ಸಂಪಾದಕೀಯ

ನನ್ನ ಮನಸ್ಸೇ ನನಗೆ ಒಡೆಯ

Published On :

ಇಂದು ರಾಜ್ಯ ಪ್ರಶಸ್ತಿಗಾಗಿ ಮೂರುಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿರುವುದನ್ನು ಪತ್ರಿಕೆಗಳಲ್ಲಿ ಓದಿದಾಗ, ಪ್ರಶಸ್ತಿ ಆಕಾಂಕ್ಷಿಗಳು ಮಾಡುತ್ತಿರುವ ಸರ್ಕಸ್ಸನ್ನು ಗಮನಿಸಿದಾಗ, ಪ್ರಶಸ್ತಿಗಳ ಆಸೆಗೆ ಬೀಳದೆ ನುಡಿದಂತೆ ನಡೆದು ತೋರಿಸಿದ ಡಾ.ಹಾ.ಮಾ.ನಾಯಕ್ ನೆನಪಾಗುತ್ತಾರೆ. ಹಾ.ಮಾ.ನಾಯಕರು ಪ್ರಾಧ್ಯಾಪಕಾರಾಗಿದ್ದಾಗ ಮತ್ತು ಗುಲ್ಬರ್ಗ ವಿಶ್ವ ವಿದ್ಯಾನಿಲಯದ ಉಪಕುಲಪತಿಗಳಾಗಿದ್ದಾಗಲೂ ಸಹ ಯಾವುದೇ ಒತ್ತಡಕ್ಕೆ ಸಿಲುಕದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ವ್ಯಕ್ತಿ ಎಂದು ಹೆಸರು ಪಡೆದವರು. ಸರ್ಕಾರ ನೀಡುವ ರಾಜ್ಯ ಪ್ರಶಸ್ತಿ 10-15 ಜನಕ್ಕಿಂತ ಮೀರಬಾರದು ಎಂಬ ನಿಲುವನ್ನು ಹೊಂದಿದ್ದರು. ಅಲ್ಲದೆ ಪ್ರಶಸ್ತಿಯು ರಾಜಕೀಯಮುಕ್ತವಾಗಿರಬೇಕೆಂಬುದು ಅವರ ಅಭಿಪ್ರಾಯವಾಗಿತ್ತು. ಅವರನ್ನು ಒಮ್ಮೆ ರಾಜ್ಯಪ್ರಶಸ್ತಿಗಾಗಿ ಆಯ್ಕೆ ಮಾಡಲಾಯಿತು. ಆಗ ಪ್ರಶಸ್ತಿಯ ಜೊತೆ ಐದು ಸಾವಿರ ರುಪಾಯಿಗಳನ್ನು ನಗದಾಗಿ ನೀಡುತ್ತಿದ್ದರು. ಸರ್ಕಾರದ ಆಯ್ಕೆ ಪ್ರಕ್ರಿಯೆಯ ಬಗ್ಗೆ ಅಸಮಾಧಾನಗೊಂಡಿದ್ದ ಹಾಮಾನಾ, ಪ್ರಶಸ್ತಿ ಮಾತ್ರ ಸ್ವೀಕರಿಸಲು ಸಮ್ಮತಿಸಿ ಅದರ ಜೊತೆಗೆ ಕೊಡುವ ಪ್ರಶಸ್ತಿಯ ಹಣವನ್ನು ತೆಗೆದುಕೊಳ್ಳಲು ನಿರಾಕರಿಸಿದರು. ಆಗ ಅವರ ಆಪ್ತ ಸಾಹಿತಿ ಮಿತ್ರರೊಬ್ಬರು ಹಣ ಪಡೆಯಲು ಒತ್ತಾಯಿಸಿದ್ದಲ್ಲದೆ, ಮುಂದೆ ಪ್ರಶಸ್ತಿ ಸ್ವೀಕರಿಸುವವರನ್ನು ಪೇಚಿಗೆ ಸಿಲುಕಿಸುತ್ತದೆಯಾದ್ದರಿಂದ ಹಾಗೆ ಮಾಡಬಾರದಾಗಿ ವಿನಂತಿಸಿದರು. ಆದರೆ ಹಾಮಾನಾ ಅವರು ತಮ್ಮ ನಿರ್ಧಾರದಿಂದ ಸ್ವಲ್ಪವೂ ಹಿಂದೆ ಸರಿಯಲಿಲ್ಲ. ನಾನು ತೀರ್ಮಾನ ತೆಗೆದುಕೊಂಡಿದ್ದೇನೆ. ನನ್ನ ಮನಸ್ಸೇ ನನಗೆ ಒಡೆಯ ಎಂದುಬಿಟ್ಟರು. ಸ್ವತಃ ಮುಖ್ಯಮಂತ್ರಿಗಳೇ ಹಾಮಾನಾ ಅವರನ್ನು ಕರೆಸಿ, ಹಣವನ್ನು ತೆಗೆದುಕೊಂಡು ಅದನ್ನು ಮುಖ್ಯಮಂತ್ರಿಗಳ ಪರಿಹಾರನಿಧಿಗೆ ದಾನ ನೀಡಲು ಸಲಹೆ ನೀಡಿದರು. ಹಾಗೆ ಮಾಡಿದರೆ ಸರ್ಕಾರಿ ದಾಖಲೆಗಳಲ್ಲಿ ತಾನು ಹಣ ಪಡೆದದ್ದು ದಾಖಲಾಗುತ್ತದೆಯಾದ್ದರಿಂದ ಹಾಗೆ ಮಾಡಲಾರೆ ಎಂದುಬಿಟ್ಟರು. ಮರುವರ್ಷ ಪೇಚಿಗೆ ಸಿಲುಕುವ ಮಾತನಾಡಿದ್ದ ಸಾಹಿತ್ಯ ಮಿತ್ರರಿಗೆ ರಾಜ್ಯ ಪ್ರಶಸ್ತಿ ಬಂದಾಗ ಅವರೇನೂ ಪೇಚಿಗೆ ಸಿಲುಕಿದವರಂತೆ ಕಾಣಲಿಲ್ಲ. ಈ ಬಗ್ಗೆ ಹಾಮಾನಾ ಅವರ ಗಮನ ಸೆಳೆದಾಗ ಅವರು ಹೇಳಿದ್ದು ಇಷ್ಟೆ, "ಅವರಿಗೂ ಅವರ ಮನಸ್ಸೇ ಒಡೆಯ, ಅದನ್ನು ಯಾರಿಗೂ ಪ್ರಶ್ನಿಸಲಾಗದು" ಪ್ರಶಸ್ತಿಯ ಬೆನ್ನು ಹತ್ತಿ ರಾಜಕಾರಣಿಗಳ ವಶೀಲಿಗೆ ಅವರ ಮನೆ ಬಾಗಿಲಿಗೆ ತಡಕಾಡುತ್ತಿರುವ ವ್ಯಕ್ತಿಗಳಿಗೆ ಹಾಮಾನಾರವರ ಆದರ್ಶ ಅದೇಕೆ ಕಣ್ಣಿಗೆ ಬೀಳುವುದಿಲ್ಲವೋ ತಿಳಿಯುತ್ತಿಲ್ಲ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.