ನನಗೆ ಶತ್ರುಗಳೇ ಇಲ್ಲವಲ್ಲ?
ಮಹಾತ್ಮ ಗಾಂಧಿಯವರ ತತ್ವ ಸಿದ್ಧಾಂತವನ್ನು ಭಾರತೀಯರಷ್ಟೇ ಅಲ್ಲ ಬ್ರಿಟನ್ನಿನವರೂ ಗೌರವಿಸುತ್ತಿದ್ದರು. ಲಾರ್ಡ್ ಫೆನ್ನರ್ ಬ್ರಾಕ್ವೆ ಬ್ರಿಟನ್ನಿನ ಲೇಬರ್ ಪಕ್ಷದ ಧುರೀಣ. ಕಾರ್ಮಿಕರ ಆರ್ಥಿಕ ಸ್ಥಿತಿಯ ಸುಧಾರಣೆ ಮತ್ತು ಸೌಕರ್ಯಗಳನ್ನು ಒದಗಿಸಲು ಹೋರಾಡಿದ ಕಾರ್ಮಿಕ ನಾಯಕ. ಅವರು ಭಾರತಕ್ಕೆ ಸ್ವಾತಂತ್ರ ನೀಡಬೇಕೆಂದು ಪ್ರತಿಪಾದಿಸಿದವರಲ್ಲಿ ಪ್ರಮುಖರು. ಲೇಬರ್ ಪಕ್ಷದಿಂದ ಚುನಾಯಿತರಾಗಿ ಬ್ರಿಟನ್ ಪಾರ್ಲಿಮೆಂಟ್ ಸದಸ್ಯರಾಗಿದ್ದರು. ಮೂವತ್ತರ ದಶಕದಲ್ಲಿಯೇ ಅವರು ಗಾಂಧೀ ಟೋಪಿ ಧರಿಸಿ ಬ್ರಿಟನ್ ಪಾರ್ಲಿಮೆಂಟಿಗೆ ಆಗಮಿಸಿ, ಭಾರತಕ್ಕೆ ಸ್ರ್ಯಾತಂತ್ರ್ಯ ನೀಡಲೇಬೇಕೆಂದು ಆಗ್ರಹ ಪಡಿಸಿದ್ದರು. ಅಂದು ಅವರು ಧರಿಸಿದ ಟೋಪಿಯನ್ನು ಇಂದು ಲಂಡನ್ನಿನ ಭಾರತೀಯ ವಿದ್ಯಾಭವನದಲ್ಲಿ ರಕ್ಷಿಸಿ ಇಡಲಾಗಿದೆ. 1972ರಲ್ಲಿ ಲಂಡನ್ನಿನಲ್ಲಿ ಭಾರತೀಯ ವಿದ್ಯಾಭವನ ಪ್ರಾರಂಭವಾದಾಗ ಅದರ ಪೋಷಕ ಸದಸ್ಯತ್ವ ಪಡೆದು ಅದರ ಸರ್ವಾಂಗೀಣ ಬೆಳವಣಿಗೆಗೆ ಸಹಕರಿಸಿದರು. ಭವನವು ನನ್ನ ದೈವ ಮಂದಿರ ಎಂದು ಸದಾ ಹೇಳುತ್ತಿದ್ದರು. ಗಾಂಧೀಜಿಯವರ ಸ್ನೇಹ ಮತ್ತು ಅದ್ಭುತ ವ್ಯಕ್ತಿತ್ವವನ್ನು ಸದಾ ಗೌರವಿಸುತ್ತಿದ್ದ ಬ್ರಾಕ್ವೆ ಒಮ್ಮೆ ಗಾಂಧೀಜಿಯವರನ್ನು ಭೇಟಿಮಾಡಲು ವಾರ್ಧಾಕ್ಕೆ ಆಗಮಿಸಿದ್ದರು. ಅಲ್ಲಿ ಗಾಂಧೀಜಿಯವರ ಆಶ್ರಮದಲ್ಲಿ ಅವರ ಅತಿಥಿಗಳಾಗಿ ಸಹ ತಂಗಿದ್ದರು. ಗಾಂಧೀಜಿ ವಾರ್ಧಾ ಆಶ್ರಮದಲ್ಲಿ ಚರಕ ನೂಲುತ್ತಾ ಕುಳಿತಿದ್ದರು. ಅವರನ್ನು ನೋಡುತ್ತಿದ್ದರೆ ಯೇಸುಕ್ರಿಸ್ತನನ್ನು ನೋಡಿದಂತೆ ಬ್ರಾಕ್ವೆಯವರಿಗೆ ಭಾಸವಾಗುತ್ತಿತ್ತು. ಹೀಗಾಗಿ ಅವರನ್ನೇ ಭಕ್ತಿಭಾವದಿಂದ ನೋಡುತ್ತಾ ಕುಳಿತರು. ಸ್ವಲ್ಪ ಸಮಯದ ನಂತರ ಗಾಂಧೀಜಿಯವರಿಗೆ ಅವರೊಂದು ಪ್ರಶ್ನೆ ಕೇಳಿದರು. "ಯೇಸು ಹೇಳುತ್ತಾನೆ, ನಿನ್ನನ್ನು ನೀನು ಪ್ರೀತಿಸಿಕೊಳ್ಳುವಂತೆ ನಿನ್ನ ಶತ್ರುವನ್ನೂ ಪ್ರೀತಿಸು ಎಂದು. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?"
ಗಾಂಧೀಜಿ ತಕ್ಷಣ ಯಾವ ಉತ್ತರವನ್ನೂ ನೀಡದೆ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಆದರೆ ಬ್ರಾಕ್ವೆ ಬಿಟ್ಟರೆ ತಾನೆ? ಮತ್ತೆ ಅದೇ ಪ್ರಶ್ನೆಯನ್ನು ಕೇಳಿದರು. ಆಗ ಗಾಂಧೀಜಿ ನೂಲುವುದನ್ನು ನಿಲ್ಲಿಸಿ, ಹೇಳಿದರು, "ನನಗೆ ಶತ್ರುವೇ ಇಲ್ಲವಲ್ಲಾ?" ಗಾಂಧೀಜಿಯವರ ಉತ್ತರ ಕೇಳಿದ ಫೆನ್ನರ್ ಬ್ರಾಕ್ವೆಗೆ ಅಚ್ಚರಿಯಾಯಿತು. ತಮ್ಮನ್ನು ದಬ್ಬಾಳಿಕೆಯಿಂದ ಆಳುತ್ತಿರುವ ಬ್ರಿಟಿಷರನ್ನೂ ಶತ್ರುಗಳೆಂದು ಪರಿಗಣಿಸದೆ ಇದ್ದ ಅವರ ವಿಶಾಲ ಹೃದಯವನ್ನು ಅಪಾರವಾಗಿ ಮೆಚ್ಚಿಕೊಂಡರು, ಅಂದಿನಿಂದ ಗಾಂಧೀಜಿಯವರ ಬಗ್ಗೆ ಇದ್ದ ಗೌರವಾದರಗಳು ಅವರಿಗೆ ಇಮ್ಮಡಿಯಾದವು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

