ತಪ್ಪು ಮಾಡಿದಾಗ ತಿದ್ದುವುದು ನನ್ನ ಕರ್ತವ್ಯ
ಎಚ್.ಎಸ್.ದೊರೆಸ್ವಾಮಿಯವರು ಮಹಾತ್ಮ ಗಾಂಧಿಯವರಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಮ್ಮನ್ನು ತೊಡಗಿಸಿಕೊಂಡವರು. ಬ್ರಿಟಿಷರ ದಬ್ಬಾಳಿಕೆಯನ್ನು ಖಂಡಿಸಿ ಸೆರೆಮನೆವಾಸವನ್ನೂ ಅನುಭವಿಸಿದರು. ತುರ್ತು ಪರಿಸ್ಥಿತಿಯ ಕಾಲದಲ್ಲಿ ಅವರನ್ನು ಬಂಧಿಸಿ ಜೈಲಿನಲ್ಲಿಡಲಾಗಿತ್ತು. ಏಕೀಕರಣ ಚಳವಳಿ, ಭೂದಾನ ಚಳವಳಿ, ಕೈಗಾ ಅಣುಸ್ಥಾವರದ ವಿರುದ್ಧ ನಡೆದ ಚಳವಳಿಯಲ್ಲಿ ಸಕ್ರಿಯವಾಗಿ ಅವರು ಪಾಲ್ಗೊಂಡಿದ್ದರು. ಇಂದಿಗೂ ಅದೇ ಹೋರಾಟದ ಮನೋಭಾವವನ್ನು ಉಳಿಸಿಕೊಂಡು ತಮ್ಮ ಇಳಿವಯಸ್ಸಿನಲ್ಲಿಯೂ ಅನ್ಯಾಯ ಕಂಡಾಗಲೆಲ್ಲ ಸರ್ಕಾರದ ಕಿವಿಹಿಂಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಯಾವುದೇ ಅಧಿಕಾರಲಾಲಸೆಯಿಲ್ಲದೆ, ಸರಳ ಜೀವನವನ್ನು ಅನುಸರಿಸಿ ಬಾಳುತ್ತಿರುವ ಬೆರಳೆಣಿಕೆಯ ಗಾಂಧೀವಾದಿಗಳಲ್ಲಿ ಒಬ್ಬರು ದೊರೆಸ್ವಾಮಿಯವರು.
ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ವಿಧಾನಪರಿಷತ್ತಿನ ಸದಸ್ಯರನ್ನಾಗಿ ಮಾಡಬೇಕೆಂಬ ಕೂಗು ಎದ್ದಿತ್ತು. ದೊರೆಸ್ವಾಮಿಯವರು ಮೈಸೂರು ಸಂಸ್ಥಾನದ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದಾಗ ಕೆಲವು ಸಂಘದ ಸದಸ್ಯರು ಈ ಬಗ್ಗೆ ಮುಖ್ಯಮಂತ್ರಿಯವರಲ್ಲಿ ಮನವಿಯನ್ನೂ ಮಾಡಿದ್ದರು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೆಂಗಲ್ಲರು ತಮ್ಮನ್ನು ಭೇಟಿಮಾಡಲು ದೊರೆಸ್ವಾಮಿಯವರಿಗೆ ಕರೆ ನೀಡಿದರು. ಅದರಂತೆ ಒಂದು ದಿನ ದೊರೆಸ್ವಾಮಿಯವರು ಕೆಂಗಲ್ಲರನ್ನು ಭೇಟಿ ಮಾಡಿದಾಗ ಅವರ ಯೋಗಕ್ಷೇವುವನ್ನು ವಿಚಾರಿಸಿ, ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ನಾಮಕರಣ ಮಾಡಿದರೆ ಕೆಂಗಲ್ಲರಿಗೆ ವಿಧೇಯರಾಗಿರಬೇಕೆಂದೂ, ಅವರಿಗೆ ಎಲ್ಲ ರೀತಿಯ ಬೆಂಬಲ ನೀಡಬೇಕೆಂದೂ ಶರತ್ತು ವಿಧಿಸಿದರು. ಅದಕ್ಕೆ ದೊರೆಸ್ವಾಮಿಯವರು 'ತಪ್ಪು ಮಾಡಿದಾಗ ಬಹಿರಂಗವಾಗಿ ಅಲ್ಲವಾದರೂ, ಕಿವಿಯಲ್ಲಾದರೂ ನಡವಳಿಕೆ ಸರಿಯಿಲ್ಲವೆಂದು ಹೇಳಬೇಕಲ್ಲವೆ?' ಎಂದು ಕೇಳಿದರು. ಅದಕ್ಕೆ ಹನುಮಂತಯ್ಯನವರು ಹಾಗೇನೂ ಮಾಡದೆ, ತಾವು ಏನು ನಿರ್ಧಾರ ತೆಗೆದುಕೊಂಡರೂ ಸಮರ್ಥಿಸಬೇಕೆಂದೂ, ಯಾವುದಕ್ಕೂ ವಿರೋಧಿಸಬಾರದೆಂದೂ ಖಡಾಖಂಡಿತವಾಗಿ ಹೇಳಿದರು. ಇದು ದೊರೆಸ್ವಾಮಿಯವರ ಮನಸ್ಸಾಕ್ಷಿಗೆ ವಿರೋಧವಾದ್ದರಿಂದ ಏನೂ ಹೇಳದೆ ನಮಸ್ಕರಿಸಿ ಅಲ್ಲಿಂದ ಹೊರಟು ಬಂದರು. ಮುಂದೆ ಅವರನ್ನೆಂದೂ ಕೆಂಗಲ್ಲರು ವಿಧಾನಪರಿಷತ್ತಿಗೆ ನಾಮಕರಣ ಮಾಡಲಿಲ್ಲ. ಇವರೂ ಕೇಳಲಿಲ್ಲ. 1978ರಲ್ಲಿ ದೊರೆಸ್ವಾಮಿಯವರ ಅರವತ್ತನೇ ಹುಟ್ಟು ಹಬ್ಬದ ಸಮಾರಂಭ ಏರ್ಪಡಿಸಿದಾಗ, ಕೆಂಗಲ್ಲರು ದೊರೆಸ್ವಾಮಿಯವರಿಗೆ ಖಾದಿ ವಸ್ತ್ರವನ್ನು ಕಾಣಿಕೆಯಾಗಿ ನೀಡಿ, ತಮ್ಮೊಡನೆ ಕೂಡಿ ಕೆಲಸ ಮಾಡಿಕೊಂಡು ಬಂದಿದ್ದರೆ, ತಾನು ಇನ್ನೂ ಹೆಚ್ಚಿನ ಕಾರ್ಯಸಾಧನೆ ಮಾಡಲು ಸಾಧ್ಯವಿತ್ತು ಎಂದು ತಿಳಿಸಿದರು. ಇದು ದೊರೆಸ್ವಾಮಿಯವರ ನಿಷ್ಕಲ್ಮಶ ಭಾವನೆಯನ್ನೂ, ಅಧಿಕಾರಕ್ಕಾಗಿ ಆಸೆ ಪಡದ ಮನಸ್ಥಿತಿಯನ್ನೂ ಸೂಚಿಸುತ್ತದೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

