ಸಂಪಾದಕೀಯ

ಅಮೆರಿಕದಿಂದ ಎಲ್ಲ ಬೇಕು, ಹೆಣ್ಣೇಕೆ ಬೇಡ?

Published On :

ಸೇಡಿಯಾಪು ಕೃಷ್ಣಭಟ್ಟರು ನಾಡು ಕಂಡ ಶ್ರೇಷ್ಠ ಲೇಖಕರಲ್ಲಿ ಒಬ್ಬರು. ಹನ್ನೊಂದು ಕಥಾ ಸಂಕಲನ, ಒಂದು ಕಥಾ ಸಂಗ್ರಹವೂ ಸೇರಿದಂತೆ ಒಟ್ಟು ಹನ್ನೆರಡು ಕೃತಿಗಳನ್ನು ರಚಿಸಿದ್ದಾರೆ. ಅವರ ತಥ್ಯದರ್ಶನ ಒಂದು ಉತ್ತಮವಾದ ಕೃತಿಯಾಗಿದೆ. ಅವರಿಗೆ 1994ರಲ್ಲಿ ಪಂಪ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗಿದೆ. ಅವರು ಉದಾತ್ತ ಮನಸ್ಸಿನ, ಅಷ್ಟೇ ಶಿಸ್ತಿನ ವ್ಯಕ್ತಿ. ಸುಳ್ಳು ಹೇಳಬಾರದೆಂಬ ಸಂಕಲ್ಪ ಹೊಂದಿದ್ದರು. ಅವರು ಶಾಲಾಶಿಕ್ಷಕರಾಗಿದ್ದಾಗ ಊರಿನ ಪ್ರಭಾವಿ ಪಾರುಪತ್ತೇಗಾರನ ಮಗ ಇವರ ತರಗತಿಗೆ ಬರುತ್ತಿದ್ದ. ಅವನು ತುಂಬಾ ಉಢಾಳನಾಗಿದ್ದು, ಗುರುಗಳಿಗೆ ಅವಿಧೇಯನಾಗಿದ್ದ. ಆದ್ದರಿಂದ ಅವನ ಪ್ರಗತಿ ಪತ್ರದಲ್ಲಿ ಸದರಿ ಬಾಲಕನ ನಡತೆ ಸರಿಯಿಲ್ಲವೆಂದು ಬರೆದು ಮನೆಗೆ ಕಳುಹಿಸಿದರು. ಅದನ್ನೋದಿದ ಆತನ ತಂದೆ, ಕುಪಿತನಾಗಿ ನಾಳೆ ಶಾಲೆಗೆ ಬಂದಾಗ ಆ ಮಾಸ್ಟರಿಗೆ ಕಾಲು ಮುರಿಯುತ್ತೇನೆ ಎಂದು ಹೇಳಿ ಕಳುಹಿಸಿದ. ಅದನ್ನು ಕೇಳಿದ ಕೃಷ್ಣ ಭಟ್ಟರು, ಕಾಲು ಮುರಿದರೆ ಆಸ್ಪತ್ರೆ ಸೇರುತ್ತೇನೆ, ನನಗೇನೂ ಭಯವಿಲ್ಲ ಎಂದು ಹೇಳಿಕಳುಹಿಸಿದರು! ಗಾಂಧೀಜಿಯವರ ಕರೆಗೆ ಓಗೊಟ್ಟು ಹರಿಜನ ಕೇರಿಗೆ ಹೋಗಿ ಸ್ವಚ್ಛಳಿಸಿ ಬರುತ್ತಿದ್ದರು. ಅವರ ಮಗ ಜಯರಾಮ ಅಮೆರಿಕದಿಂದ ಅಲ್ಲಿಯ ಹೆಣ್ಣನ್ನು ವಿವಾಹವಾಗಿ ಬಂದಾಗಲೂ ಆದರದಿಂದ ಸ್ವಾಗತಿಸಿದರು. "ಅಮೆರಿಕದಿಂದ ಎಲ್ಲ ಬೇಕು, ಹೆಣ್ಣು ಬೇಡ" ಎಂದರೆ ಹೇಗೆ ಎಂಬುದು ಅವರ ವಾದವಾಗಿತ್ತು. ಒಮ್ಮೆ ಮಣಿಪಾಲ ಸಾಹಿತ್ಯ ಸಂಘ ಸೇಡಿಯಾಪರ ಚಂದ್ರಖಂಡ ಮತ್ತು ಇತರ ಸಣ್ಣ ಕಾವ್ಯಗಳು ಪುಸ್ತಕವನ್ನು ಮರುಮುದ್ರಣ ಮಾಡಬೇಕೆಂದು ಬಯಸಿದಾಗ ಯಾರೋ ಒಬ್ಬರು ತಾವು ಅದಕ್ಕೆ ಖರ್ಚಾಗುವ ಹನ್ನೆರಡು ಸಾವಿರ ರು.ಗಳನ್ನು ನೀಡುವುದಾಗಿಯೂ, ಪುಸ್ತಕ ಮಾರಿದ ಮೇಲೆ ವಾಪಸ್ಸು ನೀಡಬೇಕೆಂಬ ಷರತ್ತಿನ ಮೇಲೆ ಕೃಷ್ಣಭಟ್ಟರಿಗೆ ಹಣ ನೀಡಿದ್ದರು. ಆದರೆ ಅವರು ನೀಡಿದ ಹಣ ದುರುಪಯೋಗವಾದಾಗ, ಕೃಷ್ಣ ಭಟ್ಟರಿಗೆ ತುಂಬಾ ಬೇಸರವೂ, ಕೋಪವೂ ಬಂತು. ತಮಗೆ ಬರುತ್ತಿದ್ದ ನಿವೃತ್ತಿವೇತನ, ಉಳಿತಾಯದ ಹಣ ಎಲ್ಲ ಸೇರಿಸಿ ಹನ್ನೆರಡು ಸಾವಿರ ಭರ್ತಿ ಮಾಡಿ ಒಂದು ಚೆಕ್ಕನ್ನು ಹಣ ಕೊಟ್ಟ ವ್ಯಕ್ತಿಗೆ ವಾಪಸ್ಸು ನೀಡಿ, ಹೀಗೆ ಉದ್ಗರಿಸಿದರು, "ಇನ್ನು ನಾನು ಸತ್ರೂ ಬೇಜಾರಿಲ್ಲ, ಯಾರ ಋಣವನ್ನೂ ನಾನಿಂದು ಇಟ್ಟುಕೊಂಡಿಲ್ಲ" ಎಂದು. ಇದು ಕೃಷ್ಣ ಭಟ್ಟರ ಸ್ವಾಭಿಮಾನವನ್ನೂ, ಪ್ರಾಮಾಣಿಕ ನಡವಳಿಕೆಯನ್ನೂ, ಕರ್ತವ್ಯ ಪ್ರಜ್ಞೆಯನ್ನೂ ಸೂಚಿಸುತ್ತದೆ. ಇಂತಹ ಹಿರಿಯರು ಬದುಕಿದ ರೀತಿ ನಮಗೆ ದಾರಿದೀಪವಾಗಬೇಕು.

- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.