ಸಂಪಾದಕೀಯ

ಈ ಗೃಹಸ್ಥ ಕಾರಂತರ ಸ್ನೇಹಿತ!

Published On :

ಕನ್ನಡಕ್ಕೆ ಮೂರನೆಯ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕಾರಂತರ ಸಾಧನೆಗಳ ಕುರಿತು ಮಾತನಾಡುವುದು ಕಷ್ಟ. ಏಕೆಂದರೆ ಅವರ ಆಸಕ್ತಿಗಳು ಹಲವಾರು. ಚಿತ್ರಕಲೆ, ಸಂಗೀತ, ಸಿನಿಮಾ, ಯಕ್ಷಗಾನ, ವ್ಯವಸಾಯ, ವಿಜ್ಞಾನ, ಶಿಕ್ಷಣ, ರಾಜಕೀಯ, ಸಾಹಿತ್ಯ, ಕೋಳಿಸಾಕಣೆ, ಪ್ರಕಾಶನ, ಮುದ್ರಣ, ವಿನ್ಯಾಸ - ಹೀಗೆ ಹೇಳುತ್ತಾ ಹೊರಟರೆ ಅಂತ್ಯಕಾಣದು. ಈ ಎಲ್ಲ ಕ್ಷೇತ್ರಗಳಲ್ಲಿಯೂ ಕಾರಂತತನ ಎದ್ದು ಕಾಣುತ್ತದೆ. ಬಾಲಬೋಧೆಯಿಂದ ಹಿಡಿದು ವಿಶ್ವಕೋಶದವರೆಗಿನ ಅವರ ಸಾಧನೆ ಅಸಾಮಾನ್ಯ. ಇಂಥವರ ಬಗ್ಗೆ ಮತ್ತೊಬ್ಬ ಜ್ಞಾನಪೀಠ ಪ್ರಶಸ್ತಿ ವಿಜೇತ ವಿ.ಕೃ.ಗೋಕಾಕರು ತಮಗಾದ ಅನುಭವವನ್ನು ಮನಮುಟ್ಟುವಂತೆ ಸ್ಮರಿಸಿದ್ದಾರೆ. 1936ರಲ್ಲಿ ಡಾ.ವಿ.ಕೃ.ಗೋಕಾಕರು ಪ್ಯಾರಿಸ್ಸಿನ ರೈಲು ನಿಲ್ದಾಣದಲ್ಲಿ ರೈಲ್ವೆ ನಿರೀಕ್ಷಣಾಲಯದಲ್ಲಿ ರೈಲಿಗಾಗಿ ತಮ್ಮ ಪತ್ನಿಯ ಜೊತೆ ಕಾದು ಕುಳಿತಿದ್ದರು. ವಿದೇಶಗಳೊಡನೆ ಭಾರತ ಸಂಪರ್ಕ ಅಷ್ಟಾಗಿ ಇಲ್ಲದಿದ್ದ ಬ್ರಿಟಿಷರ ಆಳ್ವಿಕೆಯಿದ್ದ ಕಾಲವದು. ಝಕೋಸ್ಲೊವಾಕಿಯಾದ ಉನ್ನತಾಧಿಕಾರಿಯೊಬ್ಬ ಗೋಕಾಕರ ಬಳಿ ಬಂದು ತಾನು ಫ್ರಾನ್ಸಿಸ್ ಮಾಕ್ರಿಯೆಂದು ಪರಿಚಯಿಸಿಕೊಂಡ. ನೀವು ಭಾರತೀಯರೇ? ಎಂದು ಕೇಳಿದ. ಅದಕ್ಕೆ ಗೋಕಾಕರು ಹೌದೆಂದು ಉತ್ತರಿಸಿದರು. ಆತ ಕೇಳಿದ ಎರಡನೆಯ ಪ್ರಶ್ನೆ 'ತಮಗೆ ಕಾರಂತರ ಪರಿಚಯವಿದೆಯೆ?' ಎಂದು. ಅದನ್ನು ಕೇಳಿ ಗೋಕಾಕರು ರೋಮಾಂಚನಗೊಂಡರು. ಅಲ್ಲದೆ ಶಿವರಾಮಕಾರಂತರ ವಿಷಯ ಮಾಕ್ರಿಗೆ ಗೊತ್ತಾಗಿದ್ದರ ಬಗೆ ಎಂತು ಎಂದು ಆಶ್ಚರ್ಯಪಟ್ಟರು. ಕೊನೆಗೆ ಸಂತೋಷದಿಂದಲೇ ಗೋಕಾಕರು, ಕಾರಂತರು ತಮ್ಮ ಆಪ್ತ ಮಿತ್ರರೆಂದು ಹೇಳಿದರು. ಮಾಕ್ರಿ ಗೋಕಾಕರ ಮಾತನ್ನು ಕೇಳಿ ತುಂಬಾ ಸಂತೋಷಪಟ್ಟಂತೆ ಕಂಡರು. ತಮ್ಮ ಪತ್ನಿಯನ್ನು ಕರೆದು ಗೋಕಾಕರನ್ನು ಪರಿಚಯಿಸಿದ ಬಗೆ ಇನ್ನೂ ಆಶ್ಚರ್ಯಕರವಾಗಿದ್ದಿತು. ಆತ ಹೇಳಿದ, 'ಈ ಗೃಹಸ್ಥ ಕಾರಂತರ ಸ್ನೇಹಿತ' ಎಂದು. ಕೊನೆಗೆ ವಿಚಾರಿಸಿದಾಗ ತಿಳಿದು ಬಂದಿದ್ದು ಇಷ್ಟು. ಮಾಕ್ರಿ ಒಮ್ಮೆ ಮುಂಬಯಿಗೆ ಬಂದಾಗ ಕಾರಂತರನ್ನು ಅಕಸ್ಮಾತ್ ಭೇಟಿಯಾಗಿದ್ದ. ಪರಿಚಯ ಸ್ನೇಹವಾಗಿ ಪರಿಣಮಿಸಿತು. ಆಗ ಕಾರಂತರು ಮಾಕ್ರಿಗೆ ತನ್ನನ್ನು ಜರ್ಮನಿಯ ಸ್ಟುಡಿಯೋದವರಿಗೆ ಪರಿಚಯ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದರು. ಈ ಘಟನೆಯನ್ನು ಗೋಕಾಕರು ತಮ್ಮ 'ಸಮುದ್ರದಾಚೆಯಿಂದ' ಕೃತಿಯಲ್ಲಿ ಪ್ರಸ್ತಾಪಿಸಿ, ಕಾರಂತರ ಜೀವನದ ಬಗೆಗಿನ ರುಚಿಯನ್ನೂ, ಯಾವಾಗಲೂ ಸೋಲನ್ನು ಕಂಡರಿಯದ ಅದ್ಭುತ ಪ್ರತಿಭೆ ಅವರು ಎಂದು ವರ್ಣಿಸಿದ್ದಾರೆ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.