ಸಂಪಾದಕೀಯ

ಇಂಗ್ಲಿಷ್ ಭಾಷೆ ಇಷ್ಟು ಸೊಗಸೆಂದು ನನಗೆ ತಿಳಿದಿರಲಿಲ್ಲ

Published On :

ರೈಟ್ ಆನರಬಲ್ ಶ್ರೀನಿವಾಸ ಶಾಸ್ತ್ರಿಗಳು ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ, ನಂತರದ ದಿನಗಳಲ್ಲಿ ರಾಜಕಾರಣಿಯಾಗಿ, ಉತ್ತಮ ಆಡಳಿತಗಾರರಾಗಿ, ಅದ್ಭುತ ವಾಗ್ಮಿಗಳಾಗಿ, ಗಾಂಧಿ ಮತ್ತು ಗೋಖಲೆಯವರ ಅನುಯಾಯಿಯಾಗಿ ಹೆಸರು ಗಳಿಸಿದ್ದರು. ಆಂಗ್ಲ ಭಾಷಾ ಜ್ಞಾನದಲ್ಲಿ ಅವರನ್ನು ಸರಿಗಟ್ಟುವವರೇ ಇರಲಿಲ್ಲ. ಅವರ ಇಂಗ್ಲಿಷ್ ಭಾಷಣ ಕೇಳುಗರನ್ನು ಮೋಡಿ ಮಾಡುತ್ತಿತ್ತು. ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಸದಸ್ಯರಾಗಲು ತಮ್ಮ ಪ್ರೀತಿಯ ವೃತ್ತಿಗೆ ತಿಲಾಂಜಲಿ ನೀಡಿದರು. ಅವರು ಅಣ್ಣಾಮಲೈ ವಿಶ್ವ ವಿದ್ಯಾನಿಲಯದ ಉಪಕುಲಪತಿಗಳಾಗಿದ್ದಾಗ ತಾವು ಪಡೆಯುತ್ತಿದ್ದ ಸಂಭಾವನೆಯ ಬಹುಭಾಗವನ್ನು ಬಡ ವಿದ್ಯಾರ್ಥಿಗಳಿಗೆ ತಮ್ಮ ಹಾಸ್ಟೆಲ್ ಶುಲ್ಕ ಪಾವತಿಸಲು ಮತ್ತು ವಿದ್ಯಾರ್ಥಿವೇತನ ನೀಡುವುದಕ್ಕೆ ವಿನಿಯೋಗಿಸುತ್ತಿದ್ದರು. ಏಕೆಂದರೆ ಅವರು ತಮ್ಮ ಬಾಲ್ಯದಲ್ಲಿ ಕಡು ಬಡತನದಲ್ಲಿ, ಬೀದಿ ದೀಪದ ಕೆಳಗೆ ಓದಿದ ಅನುಭವ ಹೀಗೆ ಮಾಡಿತ್ತು. ಒಬ್ಬ ಹರಿಜನ ವಿದ್ಯಾರ್ಥಿಯ ಓದಿಗೆ ತೊಂದರೆಯಾದಾಗ ಅವನನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು ಅವನಿಗೆ ಪದವಿ ಪರೀಕ್ಷೆಯವರೆಗೂ ಓದಿಸಿದ ವಿಶಾಲ ಮನಸ್ಸಿನವರಾಗಿದ್ದರು. ಮದ್ರಾಸು ವಿಧಾನ ಪರಿಷತ್ತಿನ ಸದಸ್ಯರಾಗಿ, ಪ್ರೀವಿ ಕೌನ್ಸಿಲ್ಲಿನ ಸದಸ್ಯರಾಗಿ, ದಕ್ಷಿಣ ಆಫ್ರಿಕಾದಲ್ಲಿ ಭಾರತದ ಏಜೆಂಟ್ ಆಗಿ ಸಹ ಸೇವೆ ಸಲ್ಲಿಸಿದರು. ಅವರಿಗೆ ಬ್ರಿಟಿಷ್ ಸರ್ಕಾರ 'ರೈಟ್ ಆನರಬಲ್‌' ಎಂಬ ಪ್ರಶಸ್ತಿ ನೀಡಿ ಗೌರವಿಸಿತು. ಇಂಗ್ಲೆಂಡಿನಲ್ಲೊಮ್ಮೆ ಶ್ರೀನಿವಾಸ ಶಾಸ್ತ್ರಿಗಳ ಭಾಷಣ ಏರ್ಪಡಿಸಲಾಗಿತ್ತು. ಕಿಕ್ಕಿರಿದು ನೆರೆದಿದ್ದ ಸಭಾಂಗಣದಲ್ಲಿ ಹೆಚ್ಚಿನವರು ಆಂಗ್ಲರು. ಅಂದು ಲಾರ್ಡ್‌ಮೇಯರ್‌ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀನಿವಾಸ ಶಾಸ್ತ್ರಿಗಳು ಸುಮಾರು ಒಂದೂವರೆ ಗಂಟೆಗಳ ಕಾಲ ಸೊಗಸಾಗಿ ಮಾತನಾಡಿದರು. ಅವರ ಭಾಷಣದ ಮೋಡಿ ಹೇಗಿತ್ತೆಂದರೆ ಇಡೀ ಸಭಾಂಗಣದಲ್ಲಿ ಜನ ತನ್ಮಯತೆಯಿಂದ ಅವರ ಭಾಷಣವನ್ನು ಆಲಿಸುತ್ತಿದ್ದರು. ಅವರೆಲ್ಲರಿಗೆ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಕೊನೆಗೆ ಶಾಸ್ತ್ರಿಗಳು ಭಾಷಣ ಮುಕ್ತಾಯ ಮಾಡಿ ಕುಳಿತಾಗ ಜನ ಮೆಚ್ಚುಗೆಯಿಂದ ತಟ್ಟಿದ ಚಪ್ಪಾಳೆ ನಿಲ್ಲಲು ಕೆಲವು ನಿಮಿಷಗಳೇ ಬೇಕಾದವು. ಆಗ ಲಾರ್ಡ್ ಮೇಯರ್ ಎದ್ದುನಿಂತು, “Gentleman, excuse me I did not know that my language is so great”(ನನ್ನ ಭಾಷೆ ಇಷ್ಟು ಅದ್ಭುತವಾಗಿದೆಯೆಂದು ನನಗೆ ಗೊತ್ತಿರಲಿಲ್ಲ) ಎಂದು ಉದ್ಗರಿಸಿದರು!

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.