ಸಂಪಾದಕೀಯ

ವಿಠ್ಠಲಭಾಯಿ ಪಟೇಲರಿಂದ ವೈಸ್‌ರಾಯ್ ಗರ್ವಭಂಗ

Published On :

ವಿಠ್ಠಲಭಾಯಿ ಪಟೇಲ್, ವಲ್ಲಭಭಾಯಿ ಪಟೇಲರ ಅಣ್ಣ. ಮಹಾತ್ಮ ಗಾಂಧಿಯವರ ಅನುಯಾಯಿಯಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು ಅವರು. 1922 ರಲ್ಲಿ ಚೌರಿ ಚೌರದ ಘಟನೆಯ ನಂತರ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ "ಸ್ವರಾಜ್ಯ ಪಕ್ಷ"ವನ್ನು ಸ್ಥಾಪಿಸಿದರು. ನಂತರ 1923 ರಲ್ಲಿ ಕೇಂದ್ರ ಶಾಸನಸಭೆಗೆ ಆಯ್ಕೆಯಾಗಿ ನಂತರ ಅದರ ಅಧ್ಯಕ್ಷರಾಗಿ ಆಯ್ಕೆಯಾದರು. ಆಗ ಶಾಸನಸಭೆಯ ವಾರ್ಷಿಕ ಅಧಿವೇಶನವನ್ನು ಉದ್ಘಾಟಿಸಲು ವೈಸ್‌ರಾಯ್ಬುರುತ್ತಿದ್ದರು. ಅದೂ ಅದ್ಧೂರಿ ಉಡುಪು ಧರಿಸಿ! ಅನೇಕ  ರಾಜರುಗಳು, ನೆಲಕ್ಕೆ ಮುಟ್ಟುತ್ತಿದ್ದ ವೈಸ್‌ರಾಯ್ ಅವರ ನಿಲುವಂಗಿಯ ಚುಂಗನ್ನು ಎತ್ತಿ ಹಿಡಿಯುವುದೇ ತಮ್ಮ ಭಾಗ್ಯವೆಂದು ನಂಬಿ ಅದಕ್ಕಾಗಿ ಪೈಪೋಟಿ ನಡೆಸುತ್ತಿದ್ದರು! ಅದುವರೆಗೆ ನಡೆದು ಬಂದ ಸಂಪ್ರದಾಯದಂತೆ ವೈಸ್‌ರಾಯ್ ಅವರು ಉನ್ನತ ಸ್ಥಾನದಲ್ಲಿ ಕೂಡುತ್ತಿದ್ದರು. ಇದೆಲ್ಲ ವಿಠ್ಠಲಭಾಯಿಯವರಿಗೆ ಸರಿಹೋಗುತ್ತಿರಲಿಲ್ಲ. ಸದಸ್ಯರ ವರ್ತನೆಯೂ ಅವರಿಗೆ ಅಸಹ್ಯ ತರಿಸುತ್ತಿತ್ತು. ಅವರ ಪ್ರಕಾರ ಸಭಾಧ್ಯಕ್ಷರೇ ಶಾಸನ ಸಭೆಯ ಪರಮಶ್ರೇಷ್ಠ ಅಧಿಕಾರವನ್ನು ಪಡೆದ ವ್ಯಕ್ತಿ. ಹೀಗಾಗಿ ವೈಸ್‌ರಾಯ್ ಶಾಸನ ಸಭೆಗೆ ಆಗಮಿಸುವಾಗ ಸಾಧಾರಣ ಉಡುಗೆ ಧರಿಸಿ ಬರಬೇಕೆಂದೂ, ಸಭಾಧ್ಯಕ್ಷರಿಗೆ ಸೂಕ್ತ ಗೌರವ ನೀಡಬೇಕೆಂದೂ ಸೂಚಿಸಿದರು. ಇನ್ನು ವೈಸ್‌ರಾಯ್, ಸಭೆಯಲ್ಲಿ ಸದಸ್ಯರು ಚರ್ಚೆ ಮಾಡುವಾಗ ಭಾಗವಹಿಸತಕ್ಕದ್ದಲ್ಲವೆಂದೂ, ಸಭಾಧ್ಯಕ್ಷರ ಪಕ್ಕದ ಕುರ್ಚಿಯಲ್ಲಿಯೇ ಕುಳಿತುಕೊಳ್ಳಬೇಕೆಂದೂ ತಾಕೀತು ಮಾಡಿದರು. ಇದನ್ನು ಕೇಳಿದ ಶಾಸನಸಭೆಯ ಆಂಗ್ಲ ಕಾರ್ಯದರ್ಶಿ ಸ್ಥಂಭೀಭೂತನಾದ ಅಲ್ಲದೆ, ಹಾಗೆಲ್ಲ ಅದೇಶಮಾಡಬಾರದೆಂದು ಸಲಹೆ ನೀಡಿದ. ಆದರೆ ವಿಠ್ಠಲ್ ಭಾಯಿ ಕೇಳಿದರೆ ತಾನೆ! ಅವರು ತಮ್ಮ ನಿಲುವಿನಲ್ಲಿ ಯಾವ ಬದಲಾವಣೆಯನ್ನೂ ಮಾಡಿಕೊಳ್ಳಲಿಲ್ಲ. ತಾವು ಹೇಳಿದ್ದೆಲ್ಲಾ ಸಭೆಯ ಘನತೆಯನ್ನು ಕಾಪಾಡಲು ಮಾತ್ರ ಎಂದು ಹೇಳಿದರು. ಅಂದಿನಿಂದ ವೈಸ್‌ರಾಯ್ ಲಾರ್ಡ್ ಇರ್ವಿನ್ ಸರಳ ಉಡುಪು ಧರಿಸಿ, ಭಾಷಣ ಮಾಡಿ ಹೋಗುತ್ತಿದ್ದರು. ಹೀಗೆ ಶಾಸಕಾಂಗದ ಗೌರವವನ್ನೂ, ಶಾಸನ ಸಭೆಯ ಅಧ್ಯಕ್ಷರೇ ಸರ್ವೋತ್ತಮರು ಎಂಬುದನ್ನು ಎತ್ತಿಹಿಡಿದರು ವಿಠ್ಠಲಭಾಯಿ. 1929ರಲ್ಲಿ ಶಾಸನ ಸಭೆಯ ಸದಸ್ಯರು ಅವರ ವಿರುದ್ಧ ಅವಿಶ್ವಾಸ ನಿರ್ಣಯ ತಂದು ಅವರನ್ನು ಅಧ್ಯಕ್ಷರ ಸ್ಥಾನದಿಂದ ಕಿತ್ತೆಸೆಯಲು ಸಿದ್ಧತೆ ನಡೆಸಿದಾಗ ಇದೇ ಲಾರ್ಡ್ ಇರ್ವಿನ್ ಸದಸ್ಯರ ಪ್ರಯತ್ನಕ್ಕೆ ತಣ್ಣೀರೆರಚಿದರು!

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.