ಇವರೆಂತಹ ಗೃಹಮಂತ್ರಿ?
ಕಳೆದ ಶನಿವಾರ, ಛತ್ತೀಸಗಡದ ದಕ್ಷಿಣ ಬಸ್ತಾರ್- ಜಗದಾಲಪುರ ಸೀಮೆಯಲ್ಲಿ, ಕಾಂಗ್ರೆಸ್ ರ್ಯಾಲಿಗೆಂದು ಸಮಾವೇಶಗೊಂಡಿದ್ದವರಲ್ಲಿ 28 ಮಂದಿಯನ್ನು ಅಲ್ಲಿನ ನಕ್ಸಲೀಯ- ಮಾವೊವಾದಿ ಉಗ್ರಗಾಮಿಗಳು ಅಮಾನುಷವಾಗಿ ಕೊಂದಾಗ ಕೇಂದ್ರ ಗೃಹಮಂತ್ರಿ ಸುಶೀಲ ಕುಮಾರ ಶಿಂದೆ ಅಮೆರಿಕದಲ್ಲಿ ಯಾವುದೋ ಒಂದು ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಹೋಗಿದ್ದ ರು.
ಹತ್ಯಾಕಾಂಡದ ಸುದ್ದಿಯನ್ನು ತಿಳಿದ ಕೂಡಲೇ ದೆಹಲಿಯಲ್ಲಿ ನಿರೀಕ್ಷಿಸಿದಂತೆ ತೀವ್ರ ಚಟುವಟಿಕೆ. ಪ್ರಧಾನಿ ಮನಮೋಹನ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ ಗಾಂಧಿ ಅವರೆಲ್ಲ ರಾಯಪುರ- ಜಗದಾಲಪುರಕ್ಕೆ ತೆರಳಿದರೆ, ಮಾಜಿ ಗೃಹಮಂತ್ರಿ ಪಿ. ಚಿದಂಬರಮ್ ಅವರು ದೆಹಲಿಯಲ್ಲೇ ಕೂತು ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ, ರಾಯಪುರಕ್ಕೆ ಸೂಕ್ತ ರೀತಿಯ ಸಲಹೆಗಳನ್ನು ರವಾನಿಸುವುದರಲ್ಲಿ ನಿರತರಾದರು. ಆ ಕಾಲಘಟ್ಟಕ್ಕೆ ವಸ್ತುಶಃ ಚಿದಂಬರಮ್ ಅವರೇ ಗೃಹಮಂತ್ರಿಯ ಕೆಲಸ ಮಾಡಿದ್ದು.
ಅದು ಅನಿವಾರ್ಯ. ಗೃಹಮಂತ್ರಿ ಸುಶೀಲ ಕುಮಾರ ಶಿಂದೆ ಅವರು ಅಮೆರಿಕದಲ್ಲಿದ್ದರು. ಅವರು ಏನನ್ನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಒಂದು ಸಂದೇಶವನ್ನೂ ಕಳಿಸಲಿಲ್ಲ. ಅದನ್ನು ಯಾರಾದರೂ ಅರ್ಥ ಮಾಡಿಕೊಳ್ಳಬಹುದು.
ಆದರೆ ಅದಾದ ಅನಂತರ, ಅಂತಾರಾಷ್ಟ್ರೀಯ ಸಮ್ಮೇಳನ ಮುಗಿದು, ಅಲ್ಲಿಗೆ ಹೋಗಿದ್ದ ಇತರ ಭಾರತೀಯ ಅಧಿಕಾರಿಗಳು, ಪ್ರತಿನಿಧಿಗಳು, ದೆಹಲಿಗೆ ಹಿಂದಕ್ಕೆ ಬಂದರೂ, ಗೃಹಮಂತ್ರಿ ಬರಲಿಲ್ಲ. ಅಮೆರಿಕದ ಮೇಳ ಮುಗಿದ ಅನಂತರ ಅಲ್ಲಿ ಅವರ ನಾಲ್ಕು ದಿನದ ಖಾಸಗಿ ಪ್ರವಾಸದ ಕಾರ್ಯಕ್ರಮ ಇತ್ತಂತೆ. ಅದನ್ನು ಕೈ ಬಿಟ್ಟು ದೆಹಲಿ, ಬಸ್ತಾರ್, ಜಗದಾಲಪುರಕ್ಕೆ ಬರುವ ಅಗತ್ಯವೇ ಅವರಿಗೆ ಕಂಡುಬರಲಿಲ್ಲ. ಹೇಗಿದ್ದರೂ ರಾಯಪುರದಲ್ಲಿ ರಾಜ್ಯ ಸರ್ಕಾರವಿದೆ. ಪ್ರಧಾನಿ ಮನಮೋಹನ ಸಿಂಗ್ ಅವರೇ ಅಲ್ಲಿಗೆ ವಿಶೇಷ ಪೊಲೀಸ್ ಪಡೆಗಳನ್ನು ಕಳುಹಿಸುವ ಭರವಸೆಯನ್ನೂ ನೀಡಿದ್ದಾರೆ. ಇನ್ನು ಶಿಂದೆ ಅವರು ಅಲ್ಲಿಗೆ ಹೋಗಿ ಮಾಡುವುದಾದರೂ ಏನು?
ನಿಜಕ್ಕೂ ಅದು ಸಹಜವಾದ ಪ್ರಶ್ನೆಯೇ. ಆದರೆ ಭಾರತದ ಗೃಹಮಂತ್ರಿಯ ಸ್ಥಾನ ಸಾಮಾನ್ಯವಾದದ್ದಲ್ಲ. ಆ ಸ್ಥಾನಕ್ಕೆ ತನ್ನದೇ ಆದ ಗೌರವ ಪ್ರತಿಷ್ಠೆ ಇದೆ. ಒಂದು ಕಾಲದಲ್ಲಿ ಸರ್ಕಾರದಲ್ಲಿ ಗೃಹಮಂತ್ರಿಯೇ ನಂಬರ್ ಟೂ.
ಛತ್ತೀಸ್ಘಡದಲ್ಲಿ ನಡೆದಿದ್ದು ಸಾಮಾನ್ಯವಾದ ಘಟನೆ ಏನೂ ಅಲ್ಲ. ಕಳೆದ ಒಂದು ವರ್ಷದಿಂದಲೂ ಗೃಹ ಮಂತ್ರಾಲಯ ಅಲ್ಲಿಗೆ ವಿಶೇಷ ಪೊಲೀಸ್ ಪಡೆಗಳನ್ನು ಕಳುಹಿಸುವ ಭರವಸೆಯನ್ನು ನೀಡುತ್ತಲೇ ಇದೆ. ಅದು ಈಡೇರಿಲ್ಲ. ಅದರ ಜವಾಬ್ದಾರಿಯನ್ನು ಹೊರಬೇಕಾದವರು ಗೃಹಮಂತ್ರಿ. ಅವರೇ ಸ್ಥಳದಲ್ಲಿಲ್ಲ. ಅಮೆರಿಕದಲ್ಲಿ ಎಲ್ಲೋ ಖಾಸಗಿ ಪ್ರವಾಸದಲ್ಲಿದ್ದಾರೆ ಎಂದರೆ ನಮ್ಮ ಗಣರಾಜ್ಯ ವ್ಯವಸ್ಥೆ ತಲುಪಿರುವ ಸ್ಥಿತಿಯನ್ನು ಊಹಿಸಿಕೊಳ್ಳಬಹುದು.
ಇಂತಹ ವಿಚಾರದಲ್ಲಿ ರಾಜಕೀಯ ಮಾಡಬಾರದೆಂದು ಕಾಂಗ್ರೆಸ್- ಬಿಜೆಪಿಗಳು ಬಾಯಲ್ಲಿ ಹೇಳುತ್ತಲೇ, ಮುಖ್ಯಮಂತ್ರಿ ರಮಣ ಸಿಂಗ್ರ ರಾಜಿನಾಮೆಯನ್ನು ಕಾಂಗ್ರೆಸ್ ಕೇಳಿದೆ. ಭದ್ರತಾ ವ್ಯವಸ್ಥೆಯಲ್ಲಿ ಲೋಪವಾಗಿರಬಹುದೆನ್ನುವುದನ್ನು ಮುಖ್ಯಮಂತ್ರಿಯೂ ಒಪ್ಪಿದರೂ, 'ನಕ್ಸಲರ ಸಮಸ್ಯೆ ಕೇವಲ ರಾಜ್ಯದ ಕಾಯಿದೆ ವ್ಯವಸ್ಥೆ ಅಲ್ಲ. ಕೇಂದ್ರದ ವೈಫಲ್ಯವೂ ಇದೆ' ಎಂದಿದ್ದಾರೆ. ಈ ಜಗಳ ಸದ್ಯಕ್ಕೆ ನಿಲ್ಲುವುದಿಲ್ಲ.
ಮುಂದೆ ಖಾಸಗಿ ಪ್ರವಾಸವನ್ನು ಮುಗಿಸಿಕೊಂಡು ಬಂದು, ವಿಷಯವನ್ನು ಸಂಗ್ರಹಿಸಿ, ಗೃಹಮಂತ್ರಿ ಸುಶೀಲ ಕುಮಾರ ಶಿಂದೆ, ಅಧಿಕೃತ ಹೇಳಿಕೆ ನೀಡುವ ವೇಳೆಗೆ ಅದು ತಂಗಳಾಗಿರುತ್ತದೆ. ಗೃಹಮಂತ್ರಿಯಾದವರು ತಮ್ಮ ಜವಾಬ್ದಾರಿ ಇದಕ್ಕಿಂತ ಹೆಚ್ಚೆಂದು ತಿಳಿದಿರಬೇಕಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

