ಇಂದಿಗೆ ಜನ್ಮ ಸಾರ್ಥಕವಾಯಿತು
ಮೈಸೂರಿನ ಆಸ್ಥಾನ ವಿದ್ವಾಂಸರಾಗಿದ್ದ ವೆಂಕಟಗಿರಿಯಪ್ಪನವರು ಪ್ರಸಿದ್ಧ ವೈಣಿಕರಾಗಿದ್ದವರು. ವೀಣೆ ಶೇಷಣ್ಣನವರ ಶಿಷ್ಯರಾಗಿ ಅವರಿಂದ ವೀಣೆ ಕಲಿತು ಪ್ರಸಿದ್ಧರಾಗಿದ್ದರು. ಕೊಡುಗೈ ದಾನಿಗಳೂ ಆಗಿದ್ದ ವೆಂಕಟಗಿರಿಯಪ್ಪನವರು ಯಾಚನೆಗಾಗಿ ಬಂದ ಯಾರನ್ನೂ ನಿರಾಸೆಗೊಳಿಸಿದ್ದಿಲ್ಲ. ಅವರಲ್ಲಿ ಶಿಷ್ಯವೃತ್ತಿಯನ್ನು ಪಡೆದು ಪ್ರಸಿದ್ಧರಾದ ಕೆಲವರು ದೊರೆಸ್ವಾಮಿ ಅಯ್ಯಂಗಾರರು, ಆರ್.ಎನ್. ದೊರೆಸ್ವಾಮಿ ಮತ್ತು ಎಂ.ಜೆ.ಶ್ರೀನಿವಾಸ ಅಯ್ಯಂಗಾರರು. ವೆಂಕಟಗಿರಿಯಪ್ಪನವರು ಕೆಲಬಾರಿ ಮಹಾರಾಜರ ಅಪ್ಪಣೆ ಪಡೆದು ಬೇರೆ ಬೇರೆ ರಾಜರ ಆಸ್ಥಾನದಲ್ಲಿ ತಮ್ಮ ಪ್ರತಿಭೆಯನ್ನು ಬೆಳಗಿ ಮೈಸೂರಿಗೆ ಹೆಸರು ತಂದಿದ್ದೂ ಉಂಟು. 1930ರ ಒಂದು ದಿನ ತಿರುವಾಂಕೂರಿನ ಮಹಾರಾಣಿಯವರಿಂದ ಆಸ್ಥಾನದಲ್ಲಿ ವೀಣೆ ನುಡಿಸಲು ಕರೆಬಂತು. ವೆಂಕಟಗಿರಿಯಪ್ಪನವರು ತಿರುವಾಂಕೂರಿಗೆ ಹೋಗಿ ತಮ್ಮ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಿದರು. ಅವರ ವೀಣಾ ವಾದನವನ್ನು ಕೇಳಲು ರಾಣಿಯ ಖಾಸಾ ಸಿಬ್ಬಂದಿ, ರಾಜಮನೆತನದವರು, ದಿವಾನ್ ಸಿ.ಪಿ.ರಾಮಸ್ವಾಮಿ ಅಯ್ಯರ್ ಮುಂತಾದವರು ಅತ್ಯಂತ ಆಸ್ಥೆಯಿಂದ ಅಲ್ಲಿ ನೆರೆದಿದ್ದರು. ಸುಮಾರು ಮೂರು ಗಂಟೆಕಾಲ ಕಚೇರಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಎಲ್ಲರೂ ಅದೆಷ್ಟು ತಲ್ಲೀನರಾಗಿ ಕುಳಿತಿದ್ದರೆಂದರೆ, ವೀಣೆಯ ಮಧುರನಾದದ ಹೊರತು ಬೇರೆ ಯಾವ ಶಬ್ದವೂ ಅಲ್ಲಿ ಕೇಳುತ್ತಿರಲಿಲ್ಲ. ಯಾವುದೋ ಭಾವನಾ ಲೋಕದಲ್ಲಿ ವಿಹರಿಸುವವರಂತೆ ಎಲ್ಲರೂ ವೀಣಾವಾದನವನ್ನು ಸವಿಯುತ್ತಿರುವಾಗ ಮಹಾರಾಣಿ ಸೇತೂ ಪಾರ್ವತಿಬಾಯಿ ಎದ್ದವರೇ ಸೀದಾ ಒಳಗೆ ಹೋಗಿ ಒಂದು ದೊಡ್ಡ ಬೆಳ್ಳಿಯ ತಟ್ಟೆಯಲ್ಲಿ ಅದೇ ತಾನೆ ಕಿತ್ತು ತಂದ ಜಾಜಿಯ ಹೂಗಳನ್ನು ತಂದು, ವೆಂಕಟಗಿರಿಯಪ್ಪನವರ ಬಳಿ ಬಂದು ಒಂದೆರಡು ನಿಮಿಷ ವೀಣಾವಾದನವನ್ನು ನಿಲ್ಲಿಸುವಂತೆ ಪ್ರಾರ್ಥಿಸಿದರು. ಅತ್ಯಂತ ಶ್ರದ್ಧೆಯಿಂದ, ದೇವರನ್ನು ಪೂಜಿಸುವಂತೆ, ವೆಂಕಟಗಿರಿಯಪ್ಪನವರಿಗೆ ಮತ್ತು ಅವರು ನುಡಿಸುತ್ತಿದ್ದ ವೀಣೆಗೆ ಪೂಜಿಸಲಾರಂಭಿಸಿದರು. ಅದನ್ನು ನೋಡಿ ಎಲ್ಲರಿಗೂ ಅತ್ಯಾಶ್ಚರ್ಯ. ವೀಣೆಯ ಮೇಲೆ ಬಿದ್ದ ಒಂದೆರಡು ಹೂಗಳನ್ನು ತೆಗೆದುಕೊಂಡು ಅದನ್ನು ಕಣ್ಣಿಗೊತ್ತಿಕೊಂಡು ತಮ್ಮ ತಲೆಯಲ್ಲಿ ಸಿಕ್ಕಿಸಿಕೊಂಡರು. ಸ್ವತಃ ವೀಣಾ ವಾದಕಿಯಾಗಿದ್ದ ಮಹಾರಾಣಿಯವರು ವೆಂಕಟಗಿರಿಯಪ್ಪನವರ ವೀಣಾವಾದನಕ್ಕೆ ಮಾರುಹೋಗಿ ಗೌರವಿಸಿದ ಪರಿ ಎಲ್ಲರನ್ನೂ ಸ್ಥಂಭೀಭೂತರನ್ನಾಗಿ ಮಾಡಿತು. ನಂತರ ಮುಂದುವರಿಸಲು ವಿನಂತಿಸಿದರು. ಇದು ಒಬ್ಬ ಕಲಾವಿದನಿಗೆ ಇನ್ನೊಬ್ಬ ಕಲಾವಿದರು ತೋರುವ ಗೌರವವಾಗಿತ್ತು. ಇದನ್ನು ಕೃತಜ್ಞತೆಯಿಂದ ಸ್ಮರಿಸಿದ ವೆಂಕಟಗಿರಿಯಪ್ಪನವರು ಇಂದಿಗೆ ತಮ್ಮ ಜನ್ಮ ಸಾರ್ಥಕವಾಯಿತು ಎಂದು ತಿಳಿಸಿದಾಗ ಎಲ್ಲರೂ ಕರತಾಡನದ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡರು. ಕಾರ್ಯಕ್ರಮ ಮುಗಿದ ಮೇಲೆ ವೆಂಕಟಗಿರಿಯಪ್ಪನವರಿಗೆ ಒಂದು ಸಾವಿರ ಬೆಳ್ಳಿ ರುಪಾಯಿ, ಜೋಡಿ ಶಾಲು ಮತ್ತು ರತ್ನ ಖಚಿತ ತೋಡನ್ನು ತೊಡಿಸಿ, ಸನ್ಮಾನಿಸಲಾಯಿತು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

