ಸಂಪಾದಕೀಯ

ನಾನು ಹಳ್ಳಿ ಕಳ್ಳ, ನೀನು ಪಟ್ಟಣ ಕಳ್ಳ

Published On :

ಮಹಮದ್ ಪೀರ್ ನಮ್ಮ ನಾಡು ಕಂಡ ಅದ್ಭುತ ಕಲಾವಿದ. ಕನ್ನಡ ಮತ್ತು ಸಂಸ್ಕೃತದ ಬಗ್ಗೆ ಅಪಾರ ಜ್ಞಾನವಿದ್ದ ಪೀರ್ ಅಭಿನಯಿಸುತ್ತಿದ್ದ ಬುದ್ಧ, ದಾರಾ ಪಾತ್ರಗಳಂತೂ ಜನರಿಗೆ ಹುಚ್ಚು ಹಿಡಿಸಿದ್ದವು. ದಾರಾ ಪಾತ್ರದಲ್ಲಿ ಅವರ ಅಭಿನಯ ಕೇವಲ ಅಭಿನಯವಾಗಿರದೆ, ಜೀವ ತಳೆದ ಅದ್ಭುತ ಕಲಾಶಕ್ತಿಯಾಗಿ ಹೊರಹೊಮ್ಮುತ್ತಿತ್ತು. ನಾಟಕದಲ್ಲಿ ದಾರಾ ಜೈಲು ಸೇರುವ ದೃಶ್ಯವನ್ನು ನೋಡಿ ಜನ ಕಣ್ಣೀರಿಡುತ್ತಿದ್ದರು. ಅಷ್ಟು ಸಹಜವಾಗಿತ್ತು ಅವರ ಅಭಿನಯ. ಅವರ ಅಸ್ಖಲಿತ ಮಾತುಗಳು, ವಾಕ್ಶುದ್ಧಿ ಬೆರಗುಗೊಳಿಸುವಂತೆ ಇರುತ್ತಿದ್ದವು. ಒಮ್ಮೆ ಅವರು ಸದಾರಮೆ ನಾಟಕದಲ್ಲಿ ಕಳ್ಳನ ಪಾತ್ರ ವಹಿಸಿದ್ದರು. ಅದುವರೆಗೆ ಗುಬ್ಬಿ ವೀರಣ್ಣನವರು ತಮ್ಮ ನಾಟಕ ಕಂಪನಿಯಲ್ಲಿ ಇದೇ ಪಾತ್ರವನ್ನು ಮಾಡಿ ನಾಡಿನಾದ್ಯಂತ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅವರಂತೆ ಕಳ್ಳನ ಪಾತ್ರ ಮಾಡಲು ಬೇರೆಯವರಿಗೆ ಸಾಧ್ಯವೇ ಇಲ್ಲ ಎಂದು ಜನರೇ ತೀರ್ಮಾನಿಸಿದ್ದರು.
ಇಂತಹ ಕಳ್ಳನ ಪಾತ್ರದಲ್ಲಿ ಮಹಮದ್ ಪೀರ್ ಅಭಿನಯಿಸಿದಾಗ ಅವರ ಅಭಿನಯ ವೀರಣ್ಣನವರ ಪಾತ್ರವನ್ನು ಮೀರಿಸುವಂತ್ತಿತ್ತು. ಈ ವಿಷಯ ವೀರಣ್ಣನವರ ಕಿವಿಗೂ ಮುಟ್ಟಿತ್ತು. ಆದ್ದರಿಂದ ಅವರೂ ಒಮ್ಮೆ ಪೀರರ ಸದಾರಮೆ ನಾಟಕ ನೋಡಲು ಆಗಮಿಸಿದ್ದರು. ಅವರ ಅಭಿನಯ ಚಾತುರ್ಯವನ್ನು ನೋಡಿ ಗುಬ್ಬಿ ವೀರಣ್ಣನವರು ಅದೆಷ್ಟು ಪ್ರಭಾವಿತರಾದರೆಂದರೆ, ಮಧ್ಯಂತರ ಸಮಯದಲ್ಲಿ ರಂಗಕ್ಕೆ ತೆರಳಿ, ಮಹಮದ್ ಪೀರ್‌ರನ್ನು ಗಟ್ಟಿಯಾಗಿ ಅಪ್ಪಿಕೊಂಡರು. ಅವರ ಕಣ್ಣುಗಳಲ್ಲಿ ಆನಂದಾಶ್ರುಗಳು ಧಾರಾಕಾರವಾಗಿ ಸುರಿಯುತ್ತಿತ್ತು. "ನಾನು ಹಳ್ಳಿ ಕಳ್ಳ, ನೀನು ಪಟ್ಟಣದ ಕಳ್ಳ. ನೀನು ವಿಜ್ಞಾನದ ಕಳ್ಳ, ನಾನು ಸಾಮಾನ್ಯ ಕಳ್ಳ" ಎಂದು ಹೇಳಿ ತಮ್ಮ ಬೆರಳಿನಲ್ಲಿದ್ದ ಬಂಗಾರದ ಉಂಗುರವನ್ನು ತೆಗೆದು ಪೀರರ ಕೈಬೆರಳಿಗೆ ಹಾಕಿ ಅದನ್ನು ತಮ್ಮ ಮೆಚ್ಚುಗೆಯ ಕಾಣಿಕೆಯಾಗಿ ಸ್ವೀಕರಿಸಬೇಕೆಂದು ಕೇಳಿಕೊಂಡರು.
ಅಲ್ಲಿ ನೆರೆದಿದ್ದ ಕಲಾರಸಿಕರು ಈ ದೃಶ್ಯವನ್ನು ಕಣ್ತುಂಬಿಕೊಂಡು ತಮ್ಮ ಮೆಚ್ಚುಗೆ ಸೂಚಿಸಲು ದೀರ್ಘ ಕರತಾಡನ ಮಾಡಿದರು. ಇದು ಒಬ್ಬ ಮಹಾನ್ ಕಲಾವಿದ ಇನ್ನೊಬ್ಬ ಮಹಾನ್ ಕಲಾವಿದನನ್ನು ಗೌರವಿಸಿದ ರೀತಿ. ಇಂತಹ ವೀರಣ್ಣನವರು, ಮುಂದೊಂದು ದಿನ ಪೀರ್ ಅವರು ನಾಟಕದಲ್ಲಿ ಅಪಾರ ನಷ್ಟಮಾಡಿಕೊಂಡು ಗುಂಡ್ಲುಪೇಟೆಯಿಂದ ತಿಪಟೂರಿಗೆ ಬಂದಾಗ ಅವರ ದೈನ್ಯ ಸ್ಥಿತಿಗೆ ಮರುಗಿ ತಮ್ಮ ಥಿಯೇಟರ್‌ನಲ್ಲಿ ನಾಟಕವಾಡಲು ಅವಕಾಶ ನೀಡುವುದಾಗಿ ಮಾತುಕೊಟ್ಟರು. ಆದರೆ ತಮ್ಮ ಗುಮಾಸ್ತ ಕೃಷ್ಣಪ್ಪನ ಸಲಹೆಯಂತೆ, ಎಲ್ಲಿ ಪೀರರ ನಾಟಕಗಳಿಂದ ತಮ್ಮ ಕಂಪನಿಯ ಘನತೆ ಕಡಿಮೆಯಾಗುವುದೋ ಎಂದು ಭಾವಿಸಿ, ಅವರು ತಿಪಟೂರಿನಲ್ಲಿ ಹಾಕಿಸಿದ ಥಿಯೇಟರನ್ನು ಅವಸರವಸರವಾಗಿ ಬಿಚ್ಚಿಸಿ, ಮೊಸಳೆ ಕಣ್ಣೀರು ಸುರಿಸಿ, ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದು ಖೇದದ ಸಂಗತಿಯಾಗಿದೆ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.