ಆಶಾರಾಮ್ ತ್ಯಾಗಿಯವರ ಶೌರ್ಯ
ಮೇಜರ್ ಆಶಾರಾಮ್ ತ್ಯಾಗಿ ಭಾರತ ಸೈನ್ಯದ ಅಪ್ರತಿಮ ವೀರರಾಗಿದ್ದರು. 1965ರಲ್ಲಿ ನಡೆದ ಭಾರತ-ಪಾಕ್ ಯುದ್ಧದಲ್ಲಿ ಅವರು ತೋರಿದ ಶೌರ್ಯ ನಮ್ಮ ಯುವಕರಿಗೆ ಮಾರ್ಗದರ್ಶಿಯಾಗಿದೆ. ಒಂದೇ ಬಾರಿ ಐದು ಪ್ಯಾಟನ್ ಟ್ಯಾಂಕುಗಳನ್ನು ನಾಶಪಡಿಸಿದ ಧೀರ. ಇವರ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಪರಮವೀರ ಚಕ್ರವನ್ನು ನೀಡಿ ಗೌರವಿಸಿತು. ವಾಘಾದಿಂದ ಡೋಗ್ರಿಯವರೆಗೆ ಅದೆಷ್ಟು ರಕ್ತ ಹರಿಯಿತೋ ಗೊತ್ತಿಲ್ಲ. ಏಕೆಂದರೆ ಉಗ್ರವಾದ ಕದನ ನಡೆದದದ್ದು ಇಲ್ಲಿಯೇ. ಇಲ್ಲಿ ಪಡೆದ ಗೆಲುವಿನಿಂದಾಗಿಯೇ ಇಚ್ಛುಕಗೋಲ ನಾಲೆಯನ್ನು ಸಂಧಿಸುವ ಸ್ಥಾನದ ಸ್ವಾಮ್ಯ ನಮಗೆ ಸಿಕ್ಕಿದ್ದು. 26ರ ತರುಣ ಆಶಾರಾಮ್ ತ್ಯಾಗಿಯವರಿಗೆ ಕಮ್ಯಾಂಡರ್ ಹೈಡೆಯವರು ಇಚ್ಛುಕಗೋಲ ನಾಲೆಯತ್ತ ತೋರಿಸುತ್ತಾ ಅದರ ಪೂರ್ವತೀರ ನಮ್ಮ ಅಧಿಕಾರಕ್ಕೆ ಸೇರಲೇಬೇಕು ಎಂದಿದ್ದರು. ಆ ಪ್ರದೇಶವನ್ನು ವಶಪಡಿಸಿಕೊಂಡರೆ ಮಾತ್ರ ತಮ್ಮ ಉದ್ದೇಶ ಸಾಧನೆಯಾಗುತ್ತದೆ ಎಂದು ಹೇಳಿದರು. ಮೇಜರ್ ತ್ಯಾಗಿಗೆ ಒಂದೇ ಗುರಿ. ಢೋಗ್ರಿ ಪ್ರದೇಶವನ್ನು ವಶಪಡಿಸಿಕೊಳ್ಳುವುದು. ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ. ಅಲ್ಲಿ ಪಾಕ್ ಟ್ಯಾಂಕುಗಳು ಸಾಲುಸಾಲಾಗಿ ನಿಂತು ಭಾರತೀಯ ಸೈನಿಕರತ್ತ ಗುರಿಮಾಡಿ ನಿಂತಿದ್ದವು. ಆದರೆ ತ್ಯಾಗಿಯವರ ನಿಶ್ಚಯ ದೃಢವಾಗಿತ್ತು. ಸೈನ್ಯದೊಡಗೂಡಿ ಮುನ್ನುಗ್ಗಿದ ತ್ಯಾಗಿಯವರಿಗೆ ಗುಂಡೇಟು ತಗಲಿದರೂ ಧೃತಿಗೆಡದೆ, ಬಿರುಸಿನ ದಾಳಿ ಮಾಡಿ ಅನೇಕ ಪ್ಯಾಟನ್ ಟ್ಯಾಂಕುಗಳನ್ನು ಹೊಡೆದುರುಳಿಸಿ, ಎದುರು ಬಂದ ಶತ್ರುಗಳನ್ನು ಕೊಚ್ಚಿಹಾಕುತ್ತಾ ಮುಂದೆ ಮುಂದೆ ಸಾಗಿದರು. ಅವರ ದಾಳಿ ಬಿರುಗಾಳಿಯಂತೆ ಸಾಗುತ್ತಲೇ ಇತ್ತು. ದೇಹದಲ್ಲಿ ಕೊನೆಯ ಹನಿ ರಕ್ತವಿರುವವರೆಗೂ ಹೋರಾಡಿ ಕೊನೆಗೂ ತಮ್ಮ ಗುರಿಯನ್ನು ಮುಟ್ಟಿದ್ದರು. ಶತ್ರುಗಳ ನೆಲೆಯನ್ನು ವಶಪಡಿಸಿಕೊಂಡಿದ್ದರು. ಆದರೆ ತೀವ್ರ ರಕ್ತಸ್ರಾವದಿಂದ ಅಲ್ಲಿಯೇ ಕುಸಿದು ಬಿದ್ದು ಅಸುನೀಗಿದರು.
ವಿವಾಹವಾಗಿ ಅವರಿಗಿನ್ನೂ ಆಗ ನಾಲ್ಕು ತಿಂಗಳೂ ಕಳೆದಿರಲಿಲ್ಲ. ಅಂದಿನಿಂದ ಅವರಿಗೆ 'ಡೋಗ್ರಿವೀರ' ಎಂದು ಕರೆಯಲಾಗುತ್ತದೆ. ಅಕ್ಟೋಬರ್ 20, 1965ರಂದು ಭಾರತದಾದ್ಯಂತ ರಾಷ್ಟ್ರೀಯ ಭದ್ರತಾ ದಿನದ ಆಚರಣೆ ನಡೆಯಿತು. ಇಂತಹ ಒಂದು ಸಮಾರಂಭ ದಿಲ್ಲಿಯ ಸರೋಜಿನಿ ನಗರದ ಪ್ರೌಢಶಾಲೆಯಲ್ಲಿಯೂ ನಡೆಯಿತು. ಅಂದು ಕವಿ ಇಕ್ಬಾಲ್ ಚಂದ್ ಮೇಜರ್ ಆಶಾರಾಮ ತ್ಯಾಗಿಯವರ ಸಾಹಸದ ಬಗ್ಗೆ ತಾವು ಬರೆದಿದ್ದ ಕವನ ಓದುತ್ತ ಓದುತ್ತ ಅದೆಷ್ಟು ಭಾವುಕರಾದರೆಂದರೆ, ಅದೇ ಜಾಗದಲ್ಲಿ ಹೃದಯಾಘಾತದಿಂದ ಮರಣಿಸಿದರು. ತ್ಯಾಗಿಯವರ ಗೌರವಾರ್ಛ ಇಚ್ಛುಕಗೋಲ ನಾಲೆಯ ದಡದಲ್ಲಿ ಸ್ಥಾಪಿಸಿದ ಧ್ವಜಸ್ಥಂಭದಲ್ಲಿ ಇಂದಿಗೂ ಧ್ವಜ ಹಾರಾಡುತ್ತಿರುತ್ತದೆ. ಅದರ ಕಾವಲಿಗೆ ನಿಂತ ಯೋಧರು ಬಂದವರಿಗೆಲ್ಲಾ ಹೆಮ್ಮೆಯಿಂದ ತ್ಯಾಗಿಯವರ ತ್ಯಾಗದ ಕಥೆಯನ್ನು ಹೇಳುತ್ತಾರೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

