ಸಂಪಾದಕೀಯ

ಈ ಅನುಭವ ನಿಜಕ್ಕೂ ದೊಡ್ಡದು

Published On :

ಡಿವಿಜಿಯವರದ್ದು ತೇಜೋಮಯ ವ್ಯಕ್ತಿತ್ವ. ಸರಳತೆ, ಸಜ್ಜನಿಕೆ, ಸ್ನೇಹಭಾವ, ವಿದ್ವತ್ತು ಅವರನ್ನು ಉತ್ತುಂಗ ಶಿಖರಕ್ಕೆ ಒಯ್ದಿತ್ತು. ಯಾವುದೇ ವ್ಯಕ್ತಿ ಅವರ ಸಂಪರ್ಕಕ್ಕೆ ಬಂದರೂ ಅವರ ಮನಸ್ಸನ್ನು ಹೊಕ್ಕು ಅವನ ವ್ಯಕ್ತಿತ್ವ ಜಾಲಾಡುವ ಅವರ ಮನೋಧರ್ಮವನ್ನು ಎಲ್ಲರೂ ಇಷ್ಟಪಡುತ್ತಿದ್ದರು. ಅಂತಹ ಒಂದು ಪ್ರಸಂಗ ಇಲ್ಲಿದೆ. ಡಿ.ವಿ.ಜಿಯವರಿಗೆ ತಮ್ಮ ಮನೆಯನ್ನು ದುರಸ್ತಿ ಮಾಡುವ ಸಂದರ್ಭದಲ್ಲಿ "ಶಿವಪಿಚ್ಚೈ ಮೊದಲಿಯಾರ್‌" ಎಂಬ ವಯಸ್ಸಾದ ಗಾರೆ ಕೆಲಸದವನ ಪರಿಚಯವಾಯಿತು. ಆತನ ವೃತ್ತಿ ಗಾರೆ ಕೆಲಸವಾದರೂ ಮನೋವೃತ್ತಿ ಪರಿವ್ರಾಜಕನದು. ಅವನಲ್ಲಿದ್ದ ಆಸ್ತಿಯೆಂದರೆ, ಮೈಮೇಲಿದ್ದ ಒಂದು ಜೊತೆ ಬಟ್ಟೆ, ಜೇಬಿನಲ್ಲಿ ಹತ್ತೋ ಹದಿನೈದೋ ರೂಪಾಯಿ, ಕರಣಿ, ತೂಕದ ಗುಂಡು ಮುಂತಾದ ಗಾರೆ ಕೆಲಸಕ್ಕೆ ಬೇಕಾದ ಪರಿಕರಗಳು ಮಾತ್ರ. ಒಮ್ಮೆ ಕೂಲಿ ಮಾಡಿ ಬಂದ ಹಣವನ್ನಿಟ್ಟುಕೊಂಡು ರೈಲಿನಲ್ಲೋ, ಬಸ್ಸಿನಲ್ಲೋ ಕುಳಿತು ಅದು ಒಯ್ದಲ್ಲಿಗೆ ಹೋಗುವುದು, ಅಲ್ಲಿ ಕೆಲಸ ದೊರೆತರೆ ಒಂದೆರಡು ದಿನ ತಂಗುವುದು, ಅಲ್ಲಿಯ ಗುಡಿಗೋಪುರಗಳ ವೀಕ್ಷಣೆ ಮಾಡಿ ಮತ್ತೆ ಅಲ್ಲಿಂದ ಇನ್ನೊಂದೆಡೆ ತೆರಳುವುದು ಅವನಿಗೆ ಅಭ್ಯಾಸವಾಗಿತ್ತು. ಜೇಬು ಖಾಲಿಯಾದಾಗ ಮಾತ್ರ ಕೂಲಿ ಕೆಲಸ ಮಾಡತ್ತಿದ್ದ. ಪ್ರಯಾಣದ ಖರ್ಚಿಗಾಗುವಷ್ಟು ಹಣ ಕೂಡಿದ ಕೂಡಲೇ ಮುಂದಿನ ಊರಿಗೆ ಪಯಣ. ಹೀಗೆ ಭಾರತದ ಬಹುತೇಕ ಎಲ್ಲ ತೀರ್ಥಕ್ಷೇತ್ರಗಳನ್ನೂ ಸಂದರ್ಶಿಸಿದ್ದ. ಇಂಥ ವ್ಯಕ್ತಿ ಡಿ.ವಿಜಿ.ಯವರ ಮನೆಯ ರಿಪೇರಿಗೆ ಬಂದಿದ್ದ. ಶಿವಪಿಚ್ಚೈ ಮೊದಲಿಯಾರ್‌ಗೆ ಆಧ್ಯಾತ್ಮ ವಿದ್ಯೆಯ ಉಪದೇಶವಾಗಿತ್ತು. ಹಾಗಾಗೇ ಆತನಿಗೆ  ಹಣ ಸಂಗ್ರಹ ಮಾಡಬೇಕೆಂಬ ಇಚ್ಛೆಯಿರಲಿಲ್ಲ. ಇಂತಹ ಅಪೂರ್ವ ವ್ಯಕ್ತಿ ತನ್ನ ಕೆಲಸ ಮುಗಿಸಿ ಹೊರಟಾಗ ಡಿವಿಜಿ ಆತನನ್ನು "ಪುನಃ ಭೇಟಿ ಮಾಡುವುದು ಯಾವಾಗ?" ಎಂದು ಕೇಳಿದರು. ಅದಕ್ಕೆ ಆತ, "ಸ್ವಾಮಿ ಏರ್ಪಾಟು ಮಾಡಿದಾಗ" ಎಂದು ಹೇಳಿದ. "ಪ್ರಯಾಣ ಎತ್ತ ಕಡೆಗೆ?" ಎಂಬ ಪ್ರಶ್ನೆಗೆ, "ದೇವರು ಕರೆಸಿಕೊಂಡೆಡೆಗೆ" ಎಂದ! ಆತನ ಮಾತನ್ನು ನೆನೆಯುತ್ತಾ ಡಿವಿಜಿಯವರು ಈ ಅನುಭವ, ಪುಸ್ತಕಗಳಿಂದ ದೊರೆತ ಅನುಭವಕ್ಕಿಂತ ದೊಡ್ಡದು ಎನ್ನುತ್ತಿದ್ದರು.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.