ಸಂಪಾದಕೀಯ

ಇರಾನ್ ನ್ಯೂಕ್ಲಿಯರ್ ಒಪ್ಪಂದ ಭಾರತಕ್ಕೆ ಒತ್ತಡ ಕಡಿಮೆ

Published On :

ನ್ಯೂಕ್ಲಿಯರ್ ಜಗತ್ತಿನಲ್ಲಿ, ತಂಟೆಕೋರ ರಾಷ್ಟ್ರವೆನಿಸಿದ ಇರಾನ್ ತನ್ನ ಹಿಂದಿನ ಹಟಮಾರಿತನವನ್ನು ಬಿಟ್ಟು ಅಮೆರಿಕ, ರಷ್ಯ, ಚೀನಾ, ಫ್ರಾನ್ಸ್ ಮತ್ತು ಗ್ರೇಟ್ ಬ್ರಿಟನ್ (ವಿಶ್ವ ರಾಷ್ಟ್ರ ಸಂಸ್ಥೆಯ ಭದ್ರತಾ ಸಮಿತಿಯ ಶಾಶ್ವತ ಸದಸ್ಯ ರಾಷ್ಟ್ರಗಳು) ಮತ್ತು ಜರ್ಮನಿಯ ಜತೆ, ಸೀಮಿತ ಉದ್ದೇಶದ ಅಣುಶಕ್ತಿ ಪ್ರಯೋಗ ಕುರಿತ ಒಪ್ಪಂದಕ್ಕೆ ಸಹಿ ಹಾಕಿರುವುದು, ಇಸ್ರೇಲ್‌ನ ವಿರೋಧವನ್ನು ಬಿಟ್ಟರೆ ಇತರ ರಾಷ್ಟ್ರಗಳ ಪಾಲಿಗೆ ಸ್ವಾಗತಾರ್ಹವಾದ ಬೆಳವಣಿಗೆ.
ಇರಾನ್, ತನ್ನ ನ್ಯೂಕ್ಲಿಯರ್ ನೀತಿಯಲ್ಲಿ ಅಂತಾರಾಷ್ಟ್ರೀಯ ಸೌಹಾರ್ದ ಗಳಿಕೆಯ ದೃಷ್ಟಿಯಿಂದ ಸೀಮಿತವಾದ ಬದಲಾವಣೆ ಮಾಡಿಕೊಂಡಿರುವುದಕ್ಕೆ ಆ ರಾಷ್ಟ್ರದ ನೂತನ ಚುನಾಯಿತ ಅಧ್ಯಕ್ಷ ಹಸನ್ ಅವರ ನಾಯಕತ್ವವೇ ಕಾರಣ ಎನ್ನಬಹುದು.
ನಿಜ. ಇರಾನ್‌ನ ನಿಜವಾದ ಉದ್ದೇಶ ಅದನ್ನು ಈಗ ಬಾಧಿಸುತ್ತಿರುವ ಅಂತಾರಾಷ್ಟ್ರೀಯ ನಿರ್ಬಂಧಗಳ ಷರತ್ತುಗಳಿಂದ ಸ್ವಲ್ಪವಾದರೂ ವಿನಾಯಿತಿ ಪಡೆಯುವುದೇ. ಪಾಶ್ಚಿಮಾತ್ಯ ಪ್ರಬಲ ರಾಷ್ಟ್ರಗಳಿಗೂ ಅದೇ ಬೇಕಾಗಿತ್ತು. ಹೀಗಾಗಿ, ಕೊನೆಗೂ ಈಗ ಒಪ್ಪಂದಕ್ಕೆ ಸಹಿಬಿದ್ದಿದೆ.
ಇರಾನ್, ತನ್ನ ಕೆಲವು ನ್ಯೂಕ್ಲಿಯರ್ ಪ್ರಯೋಗ ಶಾಲೆಗಳು ಹಾಗೂ ಸಂಶೋಧನಾ ಕೇಂದ್ರಗಳನ್ನು "ಸೀಮಿತ ಉದ್ದೇಶಕ್ಕೆ" ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರತಿನಿಧಿಗಳು ಸಂದರ್ಶಿಸಿ ಪರಿಶೀಲಿಸಬಹುದು ಎನ್ನುವುದನ್ನು ಒಪ್ಪಿಕೊಂಡಿದೆ.
ಇದು ವಾಸ್ತವದಲ್ಲಿ ಒಂದು ಸೀಮಿತ ಚೌಕಟ್ಟಿನ ಒಪ್ಪಂದವಷ್ಟೇ. ಆದರೂ, ಅಂತಾರಾಷ್ಟ್ರೀಯ ನ್ಯೂಕ್ಲಿಯರ್ ವಿಷಯಗಳಿಗೆ ಸಂಬಂಧಿಸಿದಂತೆ ಒಡಂಬಡಿಕೆ - ಚರ್ಚೆಗೆ ಇರಾನ್ ಸಿದ್ಧವಾಗಿರುವುದು ಒಳ್ಳೆಯ ಸೂಚನೆಯೇ. ಈ ಒಪ್ಪಂದವನ್ನು ಬಹುತೇಕ ರಾಷ್ಟ್ರಗಳು ಸ್ವಾಗತಿಸಿದ್ದರೂ, ಇಸ್ರೇಲ್ ವಿರೋಧಿಸಿರುವುದೂ ಸಹಜವೇ. ಇಸ್ರೇಲ್, ಈಗಿನ ಒಪ್ಪಂದದಿಂದ ಒಂದು ಕೆಟ್ಟ ರಾಷ್ಟ್ರಕ್ಕೆ ಸಲ್ಲದ ಮಾನ್ಯತೆಯನ್ನು ನೀಡಲಾಗಿದೆ ಎಂದು ತಿಳಿಸಿದೆ. ಅಲ್ಲದೇ ಅಗತ್ಯ ಬಿದ್ದರೆ ಟೆಹರಾನ್ ಮೇಲೆ ದಾಳಿ ನಡೆಸಲೂ ಸಿದ್ಧ ಎಂದೂ ಘೋಷಿಸಿದೆ.
ಇರಾನ್, ತನ್ನ ಎಲ್ಲ ನ್ಯೂಕ್ಲಿಯರ್ ಚಟುವಟಿಕೆಯೂ ಮಿಲಿಟರಿ ಉದ್ದೇಶದಿಂದ ದೂರವಾಗಿದ್ದು ಶಾಂತಿಯುತ ಕಾರ್ಯಕ್ರಮಗಳನ್ನಷ್ಟೇ ಬೆಂಬಲಿಸಿದೆ ಎನ್ನುವ ಮಾತನ್ನು ಅಮೆರಿಕ ಮತ್ತು ಇತರ ರಾಷ್ಟ್ರಗಳು ಪೂರ್ಣವಾಗಿ ನಂಬಿಲ್ಲ ಎನ್ನುವುದೂ ನಿಜ.
ಭಾರತಕ್ಕೆ ಈ ಒಪ್ಪಂದದಿಂದ ತುಂಬಾ ಹೆಚ್ಚಿನ ಉಪಯೋಗವೇನೂ ಇಲ್ಲ. ಆದರೆ ಇರಾನ್ ವಿರುದ್ಧ ಕಠಿಣ ನಿರ್ಭಂಧಗಳು ಜಾರಿಯಲ್ಲಿರುವವರೆಗೂ ಭಾರತ ಇರಾನ್‌ನಿಂದ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಬೇಕೆಂದು ಹೇರುತ್ತಿದ್ದ ಒತ್ತಾಯ ಈಗ ಸಡಿಲಗೊಳ್ಳುವ ಸಂಭವವಿದೆ. ಆ ದೃಷ್ಟಿಯಿಂದ ನ್ಯೂಕ್ಲಿಯರ್ ಜಗತ್ತಿನ ಈಗಿನ ಬೆಳವಣಿಗೆ ಭಾರತದ ದೃಷ್ಟಿಯಿಂದ ಒಳ್ಳೆಯದೇ. ನ್ಯೂಕ್ಲಿಯರ್ ಜಗತ್ತಿನಲ್ಲಿ ಯಾವುದೇ ರೀತಿಯ ಒಪ್ಪಂದವಾದರೂ ಅದು ಸ್ವಾಗತಾರ್ಹವೇ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.