ಸಂಪಾದಕೀಯ

ಘಜನಿ ಮಹಮ್ಮದನ ಗರ್ವಭಂಗ ಮಾಡಿದ ಫಕೀರ

Published On :

10ನೇ ಶತಮಾನದಲ್ಲಿದ್ದ ಘಜನಿ ಮಹಮದ್ ಭಾರತದ ಮೇಲಿನ ದಂಡಯಾತ್ರೆಗಳಿಂದಾಗಿ ಪ್ರಸಿದ್ಧನಾಗಿದ್ದಾನೆ. ದ್ವಾರಕಾ, ಸೋಮನಾಥ, ಥಾಣೇಶ್ವರ್, ಕನೌಜ್, ಗ್ವಾಲಿಯರ್. ಉಜ್ಜೈನಿ ಮುಂತಾದ ಪ್ರದೇಶಗಳ ಮೇಲೆ ದಾಳಿ ಮಾಡಿ ಅಪಾರ ಸಂಪತ್ತನ್ನು ಕೊಳ್ಳೆಹೊಡೆದು ತನ್ನ ದೇಶಕ್ಕೆ ತೆಗೆದುಕೊಂಡು ಹೋದ ಘಟನೆ ಇತಿಹಾಸದಲ್ಲಿ ದಾಖಲಾಗಿದೆ. ಅತ್ಯಂತ ಪ್ರಬಲನಾಗಿದ್ದ ಮಹಮ್ಮದನನ್ನು ಆತನನ್ನು ನೆನದರೇ ಬೆಚ್ಚಿಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಮ್ಮೆ ಘಜನಿ ಮಹಮ್ಮದನು ಸಾಮರ್ಖಂಡದ ಸಮೀಪದ ಒಂದು ಹಳ್ಳಿಯಲ್ಲಿದ್ದ ಒಬ್ಬ ಸುಪ್ರಸಿದ್ಧ, ಧರ್ಮಭೀರುವಾಗಿದ್ದ ಫಕೀರನನ್ನು ಭೇಟಿ ಮಾಡಲಿಚ್ಛಿಸಿದ. ಅದರಂತೆ ರಾಜದೂತರು ಫಕೀರನ ಬಳಿ ಬಂದು ಸುಲ್ತಾನನ ಆಹ್ವಾನವನ್ನು ತಿಳಿಸಿ ಅರಮನೆಗೆ ಬರಬೇಕೆಂದು ತಿಳಿಸಿದರು. ಅದಕ್ಕೆ ಫಕೀರನು ನಗುತ್ತಾ, ತನಗೆ ಆ ದೊಡ್ಡ ದೊರೆಯ ಆಜ್ಞೆಗಳನ್ನು ಪಾಲಿಸುವುದಕ್ಕೇ ಸಮಯವಿಲ್ಲ, ಇನ್ನು ಈ ಸಣ್ಣಪುಟ್ಟ ದೊರೆಗಳ ಆಜ್ಞೆಗಳನ್ನು ಪಾಲಿಸಲು ಸಮಯವೆಲ್ಲಿದೆ ಎಂದು ಹೇಳಿ ಅವರನ್ನು ಹಾಗೆಯೇ ಕಳುಹಿಸಿದ. ಅವನು ಸಾಮಾನ್ಯನಾದ ಫಕೀರನಲ್ಲವೆಂದು ಮನವರಿಕೆ ಮಾಡಿಕೊಂಡ ಘಜನಿಯು ತಾನೇ ಸ್ವತಃ ಫಕೀರನನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಯೋಗ್ಯವಾದ ಗೌರವವನ್ನು ಸಲ್ಲಿಸಿ, ತನಗೇನಾದರೂ ಉಪದೇಶಿಸಬೇಕೆಂದು ಮನವಿ ಮಾಡಿದ. ಆಗ ಫಕೀರ ಹೇಳಿದ್ದಿಷ್ಟೆ- ಮಿತವಾಗಿ ತಿನ್ನು, ಮಸೀದಿಯಲ್ಲಿ ಪ್ರಾರ್ಥಿಸು, ಬಡವರಿಗೆ ದಾನ ಮಾಡು ಮತ್ತು ಪ್ರಜೆಗಳನ್ನು ಪ್ರೀತಿಯಿಂದ ಕಾಣು. ಸಂತುಷ್ಟನಾದ ದೊರೆ ಫಕೀರನಿಗೆ ಒಂದು ಚೀಲದ ತುಂಬಾ ಚಿನ್ನದ ನಾಣ್ಯಗಳನ್ನಿಟ್ಟು ಒಪ್ಪಿಸಿಕೊಳ್ಳಲು ಅವನು ಪ್ರಾರ್ಥಿಸಿದ. ಅದರಲ್ಲಿ ತಾನೆಷ್ಟು ಶ್ರೀಮಂತ ಮತ್ತು ಉದಾರಿ ಎಂಬುದನ್ನು ಮನವರಿಕೆ ಮಾಡಿಕೊಡುವ ಇರಾದೆಯೂ ಇತ್ತು. ಆಗ ಫಕೀರನು ಅದನ್ನು ಕಣ್ಣೆತ್ತಿಯೂ ನೋಡದೆ, ತನ್ನ ಭಿಕ್ಷಾಪಾತ್ರೆಯಲ್ಲಿದ್ದ ಒಂದು ಒಣಕಲು ರೊಟ್ಟಿಯ ಚೂರನ್ನು ರಾಜನಿಗೆ ನೀಡಿ ತಿನ್ನಲು ಕೇಳಿಕೊಂಡನು. ಸುಲ್ತಾನನು ಅದನ್ನು ತನ್ನ ಬಾಯಿಗೆ ಹಾಕಿಕೊಂಡು ಅಗಿಯಲು ಪ್ರಯತ್ನಿಸಿದ. ಆದರೆ ಆ ಒಣಕಲು ರೊಟ್ಟಿಯನ್ನು ಅಗಿದು ತಿನ್ನಲಾಗಲೇ ಇಲ್ಲ. ಅದು ಗಂಟಲಲ್ಲಿ ಸಿಕ್ಕಿಕೊಂಡು ಫಜೀತಿಯಾಯಿತು. ಆಗ ಫಕೀರ ಹೇಳಿದ, "ಈ ಒಣ ರೊಟ್ಟಿಯನ್ನು ಎಷ್ಟು ಅಗೆದರೂ ಅದು ಸಾಧ್ಯವಾಗದೆ ಹೇಗೆ ನಿನ್ನ ಗಂಟಲಲ್ಲಿ ಸಿಕ್ಕಿಕೊಂಡಿತೋ ಹಾಗೆಯೇ ಈ ಹಣ ನನ್ನ ಗಂಟಲಲ್ಲಿ ಸಿಕ್ಕಿ ಹಾಕಿಕೊಳ್ಳುತ್ತದೆ. ಆದ್ದರಿಂದ ಅದನ್ನು ತೆಗೆದುಕೊಂಡು ಹೋಗಿ ಬಡವರಿಗೆ ಹಂಚು". ಹಣದ ಮದದಲ್ಲಿದ್ದ ಘಜನಿ ಮಹಮ್ಮದನಿಗೆ ಗರ್ವಭಂಗವಾಯಿತಲ್ಲದೆ, ತಾನು ಗಳಿಸಿದ ಹಣವನ್ನು ಹೇಗೆ ವೆಚ್ಚಮಾಡಬೇಕೆಂಬ ಪರಿಜ್ಞಾನ ಉಂಟಾಯಿತು.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.