ಸಂಪಾದಕೀಯ

ಹಳ್ಳಿಗರನ್ನು ಸಿರಿವಂತರನ್ನಾಗಿ ಮಾಡುವ ಉದ್ದೇಶ ಈತನದು

ಹಳ್ಳಿಗರನ್ನು ಸಿರಿವಂತರನ್ನಾಗಿ ಮಾಡುವ ಉದ್ದೇಶ ಈತನದು
Published On :

ರುಸ್ತುಂ ಸೇನ್ ಗುಪ್ತಾನಿಗೆ ಮೊದಲಿನಿಂದಲೂ ಅಮೆರಿಕದಲ್ಲಿ ಓದುವ ಹಂಬಲವಿತ್ತು. ದೆಹಲಿ ನಿವಾಸಿಯಾದ ಈತ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಮತ್ತು ಫ್ರಾನ್ಸ್‌ನಲ್ಲಿ ಓದಿ, ಸಿಂಗಪುರದಲ್ಲಿ ನೌಕರಿಗೆ ಸೇರಿದ. ಅಲ್ಲಿ ಅವನಿಗೆ ವರ್ಷಕ್ಕೆ ಒಂದೂವರೆ ಲಕ್ಷ ಡಾಲರ್ ವೇತನ ಲಭಿಸುತ್ತಿತ್ತು. ಇದ್ದಕ್ಕಿದ್ದಂತೆ ತನ್ನ ಉದ್ದೇಶ ಹಣಸಂಪಾದನೆಯಲ್ಲ ಎಂದು ನಿರ್ಧರಿಸಿ, ತನ್ನ ದೇಶದ ಜನರಿಗೆ ಅದರಲ್ಲೂ ಗ್ರಾಮೀಣ ಪ್ರದೇಶದ ಜನರಿಗೆ ಏನಾದರೂ ಮಾಡಬೇಕೆಂದು ಯೋಚಿಸಿ, ತನ್ನ ಹುದ್ದೆಗೆ ರಾಜಿನಾಮೆ ನೀಡಿದ. ಭಾರತಕ್ಕೆ ಬಂದು "ಬೂಂದ್‌" ಎಂಬ ಸಂಸ್ಥೆಯನ್ನು ಸ್ಥಾಪಿಸಿ ಗೃಹೋಪಯೋಗಿ ವಸ್ತುಗಳನ್ನು ತಯಾರಿಸಲು ಪ್ರಾರಂಭಿಸಿದ. ರಾಜಸ್ಥಾನ, ದೆಹಲಿ, ಮಧ್ಯಪ್ರದೇಶ, ಜಾರ್ಖಂಡ್, ಚತ್ತೀಸ್‌ಗಢದ ಗ್ರಾಮೀಣ ಪ್ರದೇಶಗಳಿಗೆ ಹೋಗಿ ತನ್ನ ಕಂಪನಿಯಲ್ಲಿ ತಯಾರಾದ ಗೃಹೋಪಯೋಗಿ ವಸ್ತುಗಳ ಮಾರಾಟ ಮತ್ತು ಸೇವೆಯನ್ನು ಪ್ರಾರಂಭಿಸಿದ. ಸೋಲಾರ್ ದೀಪಗಳಿಂದ ಹಿಡಿದು ನೀರು ಶುದ್ಧೀಕರಣ ಸಾಮಗ್ರಿಗಳವರೆಗೆ ಎಲ್ಲ ವಸ್ತುಗಳನ್ನು ಮಾರಾಟಮಾಡಲು ಮತ್ತು ಅಲ್ಲಿನ ಆಸಕ್ತ ತರುಣರನ್ನು ಸ್ವಂತ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದ. 250 ರು.ಗಳಿಂದ ಹಿಡಿದು, 15ಸಾವಿರದವರೆಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ಅತ್ಯಂತ ಕಡಿಮೆ ಲಾಭದಲ್ಲಿ ಮಾರುವ ಮತ್ತು ಮಾರಾಟಕ್ಕೆ ಪ್ರಚೋದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾನೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ನಿರುದ್ಯೋಗಿಗಳು ಸ್ವಂತ ದುಡಿಮೆಯಿಂದ ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಂಡಿದ್ದಾರೆ. ಸೇನ್ ಗುಪ್ತಾ ತನ್ನ ಕಾರ್ಯಕ್ಷೇತ್ರವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ತಮಿಳುನಾಡು, ಪಶ್ಚಿಮ ಬಂಗಾಳ, ಮಣಿಪುರ ಮುಂತಾದೆಡೆ ಅಲ್ಲಿನ ಗ್ರಾಮೀಣ ಯುವಕರೊಡನೆ ಮಾತುಕತೆ ನಡೆಸಿದ್ದಾನೆ. ದಿನನಿತ್ಯದ ಅತ್ಯವಶ್ಯಕ ವಸ್ತುಗಳನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಜನರ ಪ್ರೀತಿ ವಿಶ್ವಾಸವನ್ನೂ ಗಿಟ್ಟಿಸಿದ್ದಾನೆ. ವಿದ್ಯುತ್ ಸೌಲಭ್ಯವಿಲ್ಲದ ಗ್ರಾಮಗಳಲ್ಲಿ ಸೌರದೀಪಗಳನ್ನು ಅಳವಡಿಸಿ, ಅಲ್ಲಿನ ಮಕ್ಕಳು ಆ ಬೆಳಕಿನಲ್ಲಿ ಓದುತ್ತಿರುವುದನ್ನು ನೋಡಿ ಸಂತೋಷಪಡುತ್ತಾನೆ. ಆಗಾಗ್ಗೆ ಯುವ ಉದ್ಯಮಿಗಳನ್ನು ಅಲ್ಲಲ್ಲಿ ಸೇರಿಸಿ ಅವರಿಗೆ ತರಬೇತಿ ನೀಡಿ ಸ್ವಂತ ಉದ್ಯಮ ಸ್ಥಾಪಿಸಲು ಎಲ್ಲ ನೆರವನ್ನೂ ನೀಡಿ, ಅವರಿಗೆ ಬೇಕಾದ ಮೂಲ ಬಂಡವಾಳ ಮತ್ತು ವಸ್ತುಗಳನ್ನು ನೀಡಿ ಅವರೂ ಸಹ ಜೀವನದಲ್ಲಿ ತಮ್ಮ ಕಾಲ ಮೇಲೆ ನಿಲ್ಲುವ ಪ್ರಕ್ರಿಯೆಯಲ್ಲಿ ನೆರವಾಗಿದ್ದಾನೆ. ಹೀಗಾಗಿ ರುಸ್ತುಂ ಮತ್ತು ಅವರ ಬೂಂದ್ ಸಂಸ್ಥೆ ಗ್ರಾಮೀಣ ಜನರ ವಿಶ್ವಾಸ ಗಳಿಸುವಲ್ಲಿ ಸಾಕಷ್ಟು ಯಶಸ್ವಿಯಾಗಿದೆ. ರುಸ್ತುಂ ರಂತಹ ಯುವಕರ ಸಂಖ್ಯೆ ಹೆಚ್ಚಾದಷ್ಟೂ ಆರ್ಥಿಕ ಸ್ವಾವಲಂಬನೆ ಸಾಧ್ಯ ಎಂಬುದನ್ನು ಈ ಯುವಕ ತೋರಿಸಿಕೊಟ್ಟಿದ್ದಾನೆ.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.