ಪ್ರಗತಿಯ ಮಂದಗಮನ ಪ್ರಧಾನಿ- ಪ್ರತಿಪಕ್ಷ ಸಂಘರ್ಷ
ಕಳೆದ ಶುಕ್ರವಾರ, ದೇಶದ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪ್ರಧಾನಿ ಮನಮೋಹನ ಸಿಂಗ್ ಅವರು ತಮ್ಮ ದೀರ್ಘ ಮೌನವನ್ನು ಮುರಿದು ಸಂಸತ್ತಿನ ಉಭಯ ಸದನಗಳಲ್ಲೂ ನೀಡಿದ ಹೇಳಿಕೆ ಸಾಕಷ್ಟು ಸಂಘರ್ಷಕ್ಕೇ ಎಡೆಮಾಡಿಕೊಟ್ಟಿತ್ತು.
ಒಂದು ಹಂತದಲ್ಲಿ, ರಾಜ್ಯ ಸಭೆಯಲ್ಲಿ ಪ್ರಧಾನಿ ಕಳ್ಳ ಎಂದು ಕೂಗುವ ಪ್ರತಿಪಕ್ಷದ ನಡತೆಯ ಪ್ರಸ್ತಾಪವನ್ನು ಸಿಂಗ್ ಮಾಡಿದರೆ, ವಿಶ್ವಾಸ ಮತ ಗೆಲ್ಲಲಿಕ್ಕೆ ಕಾಸು ಕೊಟ್ಟು ಲೋಕಸಭೆ ಸದಸ್ಯರನ್ನು ಕೊಳ್ಳುವ ಪ್ರಧಾನಿಯ ನೈತಿಕತೆಯ ಪ್ರಸ್ತಾಪವೂ ಪ್ರತಿಪಕ್ಷದಿಂದ ಆಯಿತು.
ಅಪರೂಪವಾಗಿ, ಮನಮೋಹನ ಸಿಂಗ್ ಸಂಘರ್ಷಕ್ಕೆ ತಯಾರಾಗಿಯೇ ಸದನಕ್ಕೆ ಬಂದಿದ್ದರು. ಲೋಕಸಭೆಯಲ್ಲಿ ಹೇಳಿಕೆಯನ್ನು ಮುಗಿಸಿ, ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರ ಪ್ರತಿಕ್ರಿಯೆಯನ್ನು ಕೇಳುವ ಸೌಜನ್ಯವನ್ನೂ ತೋರಿಸದೇ ಹೊರಗೆ ನಡೆದರು. ರಾಜ್ಯ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಅರುಣ ಜೇಟ್ಲಿ ಜತೆ ಜಗಳಕ್ಕೇ ನಿಂತರು.
ದೇಶದ ಆರ್ಥಿಕ ಬಿಕ್ಕಟ್ಟಿನಂತಹ ಅತಿ ಪ್ರಾಮುಖ್ಯವಾದ ಹಾಗೂ ಅತಿ ಗಂಭೀರವಾದ ವಿಷಯದ ಮೇಲೆ ಪ್ರಧಾನಿಯ ಹೇಳಿಕೆಯ "ಪ್ರಕರಣದಲ್ಲಿ" ಗಾಂಭೀರ್ಯವೂ ಇರಲಿಲ್ಲ, ಹೊಸ ವಿಚಾರವೂ ಇರಲಿಲ್ಲ.
ನಿಜ. ಚರ್ಚೆಯ ಕಾಲದಲ್ಲಿ ಪ್ರಧಾನಿಯ ಮೌನ ಕುರಿತಂತೆ ಪ್ರತಿಪಕ್ಷದ ನಾಯಕರು ತೀವ್ರ ಸ್ವರೂಪದ ಆರೋಪಗಳನ್ನೇ ಹೊರಿಸಿದ್ದರು. ಅದು ಅವರನ್ನು ಕೆಣಕಿರಬೇಕು. ಅದೇ ಪ್ರಧಾನಿಯ ಶುಕ್ರವಾರದ ವರ್ತನೆಗೆ ವಿವರಣೆ ಅಷ್ಟೇ.
ಪ್ರಧಾನಿಯ ಹೇಳಿಕೆಯಂತೆ, ಈಗ ಸ್ವಲ್ಪ ಹಿನ್ನಡೆಯಾಗಿದ್ದರೂ, ಭಾರತದ ಆರ್ಥಿಕ ವ್ಯವಸ್ಥೆಯ ಬುನಾದಿ ಭದ್ರವಾಗಿದೆ. ಇಲ್ಲಿ ಬುನಾದಿ ಅಂದರೇನು? ವಿತ್ತೀಯ ಕೊರತೆ, ಚಾಲ್ತಿ ಲೆಕ್ಕದ ಕೊರತೆ, ಪ್ರಗತಿಯ ವೇಗ, ಹಾಗೂ ಹಣದ ಅತಿ ಪ್ರಸರಣದ ವೇಗ. ಈ ನಾಲ್ಕು ಅಂಶಗಳಲ್ಲಿ ಸರ್ಕಾರದ ಲೆಕ್ಕಾಚಾರವೆಲ್ಲ ತಲೆಕೆಳಗಾಗಿದೆ. ಅದನ್ನು ಪ್ರಸ್ತಾಪಿಸುವುದಕ್ಕೂ ಪ್ರತಿಪಕ್ಷಗಳಿಗೆ ಸದನದಲ್ಲಿ ಅವಕಾಶ ಸಿಗಲಿಲ್ಲ.
ಪ್ರಧಾನಿಯ ಪ್ರಕಾರ ಸರ್ಕಾರದಲ್ಲಿ ಮಿತವ್ಯಯ, ಸಬ್ಸಿಡಿಗಳನ್ನು ಕಡಿಮೆ ಮಾಡುವುದು, ಅಧಿಕಾರಿಶಾಹಿಯ ವಿಳಂಬವನ್ನು ತಪ್ಪಿಸುವುದು ಹಾಗೂ ವಸ್ತು ಹಾಗೂ ಸೇವಾ ಸೌಲಭ್ಯಗಳ ಮೇಲಿನ ಏಕ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರುವುದು ಈಗ ಆಗಲೇ ಬೇಕಾದ ಕೆಲಸ.
ಈ ನಾಲ್ಕರಲ್ಲಿ ವಸ್ತುಗಳ ತೆರಿಗೆಯ ಬಾಬನ್ನು ಬಿಟ್ಟರೆ ಉಳಿದ ಮೂರು ಅಂಶಗಳ ಜಾರಿಗೆ ಬಿಜೆಪಿಯ ಒಪ್ಪಿಗೆ, ಸಹಕಾರ ಬೇಕಾಗಿಲ್ಲ. ಈ ಅಂಶಗಳು ಸಂಸತ್ತಿಗೆ ಬರುವಂತಹದ್ದಲ್ಲ. ಸರ್ಕಾರ ತನ್ನ ಅಧಿಕಾರವನ್ನು ಬಳಸಿ, ಆಡಳಿತಾತ್ಮಕ ಕ್ರಮಗಳ ಮೂಲಕವೇ ಅದನ್ನು ಜಾರಿಗೊಳಿಸಬಹುದು. ಆ ಕೆಲಸ ಮಾಡುವುದನ್ನು ಬಿಟ್ಟು ಅಮೆರಿಕದಲ್ಲಿನ ಹಿಂಜರಿತ- ಚೇತರಿಕೆಯನ್ನು ಹೇಳಿದರೆ, ಸಂಸತ್ತಿನ ಕಾರ್ಯಕಲಾಪದಲ್ಲಿ ಬಿಜೆಪಿಯ ಅಸಹಕಾರವನ್ನು ಟೀಕಿಸಿದರೆ ಆಳುವ ಕೂಟಕ್ಕೆ, ಪ್ರಧಾನಿಗೆ ಬರುವ ಭಾಗ್ಯವಾದರೂ ಏನು?
ಆರ್ಥಿಕ ಬಿಕ್ಕಟ್ಟಿನ ವಿಚಾರದಲ್ಲಿ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದ ವಿತ್ತ ಮಂತ್ರಿ ಚಿದಂಬರಮ್, 2009-11ರ ವರ್ಷಗಳಲ್ಲಿ (ಆಗಿನ ಮಂತ್ರಿ) ವಿತ್ತ ಮಂತ್ರಾಲಯ, ಕಾರ್ಪೊರೇಟ್ ವಲಯಕ್ಕೆ ಹಿಂಜರಿತದ ಕೆಟ್ಟ ಪರಿಣಾಮವನ್ನು ಎದುರಿಸಲು ನೀಡಿದ ರಿಯಾಯಿತಿ- ವಿನಾಯಿತಿಗಳೂ ಈಗಿನ ಬಿಕ್ಕಟ್ಟಿಗೆ ಕಾರಣ ಎಂದಿದ್ದರು.
ಶುಕ್ರವಾರ ಪ್ರಧಾನಿ ಮನಮೋಹನ ಸಿಂಗ್ ತಮ್ಮ ಹೇಳಿಕೆಯಲ್ಲಿ ಈ ಪ್ರಮುಖ ವಿಚಾರವನ್ನು ಪ್ರಸ್ತಾಪಿಸುವ ನಿರೀಕ್ಷೆ ಇತ್ತು. 2008-11ರ ಅವಧಿಯಲ್ಲಿ ವಿತ್ತ ಮಂತ್ರಿಯಾಗಿದ್ದವರು ಪ್ರಣಬ್ ಮುಖರ್ಜಿ. ಈಗಿನ ರಾಷ್ಟ್ರಪತಿ.
ಹಿಂದೆ ಪ್ರಧಾನಿ ಮನಮೋಹನ ಸಿಂಗ್ ಅವರೇ 2009-11ರ ಬಜೆಟ್ಗಳನ್ನು ಮೆಚ್ಚಿ ಸದನದಲ್ಲೇ ಹೇಳಿಕೆ ನೀಡಿದ್ದರು. ಸರ್ಕಾರಕ್ಕೆ ಮುಖರ್ಜಿ ಅನಿವಾರ್ಯ ಎನ್ನುವ ಮಾತನ್ನು ಆಡಿದ್ದರು. ಹಾಗಿದ್ದರೂ, ಚಿದಂಬರಮ್ ಅವರ ಗಂಭೀರ ಟೀಕೆಯ ಪ್ರಸ್ತಾಪವೇ ಶುಕ್ರವಾರ ಆಗಲಿಲ್ಲ. ಈಗ ಕಾಂಗ್ರೆಸ್ಸಿನಲ್ಲೇ ಕೆಲವು ಪ್ರಮುಖರು ಅದನ್ನು ಗಂಭೀರವಾಗಿಯೇ ಪರಿಗಣಿಸಿದ್ದಾರೆ. ಪ್ರತಿಪಕ್ಷಗಳ ನಾಯಕರೂ ಸದನಗಳ ಹೊರಗಡೆ ಆ ವಿಚಾರವನ್ನು ಧಾರಾಳವಾಗಿ ಪ್ರಸ್ತಾಪಿಸುತ್ತಿದ್ದಾರೆ.
ಮಾಜಿ ವಿತ್ತಮಂತ್ರಿ, ಬಿಜೆಪಿ ನಾಯಕ ಯಶವಂತ ಸಿನ್ಹಾ ಅವರು, ಎಗ್ಗುಸಿಗ್ಗಿಲ್ಲದೇ 2007ರಲ್ಲಿ ಒಂದೇ ಏಟಿಗೆ 77000 ಕೋಟಿ ರುಪಾಯಿಗಳ ಸಾಲ ಮನ್ನ ಮಾಡಿದ್ದ ಚಿದಂಬರಮ್ ಅವರೇ, ವಿಪರೀತ ಖರ್ಚಿನ ಪ್ರವೃತ್ತಿಯನ್ನು ಆರಂಭಿಸಿದ್ದು ಎಂದಿದ್ದಾರೆ.
ಪ್ರಧಾನಿ ಮನಮೋಹನ ಸಿಂಗ್, ಕಲ್ಲಿದ್ದಲ ಗಣಿಗಳ ಹಂಚಿಕೆ ಅವ್ಯವಹಾರದಲ್ಲಿ ಹಲವು ಕಡತಗಳು ಕಳೆದು ಹೋಗಿರುವ ವಿಚಾರದಲ್ಲಿ ಆಡಿದ ಮಾತು ಗಮನಿಸಿ: ಪ್ರಧಾನಿ, ಕಡತಗಳನ್ನು ಜೋಪಾನವಾಗಿಡುವ ಸ್ಟೋರ್ ಕೀಪರ್ ಅಲ್ಲ.
ಬೇರೊಂದು ಟೀಕೆಗೆ ಉತ್ತರ ಕೊಡುವಾಗ ಪ್ರಧಾನಿ ಇಲ್ಲಿ ಬಿಜೆಪಿಯವರು ಏನಾದರೂ ಹೇಳಿಕೊಳ್ಳಲಿ, ನನಗೆ ಜಿ-20 ರಾಷ್ಟ್ರಕೂಟದ ಹಿರಿಯರೆಲ್ಲ ಗೌರವವನ್ನು ನೀಡುತ್ತಾರೆ ಎನ್ನುವ ಮಾತಿನಲ್ಲಿ ಇರುವ ಅರ್ಥವೇನು?
ಪ್ರಧಾನಿ ಮನಮೋಹನ ಸಿಂಗ್ ನಿಸ್ಸಂದೇಹವಾಗಿ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ, ಪಂಡಿತೋತ್ತಮರ ಸಾಲಿನಲ್ಲೇ ನಿಲ್ಲಲು ಅರ್ಹತೆ ಇರುವವರು. ಆದರೆ ಆ ಪಾಂಡಿತ್ಯದಿಂದ, ಭಾರತೀಯ ಜನಸ್ತೋಮಗಳಿಗೆ ಆಗಬೇಕಾದಷ್ಟು ಪ್ರಯೋಜನ ಆಗಿಲ್ಲ ಎನ್ನುವುದೂ ಕಠೋರ ಸತ್ಯವೇ.
ಅತ್ಯಗತ್ಯವಾದ ಕಾಯಿದೆ ರಚನೆಗೆ ಸರ್ಕಾರದ ಜತೆ ಸಹಕರಿಸಲು ಬಿಜೆಪಿ ಸಿದ್ಧವಾಗಿದ್ದರಿಂದ ಲೋಕಸಭೆ ಆಹಾರ ಭದ್ರತೆ ವಿಧೇಯಕ, ಭೂ ಸ್ವಾಧೀನಕ್ಕೆ ಪರಿಹಾರದ ವಿಧೇಯಕಗಳನ್ನು ಅಂಗೀಕರಿಸಿದೆ. ಆದರೆ ಶುಕ್ರವಾರದ ಸಂಘರ್ಷದ ಅನಂತರ ಸೋಮವಾರ ಸಮಾವೇಶಗೊಳ್ಳುವ ಸದನದಲ್ಲಿ ಏನು ಕಾದಿದೆಯೋ ಗೊತ್ತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

