ಸಿದ್ದಮ್ಮನ ದೇಶಾಭಿಮಾನ
ಚಿತ್ರದುರ್ಗದ ಓಬವ್ವ ಹೇಗೆ ತನ್ನ ಸಮಯಪ್ರಜ್ಞೆಯಿಂದ ಕೋಟೆಯನ್ನು ಕಾಪಾಡಿದಳು ಮತ್ತು ಹುತಾತ್ಮಳಾದಳು ಎಂಬ ಕಥೆ ನಮಗೆ ಗೊತ್ತು. ಅದೇ ರೀತಿ ಮತ್ತೊಬ್ಬ ವೀರ ಮಹಿಳೆ ನಮ್ಮ ನಾಡಿನ ಇತಿಹಾಸದಲ್ಲಿ ಬಂದು ಹೋಗಿದ್ದಾಳೆ. ಬಿದನೂರಿನ ಶಿವಪ್ಪನಾಯಕನ ಕಾಲದಲ್ಲಿ ಲೋಕಯ್ಯನಾಯಕನೆಂಬ ಕಿಲ್ಲೇದಾರನಿದ್ದನು. ಅವನು ಶಿವಪ್ಪನಾಯಕನ ನೆಚ್ಚಿನ ಭಟನಾಗಿ, ಕೋಟೆಯ ಕಾವಲುಗಾರನಾಗಿ, ಸೇವೆ ಸಲ್ಲಿಸಿದ ವೀರ ಕನ್ನಡಿಗನಾಗಿದ್ದನು. ದೀಪಾವಳಿಯ ದಿನವದು. ಎಲ್ಲರೂ ಸಂತೋಷದಿಂದ ಮಡದಿ ಮಕ್ಕಳೊಡನೆ ಆಚರಣೆಯಲ್ಲಿ ತೊಡಗಿದ್ದರು.
ಹಬ್ಬದ ಸಡಗರವೆಲ್ಲ ಮುಗಿದು ಎಲ್ಲರೂ ಸಂತೋಷದಿಂದ ವಿಶ್ರಾಂತಿ ತೆಗೆದುಕೊಳ್ಳುವಾಗ ಮಧ್ಯರಾತ್ರಿ ಕೋಟೆಯ ಬತೇರಿಯ ಕಡೆಯಿಂದ ರಣಕಹಳೆಯ ಸದ್ದು ಮೊಳಗಿತು. ಇದು ಅಪಾಯದ ಸೂಚನೆಯಾಗಿದ್ದು, ಎಲ್ಲ ಸೈನಿಕರೂ ಯುದ್ಧ ಸಿದ್ಧತೆಗೆ ತೊಡಗಿದರು. ಏಕೆಂದರೆ, ಕೋಟೆಯ ಆಗ್ನೇಯ ದಿಕ್ಕಿನಿಂದ ಮಲೆಯಾಳಿ ಸೇನೆ ಪಡೋದಿಯರಸನ ನೇತೃತ್ವದಲ್ಲಿ ಬಿದನೂರಿನ ಮೇಲೆ ದಾಳಿ ಮಾಡಲು ಮುನ್ನುಗ್ಗುತ್ತಿತ್ತು. ಲೋಕಯ್ಯ ನಾಯಕನು ಕೋಟೆಯ ಬಾಗಿಲುಗಳನ್ನು ಭದ್ರಪಡಿಸಿ, ಕಾವಲಿಗೆ ದೊಡ್ಡ ಸೈನ್ಯವನ್ನು ನೇಮಿಸಿ, ಶತ್ರು ಸೈನಿಕರ ಮೇಲೆ ಪ್ರತಿದಾಳಿ ಮಾಡಿದನು. ಶತ್ರು ಸೈನಿಕರನ್ನು ಚೆಂಡಾಡಿ, ಹಿಮ್ಮೆಟ್ಟಿಸಿದನು. ಯುದ್ಧ ಮೂರುದಿನಗಳ ಕಾಲ ನಡೆದು ಎರಡೂ ಕಡೆಯೂ ಸಾಕಷ್ಟು ಸಾವುನೋವುಗಳಾದವು. ಮೂರನೆಯ ದಿನ ನಡೆದ ಭಯಂಕರ ಯುದ್ಧದಲ್ಲಿ ಲೋಕನಾಯಕನು ವೀರಸ್ವರ್ಗವನ್ನು ಪಡೆದನು. ಇತ್ತ ಲೋಕನಾಯಕನ ಪತ್ನಿ ಸಿದ್ದಮ್ಮ ಯುದ್ಧನಡೆದ ಮೂರೂ ದಿನವೂ ಪತಿಯ ಶ್ರೇಯಸ್ಸಿಗಾಗಿ ದೇವರ ಮುಂದೆ ಕುಳಿತು ಪ್ರಾರ್ಥಿಸುತ್ತಿದ್ದಳು. ಒಂದು ಕರಾಳ ರಾತ್ರಿ ಶತ್ರು ಸೈನಿಕರು ಕೋಟೆಯ ಸುರಂಗ ಮಾರ್ಗವನ್ನು ಕಂಡುಹಿಡಿದು ಅದರೊಳಗೆ ನುಸುಳಿ ಬರುವುದನ್ನು ನೋಡಿ ಒಂದು ದೊಡ್ಡ ಕಡಾಯಿಯಲ್ಲಿ ಎಣ್ಣೆಯನ್ನು ಕುದಿಸಿ ಅವರ ಮೇಲೆ ಸುರಿಯತೊಡಗಿದಳು. ಇದರಿಂದ ಅನೇಕ ಸೈನಿಕರು ತೀವ್ರ ಗಾಯಗೊಂಡರು, ಕೆಲವರು ಅಸುನೀಗಿದರು. ಮತ್ತೆ ಕೆಲವರು ಪಲಾಯನ ಮಾಡಿದರು. ಆದರೆ ಎಷ್ಟುಕಾಲ ಹೀಗೆ ಮಾಡಲು ಸಾಧ್ಯ? ಕೊನೆಗೊಮ್ಮೆ ಹಿಂದಿನಿಂದ ಬಂದ ಶತ್ರು ಸೈನಿಕನೋರ್ವನು ಸಿದ್ದಮ್ಮಳನ್ನು ಅದೇ ಎಣ್ಣೆಯ ಕೊಪ್ಪರಿಗೆಯಲ್ಲಿ ಮುಳುಗಿಸಿಬಿಟ್ಟನು. ಸಿದ್ದಮ್ಮ ವೀರಸ್ವರ್ಗ ಸೇರಿದಳು. ಹೀಗೆ ದೇಶಸೇವೆಗೆ ಪ್ರಾಣ ಅರ್ಪಿಸಿದ ಲೋಕನಾಯಕ ಮತ್ತು ಸಿದ್ದಮ್ಮನ ಪಾರ್ಥೀವ ಶರೀರವನ್ನು ಮಾಸ್ತಿಗುಡ್ಡೆ ಎಂಬಲ್ಲಿ ಸಮಾಧಿ ಮಾಡಿ, ಅಲ್ಲಿ ಮಾಸ್ತಿ ಕಲ್ಲು ಮತ್ತು ವೀರಗಲ್ಲುಗಳನ್ನು ಶಿವಪ್ಪನಾಯಕ ನೆಡಿಸಿ ಗೌರವ ಸಲ್ಲಿಸಿದನು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

