ಸಂಪಾದಕೀಯ

ಮಂಗಳನೆಡೆ ಲಂಘನ

Published On :

ಸೃಷ್ಟಿಯ ರಹಸ್ಯವನ್ನು ಬಗೆದು ನೋಡುವ ವೈಜ್ಞಾನಿಕ ಸಂಶೋಧನೆಗೆ ಕೊನೆ ಎಂಬುದೇ ಇಲ್ಲ. ಭೂಮಿಯ ಮೇಲಿರುವ ಮನುಷ್ಯರಂಥ ಜೀವಿಗಳು ಬೇರೆ ಗ್ರಹಗಳಲ್ಲೂ ಇವೆಯೇ ಎಂಬ ಕುತೂಹಲ ಬಹಳ ಹಿಂದಿನದು. ಸೌರವ್ಯೂಹದ ಆಚೆಗೆ ಅದೆಷ್ಟೋ ದೂರದಲ್ಲಿ ಇಂಥದ್ದೇ ಇನ್ನೊಂದು ಸೂರ್ಯ ಹಾಗೂ ಆತನ ಸುತ್ತಲೂ ಸುತ್ತುವ ಗ್ರಹ ಪರಿವಾರ ಇದೆಯೆಂಬ ಸುದ್ದಿ ಕೆಲವು ದಿನಗಳ ಹಿಂದೆ ಬಂದಿತ್ತು. ಅಮೆರಿಕದವರು ಚಂದ್ರನ ಮೇಲೆ ಕಾಲೂರಿ ಬಂದರೂ ಅಲ್ಲಿ ನೀರಿನ ಮೂಲ ಇತ್ತು ಎಂಬುದನ್ನು ಪತ್ತೆ ಮಾಡುವುದಕ್ಕೆ ಭಾರತದ ಚಂದ್ರಯಾನವೇ ನೆರವಾಯಿತು.
ಈ ಹಿನ್ನೆಲೆಯಲ್ಲಿಯೇ ಭಾರತದ ಮಂಗಳಯಾನವನ್ನು ನಾವು ಗ್ರಹಿಸಬೇಕು. ಅನ್ಯದೇಶಗಳು ಈಗಾಗಲೆ ಮಂಗಳನ ಬಗ್ಗೆ ಅನೇಕ ಸಂಶೋಧನೆಗಳನ್ನು ನಡೆಸಿವೆ. ಅವುಗಳ ಆಚೆಗೂ ಭಾರತೀಯ ಮಂಗಳಯಾನ ಯೋಜನೆ ಏನೋ ಹೊಸದನ್ನು ಸಾಧಿಸಬಲ್ಲುದಾಗಿದೆ.
ನವೆಂಬರ್ 5ಕ್ಕೆ ಒಂದು ವಿಶೇಷ ಮಹತ್ವವಿದೆ. ಐವತ್ತು ವರ್ಷಗಳ ಹಿಂದೆ ಇದೇ ದಿನ ಭಾರತವು ತನ್ನ ಮೊದಲ ರಾಕೆಟ್ ಹಾರಿಸಿತ್ತು. ಇಪ್ಪತ್ತೈದು ವರ್ಷಗಳ ಹಿಂದೆ ಪಿಎಸ್‌ಎಲ್‌ವಿಯನ್ನು  ಇದೇ ದಿನ ಹಾರಿಸಿತ್ತು. ಈಗ ಮಂಗಳನ ಕಕ್ಷೆಗೆ ನೆಗೆತ. ಮಂಗಳ ಗ್ರಹದ ಕಕ್ಷೆಯನ್ನು ತಲುಪುವುದಕ್ಕೇ ಹತ್ತು ತಿಂಗಳುಗಳಷ್ಟು ಸುದೀರ್ಘ ಸಮಯ ಬೇಕು. 450 ಕೋಟಿ ರುಪಾಯಿ ಮೊತ್ತದ ಈ ಯೋಜನೆಯು ಇತರ ರಾಷ್ಟ್ರಗಳು ಮಾಡಿರುವ ವೆಚ್ಚಕ್ಕೆ ಹೋಲಿಸಿದರೆ ಬಹಳ ಕಡಿಮೆ ಎಂದೇ ಹೇಳಬೇಕು. ಭಾರತದ ತಾಂತ್ರಿಕ ಕೌಶಲಕ್ಕೆ ಹಾಗೂ ಸಾಮರ್ಥ್ಯಕ್ಕೆ ಇದೊಂದು ಉದಾಹರಣೆಯಾಗಿದೆ. ಮಂಗಳನ ಮೇಲ್ಮೈ ವಾತಾವರಣ, ಅಲ್ಲಿಯ ಖನಿಜಾಂಶಗಳು, ಜೀವಿಗಳಿರಬಹುದಾದ ಸಾಧ್ಯತೆ, ಮಿಥೇನ್ ಅನಿಲದ ಬಗ್ಗೆ ಸಂಶೋಧನೆಯು ಕೇಂದ್ರೀಕೃತವಾಗಲಿದೆ.
 ಮಂಗಳ ಗ್ರಹದ ಮೇಲೆ ಇರುವ ಇನ್ನೊಂದು  ವಿಶ್ವಾಸ ಹಾಗೂ ಸಂಶೋಧನೆಯ ಸಾಧ್ಯತೆ ಎಂದರೆ ಭವಿಷ್ಯದಲ್ಲಿ ಮನುಷ್ಯನಿಗೆ ಅದು ಆವಾಸ ಸ್ಥಾನವಾಗಬಹುದೆ ಎಂಬುದು. ಇಸ್ರೋದ ಅಧ್ಯಕ್ಷ ಕೆ.ರಾಧಾಕೃಷ್ಣನ್ ಅವರೇ, ಮಂಗಳಯಾನ ಎಂದರೆ ಭವಿಷ್ಯದ ಆವಾಸಸ್ಥಾನದ ಸಂಶೋಧನೆ, ಅನ್ವೇಷಣೆ ಎಂದು ಹೇಳಿರುವುದು ಮಹತ್ವದ್ದು. ಭೂಮಿಗೂ ಮಂಗಳ ಗ್ರಹಕ್ಕೂ ಹಲವು ಸಾಮ್ಯಗಳಿವೆ. ಭೂ ಮೇಲ್ಮೈ ಹಾಗೂ ಮಂಗಳನ ಮೇಲ್ಮೈ ಹೆಚ್ಚೂಕಡಿಮೆ ಒಂದೇ ರೀತಿಯಾಗಿದೆ. ಅಲ್ಲಿಯ ಋತುಚಕ್ರ ಇಲ್ಲಿಯ ಋತುಚಕ್ರಗಳು, ಅಲ್ಲಿಯ ಹಗಲು ರಾತ್ರಿಗಳ ಸಮಯ ಬಹುತೇಕ ಒಂದೇ ರೀತಿ ಇವೆ. ಅಲ್ಲಿ ಏನಾದರೂ ನೀರಿನ ಅಂಶ ಪತ್ತೆಯಾದರೆ ಸೂಕ್ಷ್ಮಾಣುಜೀವಿಗಳೂ ಇದ್ದಿರಬಹುದಾದ ಸಾಧ್ಯತೆಗಳಿವೆ.
ಚಂದ್ರಯಾನವನ್ನು  ಯಶಸ್ವಿಯಾಗಿ ಪೂರ್ಣಗೊಳಿಸಿರುವ ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳಿಗೆ ಮಂಗಳಯಾನ ದೊಡ್ಡ ಸವಾಲೇನೂ ಆಗಲಿಲ್ಲ. ಚಂದ್ರಯಾನದ ಮುಂದುವರಿಕೆಯಂತೆಯೇ ಇದು. ಭಾರತದಂಥ ಬಡ ದೇಶವು ಇಂಥ ಸಾಹಸಗಳನ್ನು ಪ್ರದರ್ಶಿಸಬೇಕಿತ್ತೆ ಎಂಬ ಪ್ರಶ್ನೆಗಳನ್ನು ಕೆಲವರು ಕೇಳಬಹುದು. ಜಗತ್ತಿನಲ್ಲಿ ಭಾರತೀಯರು ಹೆಮ್ಮೆಯಿಂದ ತಲೆ ಎತ್ತಿ ನಡೆಯುವಂತೆ ಮಾಡಿದ ಈ ಸಾಹಸದ ಮುಂದೆ ಮಾಡಿರುವ ವೆಚ್ಚವು ನಗಣ್ಯ.
ಮಂಗಳಯಾನದಿಂದ ವಿಶ್ವದ ವೈಜ್ಞಾನಿಕ ಕ್ಷೇತ್ರದಲ್ಲಿ ಭಾರತದ ಗೌರವ ಹೆಚ್ಚಿದೆ. ಮಂಗಳ ಯಾನದಲ್ಲಿ ಚೀನಾ ಮತ್ತು ಜಪಾನ್ ದೇಶಗಳು ವಿಫಲವಾಗಿವೆ. ಅಮೆರಿಕ, ರಶಿಯಾ ಮತ್ತು ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ಬಳಿಕ ನಾಲ್ಕನೆಯದೆಂಬ ಹೆಗ್ಗಳಿಕೆ ನಮ್ಮದು. ಇಲ್ಲಿ ನಾವು ಗಳಿಸಿದ ಜ್ಞಾನವು ಸೇನೆ ಮತ್ತಿತರ ಕ್ಷೇತ್ರಗಳಲ್ಲಿಯೂ ಪ್ರಯೋಜನಕ್ಕೆ ಬರಲಿದೆ. ಉಪಗ್ರಹ ಹೊತ್ತ ರಾಕೆಟ್ ಉಡಾವಣೆ ಯಶಸ್ವಿಯಾದ ಈ ಹಂತದಲ್ಲಿ ವಿಜ್ಞಾನಿಗಳ ತಂಡವನ್ನು ಅಭಿನಂದಿಸಬೇಕಾದುದು ದೇಶದ ಪ್ರತಿಯೊಬ್ಬರ ಕರ್ತವ್ಯ. ಈ ಮಂಗಳ ಯಾನದ ಸಂಪೂರ್ಣ ಯೋಜನೆ ಯಶಸ್ವಿಯಾಗಲಿ ಎಂದು ಹಾರೈಸೋಣ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.