಿಲ್ಲ ಎಂದು ಹೇಳಿದ್ದಕ್ಕೆ ಪೂರಕವಾಗಿ ಕೇಂದ್ರ ಮಂತ್ರಿ ಕಪಿಲ ಸಿಬಲ್ ಅವರೂ ಧ್ವನಿ ಸೇರಿಸಿದರು. ಇಂತಹ ಅಮಾನುಷ ಘಟನೆಗಳನ್ನು ಎದುರಿಸಬೇಕಾದ ಸನ್ನಿವೇಶದಲ್ಲಿ ರಾಜಕೀಯ ಕೆಸರೆರಚಾಟ ಬೇಡ ಎಂದು ನಾಲಿಗೆಯ ತುದಿಯ ಮಾತಿನಲ್ಲಿ ಹೇಳಿ, ಅನಂತರ ತಮ್ಮ ಎಂದಿನ ವರಸೆಯನ್ನು ಪ್ರದರ್ಶಿಸುವುದು ರಾಜಕಾರಣಿಗಳ ಚಾಳಿ. ಅದು ಭಾನುವಾರ ಬೆಳಿಗ್ಗೆಯೇ ಪ್ರಕಾಶಕ್ಕೆ ಬಂದಿತ್ತು.
ಚತ್ತೀಸಗಡ ರಾಜ್ಯದಲ್ಲಿರುವ ಪರಿಸ್ಥಿತಿ ಕೇಂದ್ರಕ್ಕೆ ಚೆನ್ನಾಗಿಯೇ ತಿಳಿದಿದೆ. ಹಲವು ತಿಂಗಳ ಹಿಂದೆಯೇ ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲೇ ನಕ್ಸಲರ ಹಾವಳಿ ಇರುವ ರಾಜ್ಯಗಳಿಗೆ ಅಧಿಕ ಸಂಖ್ಯೆಯ ಕೇಂದ್ರ ಮೀಸಲು ಪಡೆಯ ಪೊಲೀಸರನ್ನು ಒದಗಿಸಲಾಗುವುದೆಂದು ಕೇಂದ್ರ ಸರ್ಕಾರ ಪ್ರಕಟಿಸಿದ್ದು ನಿಜ. ಆದರೆ ಸರ್ಕಾರದ ನಿರ್ಧಾರದ ಪ್ರಕಟಣೆಗೂ, ಅದು ಕಾರ್ಯರೂಪಕ್ಕೆ ಇಳಿಯುವುದಕ್ಕೂ ಇರುವ ಸಮಯದ ಅಂತರ ದೊಡ್ಡದು. ಭಾನುವಾರ ರಾಯ್‌ಪುರಕ್ಕೆ ಮುನ್ನೂರು ಮಂದಿ ಕೇಂದ್ರ ಪೊಲೀಸರು ಬಂದಿದ್ದಾರೆ, ಇಂತಹ ಘಟನೆಗಳಿಗೆ ಗುಡ್ಡಗಾಡು ಜನರ ಅಭಿವೃದ್ಧಿಗೆ ಸರ್ಕಾರ ರೂಪಿಸಿರುವ ಜನಕಲ್ಯಾಣ ಕಾರ್ಯಕ್ರಮಗಳು ವಿಫಲವಾಗಿರುವುದೇ ಅತಿದೊಡ್ಡ ಕಾರಣವೆನ್ನುವುದನ್ನು ಅನೇಕರು ಒಪ್ಪುತ್ತಾರೆ. ದಶಕಗಳ ಹಿಂದೆ ನಕ್ಸಲಬಾರಿಯಲ್ಲಿ ಚಾರುಮಜುಂದಾರ್ ಈ ಆಂದೋಲನವನ್ನು ಆರಂಭಿಸಿದಾಗಲೂ ಅದೇ ಮಾತು ಕೇಳಿ ಬಂದಿತ್ತು. ಈಗಲೂ ಕೇಳಿ ಬರುತ್ತಿದೆ. ಇದು ಸಿದ್ಧಾಂತದ ಮಾತಾಯಿತು. ಸದ್ಯದ ಆದ್ಯತೆ ಎಂದರೆ ಶನಿವಾರದ ಘಟನೆಯ ಸಂತ್ರಸ್ತರಿಗೆ ಶೀಘ್ರದಲ್ಲಿ ಪರಿಹಾರ - ನೆರವು ನೀಡುವುದು ಹಾಗೂ ಆ ರಾಜ್ಯದಲ್ಲಿನ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವುದು. ಈಗಲೂ ಸರ್ಕಾರ ತೀವ್ರ ಸ್ವರೂಪದ ಕಾರ್ಯಾಚರಣೆಗೆ ಮುಂದಾಗದೇ ಹೋದರೆ ಭವಿಷ್ಯದಲ್ಲಿ ಅದಕ್ಕೆ ತೆರಬೇಕಾದ ಬೆಲೆ ಬಹುದೊಡ್ಡದಾಗಿರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.